ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೀಸಲಾತಿ ಕೊಡದಿದ್ದರೆ ಬಾರುಕೋಲು ಚಳವಳಿ: ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

ಹರಿಹರ, ಕೂಡಲಸಂಗಮ ಪಂಚಮಸಾಲಿ ಪೀಠಗಳಿಂದ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ
Last Updated 26 ಜನವರಿ 2021, 5:07 IST
ಅಕ್ಷರ ಗಾತ್ರ

ಹರಪನಹಳ್ಳಿ: ಹರಿಹರ ಮತ್ತು ಕೂಡಲಸಂಗಮ ಪಂಚಮಸಾಲಿ ಪೀಠಗಳು ಹರಪನಹಳ್ಳಿಯಲ್ಲಿ ಒಂದಾಗುವ ಮೂಲಕ ಪಂಚಮಸಾಲಿ ಜನಾಂಗಕ್ಕೆ 2 ‘ಎ’ ಮೀಸಲಾತಿಯನ್ನು ಜ.28ರೊಳಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ ದಾವಣಗೆರೆಯಿಂದಲೇ ಬಾರುಕೋಲು ಚಳವಳಿ ಆರಂಭಿಸುವುದಾಗಿ ಎರಡು ಪೀಠಾಧ್ಯಕ್ಷರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ಹೋರಾಟ ನೆಲಮಂಗಲ ತಲುಪಲು ಬಿಡುವುದಿಲ್ಲ ಎಂದು ಕೆಲವರು ಬೆದರಿಕೆ ಹಾಕುತ್ತಿದ್ದಾರೆ. ಅದು ಹೇಗೆ ಪಾದಯಾತ್ರೆ ತಡೆಯುತ್ತಾರೋ ನಾವು ನೋಡುತ್ತೇವೆ. ನಾವು ರಾಜಕೀಯ ಮೀಸಲಾತಿ ಕೇಳುತ್ತಿಲ್ಲ. ಶಿಕ್ಷಣ, ಉದ್ಯೋಗದಲ್ಲಿ ಕೇಳುತ್ತಿದ್ದೇವೆ. ಈಗ ಹರಿಹರ ಪೀಠದ ಪೂಜ್ಯರ ಬಲ ನಮಗೆ ದೊಡ್ಡ ಶಕ್ತಿ ತಂದಿದೆ’ ಎಂದು ಹೇಳಿದರು.

ವಚನಾನಂದ ಸ್ವಾಮೀಜಿ, ‘ಈಗ ಎರಡು ಪೀಠಗಳು ಸಂಗಮವಾಗಿವೆ. ಈ ಸಂಗಮ ಇತಿಹಾಸದ ಪುಟದಲ್ಲಿ ಸೇರಿದೆ’ ಎಂದರು.

‘ನಮ್ಮೆರಡು ಕಣ್ಣುಗಳು ಹರಿಹರ, ಕೂಡಲಸಂಗಮ ಪಂಚಮಸಾಲಿ ಪೀಠಗಳೆಂದು ಈಗ ಎಲ್ಲರೆದುರು ಹೆಮ್ಮೆಯಿಂದ ಹೇಳಿ. ಹರಿಹರ ಪೀಠ ಅದು ನಿಮ್ಮ ಪೀಠ. ಕೂಡಲ ಸಂಗಮ ಪೀಠ ಅದು ನಮ್ಮ ಪೀಠ. ಎರಡು ಭಾಗದಲ್ಲಿ ಟ್ರಸ್ಟಿಗಳು ಕಷ್ಟಪಟ್ಟು ಎರಡು ಪೀಠಗಳನ್ನು ಕಟ್ಟಿದ್ದಾರೆ. ಪೀಠಾಧ್ಯಕ್ಷರ ಕಡೆಗೆ ಬೆರಳು ಮಾಡದೇ ಸಮಾಜದ ಮುಖಂಡರು ಒಂದಾಗಿ, ಹಕ್ಕು ಪಡೆಯಲು ಒಗ್ಗಟ್ಟಿನಿಂದ ಹೋರಾಡಿ’ ಎಂದು ಮುಖಂಡರಿಗೆ ಸಲಹೆ ನೀಡಿದರು.

‘ಹರಿಹರ, ಕೂಡಲಸಂಗಮ ಮಠ ಸಮಾಜದ ಪೀಠ. ಅದು ನಮಗೆ ಮಾತ್ರ ಸೀಮಿತವಲ್ಲ. ಪಂಚಮಸಾಲಿ ಮಠಗಳು ಜನರಲ್ಲಿ ಇನ್ಮುಂದೆ ಕಣ್ಣೀರು ತರಿಸುವುದಿಲ್ಲ. ಆನಂದಭಾಷ್ಪ ತರಿಸುತ್ತವೆ. ನಾವಿಬ್ಬರೂ ಎರಡು ಎತ್ತುಗಳಾಗಿ ಸಮಾಜಕ್ಕೆ ದುಡಿಯೋಣ. ನಮ್ಮಿಬ್ಬರ ನಡುವೆ ಗೋಡೆ ಕಟ್ಟುವ ಕೆಲಸ ಯಾರೂ ಮಾಡಬೇಡಿ. ಅಂಥವರ ಬಗ್ಗೆ ನಾವಿಬ್ಬರೂ ಜಾಗೃತರಾಗಿದ್ದು, ಸಮಾಜ ಬೆಳೆಸಬೇಕಾಗಿದೆ. ಎರಡು ಪೀಠಗಳಿಂದ ಸಮಾಜ ಕಟ್ಟಿ ಬೆಳೆಸುವ ಕೆಲಸ ಮಾಡೋಣ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಪೀಠಕ್ಕೆ ಬನ್ನಿ ಎಂದು ಬಹಿರಂಗವಾಗಿ ಆಹ್ವಾನಿಸಿದರು.

‘ನಾವು ಎಂಥವರನ್ನು ಬಿಟ್ಟಿಲ್ಲ ಈಗ ಪೀಠಗಳು ಒಂದಾಗಿವೆ. ಅದು ಹೇಗೆ ಮೀಸಲಾತಿ ಕೊಡಲ್ಲ ನಾವು ನೋಡುತ್ತೇವೆ. ಈಗಾಗಲೇ ನಾನು ಸಹ ಪಂಚಮಸಾಲಿ ಪೀಠಕ್ಕೆ 2ಎ ಮೀಸಲಾತಿ ಸಂಬಂಧ ರಾಜ್ಯ ಸಚಿವರು, ಶಾಸಕರ ಚರ್ಚಿಸಿದ್ದೇನೆ. ದೆಹಲಿಗೆ ತೆರಳಿ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ತಿಳಿಸಿದರು.

ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ‘ಮುಖ್ಯಮಂತ್ರಿ ಯಡಿಯೂರಪ್ಪನವರೇ ಪೂಜ್ಯರೆದುರು ಕೊಟ್ಟ ಮಾತು ಉಳಿಸಿಕೊಳ್ಳಿ. ದಾವಣಗೆರೆ ನಗರದಲ್ಲಿ ನಡೆಯುವ ಬಹಿರಂಗ ಸಭೆಗೆ ನಮ್ಮ ಸಮಾಜದ ಎಲ್ಲ ಶಾಸಕರು ಬಂದು ತಮ್ಮ ನಿಲುವು ಸ್ಪಷ್ಟಪಡಿಸಿ’ ಎಂದು ಹೇಳಿದರು.

‘ಎಷ್ಟೇ ಪೀಠ ಕಟ್ಡಿದರೂ ಇಬ್ಬರೂ ಸ್ವಾಮೀಜಿ ಒಂದಾಗಿರಿ. ಸಮಾಜ ನಿಮ್ಮ ಜತೆ ಇರುತ್ತದೆ’ ಎಂದು ಭರವಸೆ ನೀಡಿದರು.

ಶಾಸಕ ಜಿ. ಕರುಣಾಕರ ರೆಡ್ಡಿ, ‘ನಾನು ಹಿಂದೆ ಕಂದಾಯ ಸಚಿವನಾಗಿದ್ದಾಗ, ಮುರುಗೇಶ್ ನಿರಾಣಿ ಅವರೊಟ್ಟಿಗೆ ಬಂದು ಸಮಾಜದವರು ನಡೆಸಿದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದೆ. ಈಗಲೂ ಪಂಚಮಸಾಲಿ ಸಮಾಜದೊಂದಿಗೆ ಇದ್ದೇನೆ’ ಎಂದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ವೇದಿಕೆಯಲ್ಲಿ ಮಾತನಾಡುವುದಕ್ಕೆ ಮುಂದಾಗುತ್ತಿದ್ದಂತೆ ಜನರು ಕೇಕೆ ಹಾಕಿ ಗದ್ದಲ ಎಬ್ಬಿಸಿದರು. ಬಳಿಕ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮಾಧಾನಪಡಿಸಿದರು.

ಸಂಸದ ವೈ. ದೇವೇಂದ್ರಪ್ಪ, ಎಚ್.ಎಸ್.ನಾಗರಾಜ್, ಎನ್. ಕೊಟ್ರೇಶ್, ಪೂಜಾರ ಚಂದ್ರಶೇಖರ ಮಾತನಾಡಿದರು. ಎಂ.ಟಿ. ಸುಭಾಷ್ ಚಂದ್ರ, ಪೂಜಾರ ಶಶಿಧರ್, ಭದ್ರವಾಡಿ ಚಂದ್ರಪ್ಪ, ಅನಂತ ನಾಯ್ಕ್, ವೀರೇಶ್, ಎಂ.ರಾಜಶೇಖರ, ಬಾಗಳಿ ಕೊಟ್ರೇಶ್, ಎಂ.ಪಿ.ವೀಣಾ, ವೀಣಾ ಕಾಶಪ್ಪನವರ್, ವಿರಾಜ್ ಪಾಟೀಲ್, ಪ್ರವೀಣ್,ವಿವಿಧ ಸಮಾಜದ ಮುಖಂಡರು
ಇದ್ದರು.

ಎಂ.ಪಿ. ಪ್ರಕಾಶ್‌ ಸಮಾಜಮುಖಿ ಟ್ರಸ್ಟ್‌ನಿಂದ ಎಂ.ಪಿ. ವೀಣಾ ₹ 1 ಲಕ್ಷವನ್ನು ಹೋರಾಟಕ್ಕೆ ದೇಣಿಗೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT