ಭಾನುವಾರ, ಸೆಪ್ಟೆಂಬರ್ 26, 2021
22 °C
ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಡುತ್ತಿದೆ ಕೊಳಚೆ ವಾತಾವರಣ

ದಾವಣಗೆರೆ: ಆರೋಗ್ಯ ಕೇಂದ್ರದ ಸುತ್ತಲೂ ಅನಾರೋಗ್ಯ

ಕಲ್ಲಪ್ಪ ಮಿರ್ಜಿ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜನರಿಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಆದರೆ, ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದ ಮುಂದೆಯೇ ಸ್ವಚ್ಛತೆ ಮರೀಚಿಕೆಯಾಗಿದೆ!

ಪಟ್ಟಣದಲ್ಲಿರುವ 100 ಹಾಸಿಗೆಗಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಸುತ್ತಲೂ ಹಾಗೂ ಮುಂದಿನ ಆವರಣದಲ್ಲಿ ಶುಚಿಯಾದ ವಾತವರಣವೇ ಇಲ್ಲ. ಆಸ್ಪತ್ರೆಗೆ ನಿತ್ಯ ನೂರಾರು ರೋಗಿಗಳು ಬರುತ್ತಾರೆ. ಮಳೆ ಬಂದರಂತೂ ಎಲ್ಲಿಯೂ ನಿಂತುಕೊಳ್ಳಲು ಆಗುವುದಿಲ್ಲ. ಗುಂಡಿ ಬಿದ್ದ ಜಾಗದಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಕಾಟ ಶುರುವಾಗುತ್ತದೆ.

ಆಸ್ಪತ್ರೆ ಆವರಣದಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳ ಕೊಠಡಿ, ಜನೌಷಧಿ ಕೇಂದ್ರ, ಹೋಟೆಲ್ ಇವೆ. ಇವುಗಳ ಮುಂದೆಯೇ ಚರಂಡಿ ಹಾಗೂ ಮಳೆ ನೀರು ನಿಂತು ಹೊಂಡಮಯ ವಾತಾವರಣ ನಿರ್ಮಾಣವಾಗುತ್ತದೆ. ಇದರಿಂದ ಸ್ಥಳೀಯರಿಗೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಇದೇ ರಸ್ತೆಯಲ್ಲಿ ನಿತ್ಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಓಡಾಡಿದರೂ ಇದು ತಮಗೆ ಸಂಬಂಧವೇ ಇಲ್ಲವೇನೊ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಆಸ್ಪತ್ರೆಗೆ ಕಾಂಪೌಂಡ್‌ ಇಲ್ಲದ ಕಾರಣ ಒಳಗಡೆ ಪಾಳು ಬಿದ್ದಿರುವ ಕಟ್ಟಡ ಹಂದಿ ಹಾಗೂ ನಾಯಿಗಳಿಗೆ ಆಶ್ರಯ ತಾಣವಾದಂತಾಗಿದೆ.

ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಇರುವ ವಸತಿ ಗೃಹಗಳ ಮುಂದೆಯೂ ಸ್ವಚ್ಛತೆಯೇ ಕಾಣುತ್ತಿಲ್ಲ. ಕಸ ಬೆಳೆದು ನಿಂತಿದ್ದು, ಮಳೆಗಾಲದಲ್ಲಿ ಸೊಳ್ಳೆಗಳ ಕಾಟವಿರುತ್ತದೆ. ಆದ್ದರಿಂದ ಆದಷ್ಟು ಬೇಗನೆ ಆಸ್ಪತ್ರೆ ಒಳಗೂ ಹಾಗೂ ಹೊರಗೂ ಶುಚಿತ್ವ ಕಾಪಾಡಿಕೊಳ್ಳುವುದಕ್ಕೆ ಒತ್ತು ಕೊಡಬೇಕು. ಇಲ್ಲವಾದರೆ ಆರೋಗ್ಯವಂತರಾಗಬೇಕು ಎಂದು ಆಸ್ಪತ್ರೆಗೆ ಬರುವವರು ಅನಾರೋಗ್ಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

***

ಆಸ್ಪತ್ರೆಗೆ ಕಾಂಪೌಂಡ್‌ ಇಲ್ಲದ ಕಾರಣ ಒಳಗಡೆ ಪ್ರಾಣಿಗಳು ಬರುತ್ತಿವೆ. ಸಿಬ್ಬಂದಿ ಕೊರತೆಯಿದ್ದು, ಸುತ್ತಮುತ್ತಲಿನ ವಾತಾವರಣ ಸ್ವಚ್ಛಗೊಳಿಸುವಂತೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಿದ್ದೇನೆ

-ಎಂ. ಎಸ್ ಚವಾಣ, ಆಸ್ಪತ್ರೆಯ ವೈದ್ಯಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು