ಶುಕ್ರವಾರ, ಮೇ 14, 2021
25 °C
ಕ್ಷಯ ರೋಗ ಹಾಗೂ ಕೊರೊನಾ ಮಾಹಿತಿ ಕಾರ್ಯಕ್ರಮ

ಕೊರೊನಾ ಶಿಷ್ಟಾಚಾರ ಪಾಲಿಸದಿದ್ದರೆ ಸೋಂಕು ಹೆಚ್ಚಳ: ಡಾ.ನಾಗರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮೇ 1ರಿಂದ ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾದ ಎರಡನೇ ಅಲೆ ಬರುವ ಸಾಧ್ಯತೆ ಇದೆ ಎಂದು ಪರಿಣಿತರು ಎಚ್ಚರಿಸಿದ್ದು, ಇದರಿಂದಾಗಿ ಜನರು ಕೊರೊನಾ ಶಿಷ್ಟಾಚಾರಗಳನ್ನು ಪಾಲನೆ ಮಾಡಬೇಕು ಹಾಗೂ ಲಸಿಕೆ ತೆಗೆದುಕೊಳ್ಳಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸಲಹೆ ನೀಡಿದರು.

ನಗರಪಾಲಿಕೆ ಮತ್ತು ಆರೋಗ್ಯ ಇಲಾಖೆಗಳಿಂದ ಇಲ್ಲಿನ ನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಿದ್ದ ಕ್ಷಯ ರೋಗ ಹಾಗೂ ಕೊರೊನಾ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಎರಡನೇ ಕೊರೊನಾದ ಎರಡನೇ ಅಲೆ ಆರಂಭವಾಗಿದೆ. ರಾಜ್ಯದ 6-7 ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ಕಂಡು ಬರುತ್ತಿವೆ. ದಾವಣಗೆರೆಯಲ್ಲೂ ಸೋಂಕುಗಳು ಹೆಚ್ಚಾಗುತ್ತಿವೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ವೇಗವಾಗಿ ಸೋಂಕು ಹರಡುವ ಆತಂಕವಿದೆ’ ಎಂದು ಹೇಳಿದರು.

‘ಕಳೆದ ಬಾರಿ ಸೋಂಕು ಬಂದಾಗ ಚಿಕಿತ್ಸೆ ಇರಲಿಲ್ಲ. ಈ ಬಾರಿ ಲಸಿಕೆ ಲಭ್ಯವಿದೆ. ಜಿಲ್ಲೆಯಲ್ಲಿ 1.33 ಲಕ್ಷ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. 45 ವರ್ಷ ಮೀರಿದ ಇನ್ನೂ 4.17 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಆರೋಗ್ಯ ಕೇಂದ್ರಗಳಷ್ಟೇ ಅಲ್ಲದೇ, ವಾರ್ಡ್‌ಗಳಲ್ಲಿ ಲಸಿಕಾ ಶಿಬಿರ ನಡೆಸುವ ಉದ್ದೇಶವಿದೆ. ವಿನೋಬನಗರ, ದುರ್ಗಾಂಬಿಕಾ ದೇವಸ್ಥಾನ ಹಾಗೂ ಎಲ್ಲಮ ದೇವಾಲಯದ ಬಳಿ ನಡೆಸಿದ ಲಸಿಕಾ ಶಿಬಿರಗಳಲ್ಲಿ ಜನರಿಂದ ಹೆಚ್ಚಿನ ಸ್ಪಂದನೆ ದೊರೆತಿದೆ’ ಎಂದರು.

ಬಾಷಾನಗರದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ನೇತೃತ್ವದಲ್ಲಿ ಲಸಿಕಾ ಜಾಥಾ ನಡೆಸಲಾಗಿತ್ತು. ಅದೇ ರೀತಿ ಪಾಲಿಕೆ ಸದಸ್ಯರೂ ಜನರಲ್ಲಿ ಲಸಿಕೆಯ ಬಗ್ಗೆ ಅರಿವು ಮೂಡಿಸಬೇಕು ಎಂದವರು ಹೇಳಿದರು.

‘ಲಸಿಕೆ ಹಾಕಿಸಿಕೊಂಡ ತಕ್ಷಣ ಕೊರೊನಾ ಸೋಂಕು ಬರುವುದಿಲ್ಲ ಎಂದರ್ಥವಲ್ಲ. ಆದರೆ, ಸೋಂಕು ಬಂದರೂ ಶ್ವಾಸಕೋಶ ಮತ್ತಿತರ ಅಂಗಗಳಿಗೆ ತೊಂದರೆ ಆಗುವುದಿಲ್ಲ. ಹೀಗಾಗಿ ಸೋಂಕು ಮಾರಣಾಂತಿಕವಾಗಿರುವುದಿಲ್ಲ’ ಎಂದು ಡಾ. ನಾಗರಾಜ್ ವಿವರಿಸಿದರು.

‘ಎರಡನೇ ಅಲೆ ಬಂದ ಸಂದರ್ಭದಲ್ಲಿ ಎದುರಿಸಲು ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಈ ಸಂದರ್ಭದಲ್ಲಿ ತಿಳಿಸಿದ ಅವರು, ಚಿಗಟೇರಿ ಆಸ್ಪತ್ರೆಯಲ್ಲಿ 300 ಬೆಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಂದ ಅಗತ್ಯವಾದಲ್ಲಿ ಶೇ 50ರಷ್ಟು ಬೆಡ್‌ಗಳನ್ನು ಪಡೆಯಲು ಶುಲ್ಕ ನಿಗದಿ ಪಡಿಸಲಾಗಿದೆ’ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾತನಾಡಿ, ‘ಕೊರೊನಾ ಮಹಾಮಾರಿ ಎಂದು ಭಾವಿಸಬೇಕಿಲ್ಲ. ಜಿಲ್ಲೆಯಲ್ಲಿ 23 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ಬಂದರೂ 256 ಜನ ಮಾತ್ರ ಸಾವನ್ನಪ್ಪಿದ್ದಾರೆ. ಇವರು ಸಹ ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ಬಂದಿದ್ದರೆ ಅರ್ಧದಷ್ಟು ಜನರ ಜೀವ ಉಳಿಸಬಹುದಿತ್ತು’ ಎಂದರು.

‘ಕೊರೊನಾ ಸಾವಿನಲ್ಲಿ ಬಹುತೇಕರು ಹೃದಯ ರೋಗ, ಮಧುಮೇಹದಿಂದ ಬಳಲುತ್ತಿರುವವರು ಜಿಲ್ಲೆಯಲ್ಲಿ ಕಳೆದ ವರ್ಷ ಡಿಸೆಂಬರ್ 2020ರ ನಂತರ ಕೊರೊನಾದಿಂದ ಯಾವುದೇ ಸಾವು ಸಂಭವಿಸಿಲ್ಲ’ ಎಂದವರು ಹೇಳಿದರು.

ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ‘ಲಸಿಕೆಯ ಅಡ್ಡ ಪರಿಣಾಮಕ್ಕಿಂತ, ಲಸಿಕೆ ಕುರಿತ ಮಾತುಗಳಿಂದ ಅಡ್ಡ ಪರಿಣಾಮ ಹೆಚ್ಚಾಗುತ್ತಿದೆ. ಲಸಿಕೆ ಪಡೆದವರು ಮದ್ಯ, ತಂಬಾಕು ಹಾಗೂ ಮಾಂಸಾಹಾರ ಸೇವನೆ ಮಾಡಿದರೂ ಏನು ಸಮಸ್ಯೆಯಾಗದು‘ ಎಂದರು.

ಜಿಲ್ಲಾ ಕ್ಷಯ ರೋಗ ಅಧಿಕಾರಿ ಡಾ. ಕೆ.ಎಚ್. ಗಂಗಾಧರ ಅವರು ಕ್ಷಯ ರೋಗದ ಕುರಿತು ಮಾಹಿತಿ ನೀಡಿದರು. ಮೇಯರ್ ಎಸ್.ಟಿ. ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ ಮೇಯರ್ ಶಿಲ್ಪ ಜಯಪ್ರಕಾಶ್, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಕೇವಲ ಶೇ 5-10ರಷ್ಟು ಜನರು ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಬಸ್‌ಗಳಲ್ಲಿ ಮಾಸ್ಕ್ ಧರಿಸದೇ ಸಂಚರಿಸುವವರೇ ಹೆಚ್ಚಾಗಿದ್ದಾರೆ. ಕೊರೊನಾ ಶಿಷ್ಟಾಚಾರ ಪಾಲಿಸಿದರೆ ಹಾಗೂ ಲಸಿಕೆ ಪಡೆದರೆ ಎರಡನೇ ಅಲೆ ತಡೆಯಬಹುದು
ಡಾ.ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು