ಶನಿವಾರ, ಮೇ 21, 2022
28 °C

ಹೆಚ್ಚಾದ ಮಳೆ; ಕೊಚ್ಚಿಹೋದ ಈರುಳ್ಳಿ

ಜಿ.ಬಿ. ನಾಗರಾಜ್‌ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬರದ ನಾಡು ಎಂಬ ಅನ್ವರ್ಥನಾಮವನ್ನು ಜೊತೆಗೆ ಸೇರಿಸಿಕೊಂಡಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ನಿರೀಕ್ಷೆಗೂ ಮೀರಿ ಬೀಳುತ್ತಿರುವ ಮಳೆ ಕೊಂಚ ಮಟ್ಟಿಗೆ ತೊಂದರೆ ಉಂಟು ಮಾಡುತ್ತಿದೆ. ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ವಾರ್ಷಿಕ 550 ಮಿ.ಮೀ ಸರಾಸರಿ ಮಳೆಯಾಗುತ್ತದೆ. ಜನವರಿಯಿಂದ ಈವರೆಗೆ 280 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 360 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ. ಕೃಷಿಗಿಂತ ತೋಟಗಾರಿಕೆ ಬೆಳೆಗಳಿಗೆ ಹೆಚ್ಚು ನಷ್ಟ ಉಂಟಾಗಿದೆ.

ವರ್ಷದ ಹಲವು ದಿನ ಚದುರಿದಂತೆ ಮಳೆಯಾದರೆ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಈ ವರ್ಷ ಜೂನ್‌ ಹಾಗೂ ಜುಲೈ ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಆಗಷ್ಟೇ ಬಿತ್ತನೆ ಆಗಿದ್ದ ಈರುಳ್ಳಿ, ಮೆಕ್ಕೆಜೋಳಕ್ಕೆ ಹಾನಿಯಾಗಿದೆ. ಉತ್ತಮ ಮಳೆಯಿಂದ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದ ರೈತರು ಆಘಾತಕ್ಕೆ ಒಳಗಾಗಿದ್ದಾರೆ. 2019ರ ಹಿಂಗಾರು ಹಾಗೂ 2020ರ ಮುಂಗಾರು ಹಂಗಾಮಿನಲ್ಲಿಯೂ ಈರುಳ್ಳಿ ಬೆಳೆಗೆ ಹಾನಿಯಾಗಿತ್ತು.

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 3,38,350 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ನಿರೀಕ್ಷೆಗೂ ಮೀರಿ ಅಂದರೆ 3.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 1.42 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ, 96 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಹಾಗೂ 21 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿವೆ. ಮಳೆ ಹೆಚ್ಚಾಗಿರುವುದು ಕೆಲ ಬೆಳೆಗಳಿಗೆ ತೊಂದರೆಯಾಗಿದೆ.

ಜೂನ್‌ ಮತ್ತು ಜುಲೈ ತಿಂಗಳಲ್ಲಿ ಸುರಿದ ಮಳೆ ಈರುಳ್ಳಿ ಬೆಳೆಯನ್ನು ಕೊಳೆಯುವಂತೆ ಮಾಡಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ಈರುಳ್ಳಿ ಗೆಡ್ಡೆ ನಿಧಾನವಾಗಿ ಕೊಳೆಯುತ್ತಿದೆ. ಚಳ್ಳಕೆರೆಯಲ್ಲಿ ವಾಡಿಕೆಗಿಂತ ಶೇ 30ರಷ್ಟು ಹೆಚ್ಚುವರಿ ಮಳೆ ಆಗಿದ್ದು, ಹೆಚ್ಚು ಈರುಳ್ಳಿ ನಾಶವಾಗಿದೆ. ಮಳೆ ಸುರಿದ 20 ದಿನಗಳ ಬಳಿಕ ಕೊಳೆರೋಗ ಕಾಣಿಸಿಕೊಂಡಿದೆ. ಗೆಡ್ಡೆ ನಿಧಾನವಾಗಿ ಕೊಳೆಯುತ್ತಿದ್ದು, ಬೆಳೆಗೆ ಮಾಡಿದ ವೆಚ್ಚ ಕೂಡ ಕೈಸೇರುತ್ತಿಲ್ಲ ಎಂಬ ಆತಂಕ ರೈತರನ್ನು ಕಾಡತೊಡಗಿದೆ.

ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಜಂಟಿ ಸಮೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಈರುಳ್ಳಿಗೆ ಹೆಚ್ಚು ಹಾನಿಯಾಗಿರುವುದು ಇದರಿಂದ ಖಚಿತವಾಗಿದೆ. 4,997 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ನಾಶವಾಗಿದೆ. ಚಳ್ಳಕೆರೆ ತಾಲ್ಲೂಕು ಒಂದರಲ್ಲೇ 3,600 ಹೆಕ್ಟೇರ್ ಈರುಳ್ಳಿ ಸಂಪೂರ್ಣ ಹಾನಿಯಾಗಿದೆ. ಸಮೀಕ್ಷೆಯ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಪರಿಹಾರಕ್ಕೆ ರೈತರು ಎದುರು ನೋಡುತ್ತಿದ್ದಾರೆ.

ತಗ್ಗು ಪ್ರದೇಶದಲ್ಲಿ ಬೆಳೆದಿದ್ದ ಮೆಕ್ಕೆಜೋಳಕ್ಕೂ ತೊಂದರೆಯಾಗಿದೆ. ಆದರೆ, ಈ ಹಾನಿಯ ಪ್ರಮಾಣ ತೀರಾ ಕಡಿಮೆ. ಜಿಲ್ಲೆಯಲ್ಲಿ ಅಂದಾಜು 49 ಹೆಕ್ಟೇರ್ ಪ್ರದೇಶದಲ್ಲಿರುವ ಇತರ ಬೆಳೆಗಳಿಗೆ ಹಾನಿಯಾಗಿದೆ. ತಗ್ಗು ಪ್ರದೇಶ, ಜಲಮೂಲಗಳನ್ನು ಆಕ್ರಮಿಸಿಕೊಂಡು ಬಿತ್ತನೆ ಮಾಡಿದ ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿವೆ.

ಮಳೆ ಹೆಚ್ಚಾಗಿದ್ದರಿಂದ ಹಳೆಯ ಮನೆಗಳು ಕುಸಿದು ಬಿದ್ದಿವೆ. ಜಿಲ್ಲೆಯಲ್ಲಿ ಮೂರು ಮನೆಗಳು ಸಂಪೂರ್ಣ ಹಾಗೂ 188 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜಾನುವಾರುಗಳ ಜೀವಕ್ಕೂ ಮಳೆ ಕುತ್ತು ತಂದಿದೆ. 9 ಹಸುಗಳು ಹಾಗೂ 85 ಮೇಕೆ–ಕುರಿಗಳು ಪ್ರಾಣ ಕಳೆದುಕೊಂಡಿವೆ. ಇವುಗಳಿಗೆ ಪರಿಹಾರ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ನಷ್ಟ ಪರಿಹಾರ ಸಾಲದು: ಹೆಚ್ಚು ಮಳೆಯಿಂದ ಈರುಳ್ಳಿ ಬೆಳೆಗೆ ಉಂಟಾಗಿರುವ ನಷ್ಟಕ್ಕೆ ಸರ್ಕಾರ ನೀಡುವ ಪರಿಹಾರ ಸಾಕಾಗದು ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪರಿಹಾರ ನೀಡಲು ಸರ್ಕಾರವನ್ನು ಕೋರಿಕೊಂಡರೂ ಸರಿಯಾಗಿ ಸ್ಪಂದಿಸಿಲ್ಲ ಎಂದು ಆಕ್ರೋಶ ಹೊರಹಾಕುತ್ತಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ ಪ್ರತಿ ಹೆಕ್ಟೇರ್‌ ಈರುಳ್ಳಿಗೆ ₹ 13,500 ಪರಿಹಾರ ನಿಗದಿಪಡಿಸಲಾಗಿದೆ. ಬೆಳೆ ಬೆಳೆಯಲು ರೈತರು ಮಾಡಿದ ವೆಚ್ಚದ ಶೇ 13ರಷ್ಟು ಮಾತ್ರ ಪರಿಹಾರ ಸಿಗುತ್ತಿದೆ ಎಂದು ರೈತರು ಹೇಳುತ್ತಾರೆ.

ಪ್ರತಿ ಎಕರೆ ಈರುಳ್ಳಿ ಬೆಳೆಯಲು ಸಾರಸರಿ ₹ 40 ಸಾವಿರ ವೆಚ್ಚವಾಗುತ್ತದೆ. ಅಂದರೆ ಹೆಕ್ಟೇರ್‌ಗೆ ₹ 1 ಲಕ್ಷ ವೆಚ್ಚವಾಗುತ್ತದೆ. ದುಬಾರಿ ಬೆಲೆಯ ಬಿತ್ತನೆ ಬೀಜ, ರಸಗೊಬ್ಬರ, ಔಷಧ ಹಾಗೂ ಕಾರ್ಮಿಕರಿಗೆ ನೀಡುವ ಕೂಲಿ ಲೆಕ್ಕಹಾಕಿ ವೆಚ್ಚವನ್ನು ಅಂದಾಜು ಮಾಡಲಾಗಿದೆ. ಪರಿಹಾರದ ರೂಪದಲ್ಲಿ ಎರಡೂವರೆ ಎಕರೆಗೆ ₹ 13,500 ಪರಿಹಾರ ನೀಡಿದರೆ ರೈತ ಬದುಕುವುದಾದರೂ ಹೇಗೆ ಎಂಬುದು ಚಳ್ಳಕೆರೆ ತಾಲ್ಲೂಕಿನ ತಿಪ್ಪೇಸ್ವಾಮಿ ಅವರ ಪ್ರಶ್ನೆ.

==

ಬೆಳೆಗಾರರಿಗೆ ಕಣ್ಣೀರು ತರಿಸಿದ ಈರುಳ್ಳಿ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಕಳಪೆ ಬಿತ್ತನೆ ಬೀಜ, ಹವಾಮಾನ ವೈಪರೀತ್ಯ ಹಾಗೂ ಬೆಳೆಗೆ ಕಾಣಿಸಿಕೊಂಡ ನೇರಳೆ ಮಚ್ಚೆ, ಕೊಳೆ ರೋಗದ ಕಾರಣದಿಂದ ಮುಂಗಾರು ಹಂಗಾಮಿನಲ್ಲಿ ಬೆಳೆದ ಈರುಳ್ಳಿ ರೈತರಿಗೆ ಕಣ್ಣೀರು ತರಿಸುತ್ತಿದೆ.

ತಾಲ್ಲೂಕಿನ ಬಾಲೇನಹಳ್ಳಿ, ರಾಮಜೋಗಿಹಳ್ಳಿ, ಗಂಜಿಗುಂಟೆ, ನೇರಲಗುಂಟೆ, ನನ್ನಿವಾಳ, ದುರ್ಗವರ, ದೊಡ್ಡಉಳ್ಳಾರ್ತಿ, ಪುರ್ಲೆಹಳ್ಳಿ, ಚೌಳೂರು, ಚನ್ನಮ್ಮನಾಗತಿಹಳ್ಳಿ, ಬೊಮ್ಮಸಮುದ್ರ, ಮೀರಾಸಾಬಿಹಳ್ಳಿ, ರೆಡ್ಡಿಹಳ್ಳಿ, ಗೋಪನಹಳ್ಳಿ ಮುಂತಾದ ಗ್ರಾಮದಲ್ಲಿ ಬೆಳೆದ ಬೆಳೆ ನೇರಳೆ ಮಚ್ಚೆ ಹಾಗೂ ಕೊಳೆ ರೋಗಕ್ಕೆ ತುತ್ತಾಗಿದೆ.

ಬೆಳೆ ಹಾನಿಯಿಂದ ಬೇಸತ್ತ ಬೆಳೆಗಾರರು ಕಟಾವಿಗೂ ಮುನ್ನವೇ ಬೆಳೆಯನ್ನು ನಾಶಪಡಿಸಿದ್ದಾರೆ. ಕಲ್ಲಂಗಡಿ, ಬೂದಗುಂಬಳ, ತರಕಾರಿ ಬೆಳೆ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.

‘ಭೂಮಿ ಹದಗೊಳಿಸಿ ಮಡಿ ನಿರ್ಮಾಣ ಮಾಡಿ ಆರು ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದೆ. ಬೆಳೆ ಚೆನ್ನಾಗಿತ್ತು. ಜೂನ್ ತಿಂಗಳ ಅಂತ್ಯದಲ್ಲಿ ಬಿದ್ದ ಮಳೆ ಈರುಳ್ಳಿಗೆ ಕಂಟಕವಾಯಿತು. ಕೊಳೆ ಹಾಗೂ ನೇರಳೆ ಮಚ್ಚೆ ರೋಗ ಕಾಣಿಸಿಕೊಂಡು ಬೆಳೆ ಕ್ಷೀಣಿಸುತ್ತ ಬಂದಿತು. ತಿಂಗಳಲ್ಲಿ ಬೆಳೆ ಸಂಪೂರ್ಣ ನೆಲ ಕಚ್ಚಿತು’ ಎನ್ನುತ್ತಾರೆ ನನ್ನಿವಾಳ ಗ್ರಾಮದ ಲಕ್ಷಣ ಪಾಳೇಗಾರ. ನಾರಾಯಣಪುರ, ತೊರೆಬೀರನಹಳ್ಳಿ, ಕಾಪರಹಳ್ಳಿ, ಹುಲಿಕುಂಟೆ, ಬೆಳೆಗೆರೆ, ಕೋನಿಗರಹಳ್ಳಿ, ದೊಡ್ಡಬೀರನಹಳ್ಳಿ, ದೊಡ್ಡಚೆಲ್ಲೂರು, ಗೋಸಿಕೆರೆ ಮುಂತಾದ ಗ್ರಾಮದಲ್ಲಿ ಕಳಪೆ ಬೀಜ ಬಿತ್ತನೆ ಮಾಡಿ ರೈತರು ಪರಿತಪಿಸುತ್ತಿದ್ದಾರೆ.

ಬೀಜ ಸರಿಯಾಗಿ ಹುಟ್ಟಿಲ್ಲ. ಹೀಗಾಗಿ ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಎಕರೆ ಪ್ರದೇಶದ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ.

ಬಿತ್ತನೆ ಆರಂಭ ಅಥವಾ ಮಳೆ ಬಿದ್ದ ಮರು ದಿನಗಳಲ್ಲಿ ಶಿಲೀಂಧ್ರ ನಾಶಕವನ್ನು ಬೆಳೆಗೆ ಸಿಂಪಡಣೆ ಮಾಡಬೇಕಿತ್ತು. ಹೀಗೆ ಮಾಡಿದ್ದರೆ ಅರ್ಧದಷ್ಟು ಬೆಳೆಯಾದರೂ ಕೈಸೇರುತ್ತಿತ್ತು. ರೋಗವೂ ಇಷ್ಟು ವ್ಯಾಪಕವಾಗಿ ಹರಡುತ್ತಿರಲಿಲ್ಲ. ಮಳೆ ಹಾಗೂ ನಿರ್ವಹಣೆಯ ಕೊರತೆಯಿಂದಾಗಿ ಅಂದಾಜು 3,600 ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ನಾಶವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ. 

==

ಕುಸಿಯುತ್ತಿವೆ ಮನೆಯ ಗೋಡೆ

ಎಸ್‌. ಸುರೇಶ್‌ ನೀರಗುಂದ

ಹೊಸದುರ್ಗ: ಜುಲೈ 6ರಂದು ರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರವಾಗಿ ಸುರಿದ ಮುಂಗಾರು ಮಳೆಗೆ ತಾಲ್ಲೂಕಿನ ಕೆಲ್ಲೋಡು ಗ್ರಾಮದ ಓಂಕಾರಪ್ಪ ಅವರ ಮನೆಗೋಡೆ ಕುಸಿದಿದ್ದರಿಂದ ತಾಯಿ ಮಗ ಮೃತಪಟ್ಟಿದ್ದರು.

ಕುಟುಂಬದ 11 ಮಂದಿ ಸದಸ್ಯರು ರಾತ್ರಿ ಊಟ ಮಾಡಿ ಮಲಗಿದ್ದರು. 3 ವರ್ಷದ ಬಾಲಕ ಲೋಹಿತ್‌ ಮೇಲೆ ಮನೆಗೋಡೆ ಉರುಳಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ತೀವ್ರವಾಗಿ ಗಾಯಗೊಂಡಿದ್ದ 30 ವರ್ಷದ ತಾಯಿ ಸಾವಿತ್ರಮ್ಮ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದರು. ಗೋಡೆ ಕುಸಿತದ ಮಣ್ಣಿನಲ್ಲಿ ಸಿಲುಕಿ ಗಾಯಗೊಂಡಿದ್ದ ಮೃತಳ ಪತಿ ಓಂಕಾರಪ್ಪ ಅವರನ್ನು ಗ್ರಾಮದ ಜನರು ಬೇಗನೆ ಹೊರತೆಗೆದಿದ್ದರಿಂದ ಗುಣಮುಖರಾಗಿದ್ದಾರೆ.

ಈ ಘಟನೆ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ. ಬಿರುಸಿನ ಮಳೆ ಆಗುತ್ತಿದ್ದಂತೆ ಗ್ರಾಮದಲ್ಲಿ ಹಳೆಯ ಮನೆಯಲ್ಲಿ ಇರುವವರಲ್ಲಿ ಆತಂಕ ಉಂಟಾಗುತ್ತಿದೆ. ಗ್ರಾಮದಲ್ಲಿ ಕಡುಬಡವರೇ ಹೆಚ್ಚಾಗಿದ್ದಾರೆ. ಸ್ವಂತ ಹಣದಲ್ಲಿ ಹೊಸ ಮನೆ ಕಟ್ಟಿಸಿಕೊಳ್ಳುವ ಸಾಮರ್ಥ್ಯ ಕೆಲವರಲಿಲ್ಲ. ಓಂಕಾರಪ್ಪ ಅವರ ಮನೆ ಶತಮಾನದ ಮನೆಯಾಗಿದ್ದರಿಂದ ಧಾರಾಕಾರ ಮಳೆಗೆ ಕುಸಿದಿದೆ.

ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಮನೆ ಕೆಡವಿದ್ದವರಿಗೆ ಮೂರು ವರ್ಷಗಳಿಂದ ವಸತಿ ಸೌಲಭ್ಯ ಸಿಕ್ಕಿಲ್ಲ. ಬಾಡಿಗೆ ಮನೆಯಲ್ಲಿಯೇ ಅವರು ಜೀವಿಸುತ್ತಿದ್ದಾರೆ. ಬಡವರು ಹಳೆಯ ಮನೆಯಲ್ಲಿಯೇ ದಿನ ದೂಡುತ್ತಿದ್ದಾರೆ. ಜೋರು ಮಳೆ ಬಂದರೆ ಶಿಥಿಲಗೊಂಡ ಗೋಡೆಗಳು ಕುಸಿಯುವುದರಿಂದ ಪ್ರಾಣಹಾನಿ ಸಂಭವಿಸುತ್ತದೆ. ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬಡಜನರ ಪ್ರಾಣ ಉಳಿಸಲು ತಕ್ಷಣವೇ ವಸತಿ ಸೌಕರ್ಯ ಕಲ್ಪಿಸಬೇಕು ಎನ್ನುತ್ತಾರೆ ಕೆಲ್ಲೋಡು ಗ್ರಾಮದ ಹನುಮಂತಪ್ಪ.

ಈ ಬಾರಿ ಮುಂಗಾರು ಮಳೆಗೆ ತಾಲ್ಲೂಕಿನಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ. ಸಾಕಷ್ಟು ಬೆಳೆ ನಷ್ಟ ಸಂಭವಿಸಿದೆ. ಎರಡು ವರ್ಷಗಳಿಂದ ಸಮೃದ್ಧವಾಗಿ ಮಳೆ ಬರುತ್ತಿದ್ದು ಅತಿವೃಷ್ಟಿ ಹೆಚ್ಚುತ್ತಿದೆ. ಆದರೆ, ಮಳೆಯಿಂದಾದ ನಷ್ಟಕ್ಕೆ ಪೂರಕವಾಗಿ ಸಂತ್ರಸ್ತರಿಗೆ ಪರಿಹಾರ ಸಕಾಲಕ್ಕೆ ಸಿಗುತ್ತಿಲ್ಲ ಎಂಬುದು ರೈತರ ದೂರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು