ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ತವ್ಯಪ್ರಜ್ಞೆ ಇದ್ದಲ್ಲಿ ರಾಷ್ಟ್ರದ ಅಭಿವೃದ್ಧಿ: ಪತ್ರಕರ್ತ ಎಚ್. ಬಿ. ಮಂಜುನಾಥ್

Published 7 ಫೆಬ್ರುವರಿ 2024, 7:49 IST
Last Updated 7 ಫೆಬ್ರುವರಿ 2024, 7:49 IST
ಅಕ್ಷರ ಗಾತ್ರ

ದಾವಣಗೆರೆ: ‘ಸಂವಿಧಾನದಲ್ಲಿ ಹಕ್ಕುಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ಕರ್ತವ್ಯಗಳಿಗೂ ಕೊಟ್ಟಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕರ್ತವ್ಯ ಪ್ರಜ್ಞೆಯ ಜಾಗೃತಿ ಹಾಗೂ ಅನುಷ್ಠಾನಗಳು ಸುಸಂಸ್ಕೃತಿಯ ಲಕ್ಷಣಗಳು’ ಎಂದು ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ಹೇಳಿದರು.

ನಗರದ ಸರ್ಕಾರಿ ಮಾಜಿ ಪುರಸಭೆ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಎನ್.ಎಸ್.ಎಸ್ ಹಾಗೂ ಇಕೋ ಕ್ಲಬ್ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿರುವ ಯುವ ಸಂಪತ್ತಿನ ಅಗಾಧತೆ ಹಾಗೂ ಸಾಮರ್ಥ್ಯದ ಬಗ್ಗೆ ವಿಶ್ವವೇ ಗಮನಿಸುತ್ತಿದ್ದರೂ ನಮ್ಮ ಯುವಕ ಯುವತಿಯರಿಗೆ ಏಕೋ ಸ್ವಸಾಮರ್ಥ್ಯದ ಅರಿವಾಗುತ್ತಿಲ್ಲ. ಬದಲಾಗಿ ಮೊಬೈಲ್ ಘೀಳಿನಲ್ಲಿ ಕೊಚ್ಚಿ ಹೋಗುತ್ತಿದ್ದು, ಯಾವುದೇ ಆಧುನಿಕ ತಂತ್ರಜ್ಞಾನ ಸಾಧನ ಸಲಕರಣೆಗಳು ಕೇವಲ ಮನರಂಜನೆಗೆ ಸೀಮಿತವಾದಲ್ಲಿ ಅಪಾಯ. ಬದಲಾಗಿ ಉತ್ತಮ ಕಾರ್ಯಗಳಿಗೆ ಬಳಕೆಯಾದಲ್ಲಿ ಮಾತ್ರ ಸಾರ್ಥಕತೆ ಸಾಧ್ಯ’ ಎಂದು ಹೇಳಿದರು.

‘ಐದು ಟ್ರಿಲಿಯನ್ ಡಾಲರ್‌ಗಳ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲಿಡುತ್ತಿರುವ ಭಾರತದಲ್ಲಿ ವಿಫುಲ ಅವಕಾಶಗಳಿದ್ದು, ಯುವಕರು ಧೃತಿಗೆಡಬೇಕಾಗಿಲ್ಲ. ಶೈಕ್ಷಣಿಕ ಸಾಧನಗಳೊಂದಿಗೆ ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಂಡು ತಾವು ಬೆಳೆದು ದೇಶವನ್ನು ಬೆಳೆಸಬೇಕಿದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಹಮ್ಮದ್ ಅಯೂಬ್ ಪೈಲ್ವಾನ್ ಮಾತನಾಡಿ, ‘ಬಡತನ ಸಹಜ. ಆದರೆ ಪೋಷಕರ ತ್ಯಾಗ ಸರ್ಕಾರದ ಶೈಕ್ಷಣಿಕ ಸವಲತ್ತು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಂಡು ದೇಶದ ಭವಿಷ್ಯವನ್ನೂ ರೂಪಿಸಬೇಕು’ ಎಂದರು.

‘ವ್ಯವಸ್ಥೆ ಸರಿ ಇಲ್ಲ ಎಂದು ದೂರುವ ಬದಲು ನಾವು ಸರಿಯಾದರೆ ಸಾಕು. ವ್ಯವಸ್ಥೆ ತಾನಾಗೇ ಸರಿ ಹೋಗುತ್ತದೆ ಎಂಬುದನ್ನು ಯುವ ವಿದ್ಯಾರ್ಥಿಗಳು ಅರಿಯಬೇಕು’ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಕಾರ್ಯಕಾರಿ ಸದಸ್ಯ ಬಿ. ಪಾಲಾಕ್ಷಿ ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಮೇಶ್ ಎಚ್. ವೈ. ಮಾತನಾಡಿದರು. ಪ್ರಾಚಾರ್ಯ ಆರ್. ಸುರೇಶ್, ಅಭಿವೃದ್ಧಿ ಸಮಿತಿ ಸದಸ್ಯ ಅಲ್ತಾಫ್ ಖಾನ್, ಆಸಿಫ್, ಉಪನ್ಯಾಸಕರಾದ ಸ್ಟೀಫನ್ ಲಾರೆನ್ಸ್ ಡಿಸೋಜ, ವಿಜಯ್ ಕುಮಾರ್, ಹೈಸ್ಕೂಲಿನ ಹಳೆಯ ವಿದ್ಯಾರ್ಥಿ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಬದ್ಧಿ ಇದ್ದರು.

ಅರ್ಥಶಾಸ್ತ್ರ ಉಪನ್ಯಾಸಕ ಜಯ್ಯಪ್ಪ ನಿರೂಪಿಸಿದರು. ವರ್ಷಿತಾ ಪ್ರಾರ್ಥಿಸಿದರು. ನೂರ್ ಅಹ್ಮದ್ ಸ್ವಾಗತಿಸಿದರು.   ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರಸ್ತುತಿಗಳು ನೆರವೇರಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT