ಶನಿವಾರ, ಏಪ್ರಿಲ್ 1, 2023
23 °C

ವಿದ್ಯುತ್ ಚಿತಾಗಾರ ನಿರ್ಮಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದಲ್ಲಿ ಎರಡು ಕಡೆ ಸಾರ್ವಜನಿಕ ಸ್ಮಶಾನಗಳಲ್ಲಿ ಉಚಿತ ವಿದ್ಯುತ್ ಚಿತಾಗಾರ ಹಾಗೂ ಶವ ಸಾಗಿಸಲು 4 ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಸಿಪಿಐನಿಂದ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರಿಗೆ ಮನವಿ ಸಲ್ಲಿಸಲು ಕಾರ್ಯಕರ್ತರು ಜಮಾಯಿಸಿದ್ದರು. ಆದರೆ ಸಚಿವರು ಬರಲಿಲ್ಲ. ಇದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಸಾರ್ವಜನಿಕರ ಮನವಿ ಸ್ವೀಕರಿಸಲು ಸಚಿವರು ಸಮಯ ಗೊತ್ತು ಮಾಡಿದ್ದರೂ ಸ್ಥಳಕ್ಕೆ ಬರದಿರುವುದು ಸರಿಯಲ್ಲ ಎಂದು ಪಿ.ಬಿ. ರಸ್ತೆ ತಡೆಗೆ ಮುಂದಾದರು. ಬಳಿಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಸ್ವೀಕರಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ, ‘ಜಿಲ್ಲೆಯ ಜನರ ಕುಂದು ಕೊರತೆಗಳನ್ನು ಕೇಳದೆ ಜಿಲ್ಲಾ ಉಸ್ತುವಾರಿ ಸಚಿವರು ಹೋಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಜಿಲ್ಲಾಧಿಕಾರಿ, ‘ಉಸ್ತುವಾರಿ ಸಚಿವರ ಜೊತೆ ಎಲ್ಲಾ ಮುಖಂಡರ ಸಭೆ ನಿಗದಿಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ನಗರದಲ್ಲಿ ಶವ ಸಂಸ್ಕಾರಕ್ಕೆ ತೊಂದರೆ ಇದ್ದು, ಎರಡು ಕಡೆ ಸಾರ್ವಜನಿಕ ಸ್ಮಶಾನಗಳಲ್ಲಿ ಉಚಿತ ವಿದ್ಯುತ್ ಚಿತಾಗಾರ ನಿರ್ಮಿಸಬೇಕು. ಶವಗಳನ್ನು ಹೂಳಲು ಉಚಿತವಾಗಿ ಮಹಾನಗರ ಪಾಲಿಕೆ ವತಿಯಿಂದ ಗುಂಡಿಗಳನ್ನು ತೆಗೆಸಿಕೊಡಬೇಕು. ಶವಗಳನ್ನು ಸಾಗಿಸಲು ನಾಲ್ಕು ವಾಹನಗಳ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಮುಖಂಡರಾದ ಆವರಗೆರೆ ಚಂದ್ರು, ಎಚ್.ಜಿ. ಉಮೇಶ್, ಆವರಗೆರೆ ವಾಸು, ಆನಂದರಾಜ್, ಟಿ.ಎಸ್. ನಾಗರಾಜ್, ರಮೇಶ್, ಐರಣಿ ಚಂದ್ರು, ನರೇಗಾ ರಂಗನಾಥ್, ಸರೋಜಾ, ಗದಿಗೇಶ ಪಾಳೇದ, ಎಂ.ಬಿ. ಶಾರದಮ್ಮ, ಎಸ್.ಎಸ್. ಮಲ್ಲಮ್ಮ, ವಿಶಾಲಾಕ್ಷಿ , ಎನ್.ಟಿ. ಬಸವರಾಜ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು