ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರಿನಲ್ಲಿ ಕೈಗಾರಿಕೋದ್ಯಮ ಸ್ಥಾಪನೆಗೆ ಆದ್ಯತೆ: ಪ್ರಭಾ ಮಲ್ಲಿಕಾರ್ಜುನ್

ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಭಾ ಮಲ್ಲಿಕಾರ್ಜುನ್
Published 29 ಮಾರ್ಚ್ 2024, 16:16 IST
Last Updated 29 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಜಗಳೂರು: ‘ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದರೆ ಟ್ರಿಪಲ್ ಎಂಜಿನ್ ಆಡಳಿತದ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕೈಗೊಳ್ಳಲಾಗುವುದು’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಚುನಾವಣೆ ಪ್ರಚಾರದ ಸಭೆಯಲ್ಲಿ ಅವರು ಮಾತನಾಡಿದರು.

‘ಕಳೆದ ಲೋಕಸಭಾ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಡಬಲ್ ಎಂಜಿನ್ ಸರ್ಕಾರದ ಒಂದು ಎಂಜಿನ್ ಕಳಚಿದೆ. ಮತದಾರರು ನನಗೆ ಆಶೀರ್ವಾದ ಮಾಡಿದಲ್ಲಿ ಸಂಸದರು, ಶಾಸಕರು ಮತ್ತು ಸಚಿವರು ಒಳಗೊಂಡ ಟ್ರಿಪಲ್ ಎಂಜಿನ್ ಆಡಳಿತ ಬರಲಿದೆ. ಸಂಸತ್ತಿನಲ್ಲಿ ಸಮರ್ಥವಾಗಿ ಕ್ಷೇತ್ರದ ಜನರ ಧ್ವನಿಯಾಗುವೆ. ಅತ್ಯಂತ ಹಿಂದುಳಿದ ಜಗಳೂರು ತಾಲ್ಲೂಕಿನಲ್ಲಿ ನಿರುದ್ಯೋಗದಿಂದ ಯುವಕರು, ಮಹಿಳೆಯರು ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದು, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ನಾನು ದಾವಣಗೆರೆ ಜಿಲ್ಲೆಯ ಮಗಳು ಮತ್ತು ಸೊಸೆಯಾಗಿ ಸ್ಥಳೀಯ ಅಭ್ಯರ್ಥಿಯಾಗಿದ್ದು, ಈ ಬಗ್ಗೆ ಕಾರ್ಯಕರ್ತರು, ಮತದಾರರಿಗೆ ಮನವರಿಕೆ ಮಾಡಿಕೊಡಬೇಕು. 25 ವರ್ಷಗಳಿಂದ ಪತಿ ಮತ್ತು ಮಾವನವರ ಚುನಾವಣೆಗಳಲ್ಲಿ ಕೆಲಸ ಮಾಡಿರುವ ಅನುಭವ ಇದೆ. ಮಹತ್ವದ 57 ಕೆರೆ ತುಂಬಿಸುವ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಕೈಜೋಡಿಸುವೆ. ಮುಂಬರುವ ದಿನಗಳಲ್ಲಿ ಕ್ಯಾನ್ಸರ್ ಹಾಗೂ ಗರ್ಭಿಣಿ ಮಹಿಳೆಯರಿಗೆ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗುವುದು. ನಮ್ಮ ಮೇಲಿನ ವಿಶ್ವಾಸಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ’ ಎಂದರು.

‘ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ತೊರೆದು ಹೋದವರು ಇದೀಗ ಮರಳಿ ಪಕ್ಷಕ್ಕೆ‌ ಸೇರ್ಪಡೆಯಾಗಿದ್ದು ಪಕ್ಷಕ್ಕೆ ಬಲ ತಂದಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಋಣ ತೀರಿಸಬೇಕಿದೆ. ಶಾಮನೂರು ಕುಟುಂಬದಲ್ಲಿ ರಾಜಕಾರಣಕ್ಕೆ ಬೆನ್ನೆಲುಬಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಸಂಸದರನ್ನಾಗಿ ಆಯ್ಕೆಯಾದಲ್ಲಿ ಕ್ಷೇತ್ರಕ್ಕೆ ಅತ್ಯುತ್ತಮ ಸೇವೆ ಮಾಡಲಿದ್ದಾರೆ. ಜಗಳೂರಿನಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವ ದಿಸೆಯಲ್ಲಿ ಗಾರ್ಮೆಂಟ್ ಕೈಗಾರಿಕಾ ಘಟಕ ಸ್ಥಾಪಿಸಬೇಕು’ ಎಂದು ಶಾಸಕ ಬಿ. ದೇವೇಂದ್ರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಕೆಪಿಸಿಸಿ ಎಸ್‌ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೀರ್ತಿಕುಮಾರ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್. ಮಂಜುನಾಥ್, ವಕೀಲ ಜಯದೇವನಾಯ್ಕ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಅರಸೀಕೆರೆ ಕೊಟ್ರೇಶ್, ಶಿವನಗೌಡ, ತಿಪ್ಪೇಸ್ವಾಮಿಗೌಡ, ಬಿ. ಮಹೇಶ್ವರಪ್ಪ, ವೀರಣ್ಣಗೌಡ, ಪಲ್ಲಾಗಟ್ಟೆ ಶೇಖರಪ್ಪ, ನಾಗರತ್ನಮ್ಮ,ಯಶವಂತಗೌಡ, ಸಿ. ತಿಪ್ಪೇಸ್ವಾಮಿ, ಯು.ಜಿ. ಶಿವಕುಮಾರ್, ಪ್ರಕಾಶ್ ರೆಡ್ಡಿ, ರಮೇಶ್ , ಮುಸ್ಟೂರು ವಿರೂಪಾಕ್ಷ ಇದ್ದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಆರ್. ಅಂಜಿನಪ್ಪ, ಪಟ್ಟಣ ಪಂಚಾಯಿತಿ ಸದಸ್ಯ ಲುಕ್ಮಾನ್ ಖಾನ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ಕಾರ್ಯಕ್ರಮಕ್ಕೂ ಮುನ್ನ ಕೂಡ್ಲಿಗಿ ತಾಲ್ಲೂಕಿನ ಗಾಣಗಟ್ಟೆ ಮಾಯಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿ ನಂತರ ತಾಲ್ಲೂಕಿನ ಚಿಕ್ಕ‌ಉಜ್ಜಿನಿ ಗ್ರಾಮದಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಯಿತು.

ಜಿಲ್ಲೆಗೆ ಶಾಪ ವಿಮೋಚನೆ ಆಗಲಿದೆ

‘ದಾವಣಗೆರೆ ಜಿಲ್ಲೆಯನ್ನು ಸಂಸದ ಸಿದ್ದೇಶ್ವರ ಅವರು 20 ವರ್ಷದಿಂದ ಹಾಳು ಮಾಡಿದ್ದಾರೆ. ದಾವಣಗೆರೆ ನಗರದ ಅಶೋಕ ಟಾಕೀಸ್ ಬಳಿ ನಿರ್ಮಿಸಿರುವ ಅಂಡರ್‌ಪಾಸ್ ಕಾಮಗಾರಿ ಸಂಸದರ ಕಳಪೆ ಆಡಳಿತಕ್ಕೆ ಸಾಕ್ಷಿ. ಜಿಲ್ಲೆಯಲ್ಲಿ ಬಿಜೆಪಿ ಮನೆಯೊಂದು ಬಾಗಿಲು ಆರು ಎನ್ನುವಂತಹ ಸ್ಥಿತಿ ಇದೆ. ಜಿಲ್ಲೆಗೆ ಈ ಬಾರಿ ಸಿದ್ದೇಶ್ವರ ಅವರಿಂದ ಶಾಪ ವಿಮೋಚನೆಯಾಗಲಿದೆ. ಫಲಿತಾಂಶದ ನಂತರ ಪ್ರಭಾ ಮಲ್ಲಿಕಾರ್ಜುನ್ ಅವರು ದೆಹಲಿಗೆ ಹೋಗುತ್ತಾರೆ. ಗಾಯತ್ರಿ ಸಿದ್ದೇಶ್ವರ ಅವರು ಭೀಮಸಮುದ್ರಕ್ಕೆ ಮರಳಲಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ವ್ಯಂಗ್ಯವಾಡಿದರು. ‘ದೇಶದಲ್ಲಿ ಲೋಕಸಭಾ ಚುನಾವಣೆ ಧರ್ಮ ಮತ್ತು ಅಧರ್ಮದ ಮಧ್ಯೆ ನಡೆಯುವ ಸಮರವಾಗಿದೆ. ದೇವರು ಧರ್ಮದ ಹೆಸರಿನಲ್ಲಿ ಹುಸಿ ಭರವಸೆಗಳ ರಾಜಕಾರಣ ನಡೆಸುತ್ತಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ’ ಎಂದು ಕೆಪಿಸಿಸಿ ಎಸ್‌ಟಿ ರಾಜ್ಯ ಘಟಕದ ಅ‌ಧ್ಯಕ್ಷ ಕೆ.ಪಿ. ಪಾಲಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT