ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಸ್ವಾಭಿಮಾನಿ ಎಸ್‌ಸಿ–ಎಸ್‌ಟಿ. ಒಕ್ಕೂಟದ ವಿಚಾರ ಸಂಕಿರಣದಲ್ಲಿ ಮಾದಾರ ಚನ್ನಯ್ಯ ಸ್ವಾಮೀಜಿ

ಪರಿಶಿಷ್ಟರು ಒಂದಾದರೆ ದೇಶದ ಚಿತ್ರಣ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪರಿಶಿಷ್ಟ ಸಮುದಾಯ ಒಂದಾದರೆ ರಾಜ್ಯವಷ್ಟೇ ಅಲ್ಲ, ದೇಶದ ಚಿತ್ರಣವನ್ನೇ ಬದಲಾಯಿಸಬಹುದು ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ಸ್ವಾಭಿಮಾನಿ ಎಸ್‌ಸಿ-ಎಸ್‌ಟಿ ಒಕ್ಕೂಟದಿಂದ ನಗರದ ಸಾಯಿಬಾಬಾ ಸಮುದಾಯ ಮಂದಿರದಲ್ಲಿ ಭಾನುವಾರ ನಡೆದ ‘ಎಸ್‌ಸಿ- ಎಸ್‌ಟಿ ಸಮುದಾಯಗಳು ಏಕೆ ಒಂದಾಗಬೇಕು’ ಎಂಬ ವಿಚಾರಸಂಕಿರಣದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗರ್ಭಗುಡಿ ಸಂಸ್ಕೃತಿಯಿಂದಾಗಿ ಪರಿಶಿಷ್ಟ ಸಮುದಾಯಗಳನ್ನು ಮಠ-ಮಂದಿರಗಳಿಂದ ದೂರ ಇಡಲಾಗಿತ್ತು. ಈ ಕಾರಣದಿಂದಾಗಿ ಪರಿಶಿಷ್ಟ ಸಮುದಾಯದ ಹಲವು ಹೋರಾಟಗಾರರು ಹಾಗೂ ಚಿಂತಕರು ಮಠ ಸಂಸ್ಕೃತಿಯಿಂದ ದೂರ ಉಳಿದರು. ಈಗ ಮಠಗಳ ಮೂಲಕವೇ ರಾಜಕೀಯ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ನಾವು ಮೌನವಾಗಿದ್ದರೆ, ನಮ್ಮ ಸಮುದಾಯದ ರಾಜಕಾರಣಿಗಳು ಬೇರೆಯವರ ಮಠಗಳಿಗೆ ಹೋಗುವ ಪರಿಸ್ಥಿತಿ ಬರುತ್ತದೆ’ ಎಂದು ತಿಳಿಸಿದರು.

‘ಪರಿಶಿಷ್ಟ ರಾಜಕಾರಣಿಗಳು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಗೆಲ್ಲಲು ಬೇರೆಯವರನ್ನು ಅವಲಂಬಿಸಿದ್ದಾರೆ. ಎಸ್‌ಸಿಯಲ್ಲಿ 101 ಜಾತಿಗಳು, ಎಸ್‌ಟಿಯಲ್ಲಿ 50 ಜಾತಿಗಳು ಒಟ್ಟು 151 ಸಮುದಾಯಗಳಿವೆ. ಈ ಎಲ್ಲ ಸಮುದಾಯಗಳು ಒಂದಾದರೆ ಸಾಮಾನ್ಯ ಕ್ಷೇತ್ರಗಳ ರಾಜಕಾರಣಿಗಳೂ ನಮ್ಮ ಮಠಗಳ ಎದುರು ನಿಲ್ಲುವಂತಾಗಲಿದೆ’ ಎಂದರು.

ದೇಶಕ್ಕೆ ದೊರೆತ ಮೊದಲ ಸ್ವಾತಂತ್ರ್ಯ, ಜಾತಿ ಕಾರಣದಿಂದ ಇನ್ನೂ ಪರಿಶಿಷ್ಟರಿಗೆ ತಲುಪಿಲ್ಲ. ಈಗ ಎರಡನೇ ಹಂತದ ಸ್ವಾತಂತ್ರ್ಯ ಬೇಕಾಗಿದೆ. ಪರಿಶಿಷ್ಟ ರಾಜಕೀಯ ಮುಖಂಡರು, ಮೇಲ್ವರ್ಗದ ಹಿಡಿತದಲ್ಲಿರುವ ವ್ಯವಸ್ಥೆಯ ಕಬ್ಜಾದಿಂದ ಹೊರ ಬರಬೇಕಿದೆ ಎಂದು ಹೇಳಿದರು.

ಈ ಹೋರಾಟದಲ್ಲಿ ವೈಯಕ್ತಿಕ ಅಜೆಂಡಾ ಬೇಡ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ಅಂಥ ವಿಷಯಗಳನ್ನೂ ಈ ವೇದಿಕೆಯಲ್ಲಿ ಚರ್ಚೆಗೆ ತರಬಾರದು. ಇಲ್ಲಿ ಪರಿಶಿಷ್ಟರು ಒಂದಾಗಲು ಮಾತ್ರ ಚರ್ಚೆ ನಡೆಯಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ಮುಖಂಡ ಮುನಿಸಂದ್ರ ಮಾರಪ್ಪ, ‘ರಾಜ್ಯದಲ್ಲಿ ಲಿಂಗಾಯತರು 14 ಬಾರಿ, ಒಕ್ಕಲಿಗರು 10 ಬಾರಿ, ಹಿಂದುಳಿದ ವರ್ಗದವರು ಐದು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಶೇ 30ರಷ್ಟು ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಒಮ್ಮೆಯೂ ಮುಖ್ಯಮಂತ್ರಿ ಆಗಿಲ್ಲ. ಇದು ಪರಿಶಿಷ್ಟ ಸಮುದಾಯ ಒಂದಾಗಬೇಕಾದ ಅಗತ್ಯ ತೋರಿಸುತ್ತದೆ’ ಎಂದು ವಿಶ್ಲೇಷಿಸಿದರು.

ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮೈಸೂರು ಗುರು ಪೆದ್ದಲಿಂಗಮಠದ ಜ್ಞಾನ ಪ್ರಕಾಶ ಸ್ವಾಮೀಜಿ, ಚಿತ್ರದುರ್ಗ ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಬಂಜಾರ ಗುರುಪೀಠದ ಸಂತ ಸೇವಾಲಾಲ್ ಸ್ವಾಮೀಜಿ, ಚಿತ್ರದುರ್ಗ ಕೇತೇಶ್ವರ ಮಠದ ಬಸವ ಕೇತೇಶ್ವರ ಸ್ವಾಮೀಜಿ, ಮೈಸೂರಿನ ಶಿವಲಿಂಗ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಉಪಸ್ಥಿತರಿದ್ದರು.

ಹೋರಾಟಗಾರರಾದ ಗೋಪಿನಾಥ್, ಮಾವಳ್ಳಿ ಶಂಕರ್, ಬಸವರಾಜ ನಾಯಕ, ಬಿ. ಮೂರ್ತಿ, ಯಶೋದಮ್ಮ, ಅನಂತ ನಾಯ್ಕ್‌, ಆದರ್ಶ ಎಲ್ಲಪ್ಪ, ಪಿಳ್ಳಪ್ಪ, ಕಿರಣ್ ಕುಮಾರ್, ಶಿವಮೊಗ್ಗದ ಗುರುಮೂರ್ತಿ, ಡಾ. ವೈ.ರಾಮಪ್ಪ, ಪ್ರೊ. ಎ.ಬಿ. ರಾಮಚಂದ್ರಪ್ಪ, ಬಿ. ವೀರಣ್ಣ, ಹೊದಿಗೆರೆ ರಮೇಶ್‌, ಎಸ್.ಕೆ. ಬಸವಂತಪ್ಪ, ಮಾಯಕೊಂಡ ಆನಂದಪ್ಪ, ರಾಘವೇಂದ್ರ ನಾಯ್ಕ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು