ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗೆ ಸಂಘಟಿತ ಹೋರಾಟ: ದಾವಣಗೆರೆ ತಾಲ್ಲೂಕು ನಾಯಕ ಸಂಘ ತೀರ್ಮಾನ

Last Updated 14 ಮೇ 2019, 12:55 IST
ಅಕ್ಷರ ಗಾತ್ರ

ದಾವಣಗೆರೆ: ನಾಯಕ ಸಮುದಾಯಕ್ಕೆ ಸಿಗಬೇಕಾದ ಶೇ 7.5ರ ಮೀಸಲಾತಿಗಾಗಿ ಸಂಘಟಿತರಾಗಿ ಹೋರಾಟ ನಡೆಸಲು ದಾವಣಗೆರೆ ತಾಲ್ಲೂಕು ನಾಯಕರ (ಎಸ್‌ಟಿ) ಸಂಘ ನಿರ್ಧರಿಸಿತು.

ಇದೇ 21ರಂದು ರಾಜನಹಳ್ಳಿ ಮಠದಲ್ಲಿ ನಡೆಯುವ ಸಭೆಗೆ ಪೂರ್ವಭಾವಿಯಾಗಿ ನಾಯಕರ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಾಯಕ ಸಮಾಜದ ಮುಖಂಡರು ಈ ತೀರ್ಮಾನ ಕೈಗೊಂಡರು.

ಸಂಘದ ನಿರ್ದೇಶಕ ಅಣಜಿ ಎಚ್‌. ಅಂಜಿನಪ್ಪ ಮಾತನಾಡಿ, ‘ಜನಸಂಖ್ಯೆಗೆ ಅನುಗುಣವಾಗಿ ನಾಯಕ ಜನಾಂಗಕ್ಕೆ ಸಿಗಬೇಕಾದ ಮೀಸಲಾತಿ ಸಿಕ್ಕಿಲ್ಲ. ಕೇಂದ್ರದ ಸರ್ಕಾರದಿಂದ ಸಿಕ್ಕಿದೆ. ಆದರೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಮೀಸಲಾತಿ ಸಿಕ್ಕಿಲ್ಲ. ಪ್ರಸ್ತುತ ಶೇ 3ರಷ್ಟು ಮಾತ್ರ ಇದ್ದು, ಉಳಿದ ಶೇ 4.5ರಷ್ಟು ಮೀಸಲಾತಿ ಸಿಗಬೇಕಾದರೆ ಕಠಿಣ ಹೋರಾಟ ಅನಿವಾರ್ಯ’ ಎಂದು ಹೇಳಿದರು.

‘ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅದು ಕಾರ್ಯಗತಗೊಂಡಿಲ್ಲ. ಎಸ್‌ಸಿ ಎಸ್‌ಟಿಗೆ ಬಡ್ತಿ ಮೀಸಲು ಮುಂದುವರಿಸಲು ಸುಪ್ರೀಂಕೋರ್ಟ್‌ ಹಸಿರುನಿಶಾನೆ ತೋರಿಸಿರುವುದು ಅಭಿನಂದನೀಯ’ ಎಂದರು.

ಸಮಾಜದ ಮುಖಂಡ ಹದಡಿ ರಾಮಚಂದ್ರಪ್ಪ ‘ನಾವು ಸಂವಿಧಾನಬದ್ಧವಾಗಿ ಸಿಗಬೇಕಾದ ಸೌಲಭ್ಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆಯೇ ಹೊರತು ಕಳ್ಳತನ ಮಾಡಿ ಕೇಳುತ್ತಿಲ್ಲ. ನಮಗೆ ಹೊಲ, ಮನೆ ಬೇಡ ಮೀಸಲಾತಿ ಬೇಕು. ನಮ್ಮಲ್ಲಿ ಒಗ್ಗಟ್ಟು ಇಲ್ಲ, ಅಶಿಸ್ತು ಇದೆ. ಅದನ್ನು ತ್ಯಜಿಸಬೇಕು. ಹೋರಾಟದಲ್ಲಿ ಬದ್ಧತೆ, ಧ್ಯೇಯ ಇರಬೇಕು. ಸೋಮಾರಿತನ ಬಿಟ್ಟು ಹೋರಾಟ ಮಾಡಬೇಕು’ ಎಂದು ಸಲಹೆ ನೀಡಿದರು.

ಸಮಾಜದ ಮತ್ತೊಬ್ಬ ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ‘ಪ್ರಬಲ ಸಮಾಜವಾವಾಗಿರುವ ಸಮಾಜದ ಮೀಸಲಾತಿಯನ್ನು ಕಬಳಿಸಲು ರಾಜಕೀಯ ಪಿತೂರಿ ನಡೆಯುತ್ತಿದ್ದು, ನಿಮ್ಮ ಸಂವಿಧಾನದ ಹಕ್ಕನ್ನು ಇನ್ನೊಬ್ಬರು ಕಸಿದುಕೊಳ್ಳುತ್ತಿದ್ದಾರೆ. ಇದನ್ನು ಸಮುದಾಯದ ಮುಖಂಡರು ಅರ್ಥ ಮಾಡಿಕೊಳ್ಳಬೇಕಿದೆ. ರಾಜಕೀಯದ ಉದ್ದೇಶಕ್ಕಾಗಿ ಮೀಸಲಾತಿ ದುರುಪಯೋಗ ಮಾಡುವುದನ್ನು ಖಂಡಿಸಿ ಸರ್ಕಾರಕ್ಕೆ ಒಂದು ಸೂಚನೆ ಕೊಡಬೇಕಿದೆ’ ಎಂದು ಹೇಳಿದರು.

‘ನಮ್ಮ ಮೀಸಲಾತಿಯನ್ನು ಪಡೆದುಕೊಳ್ಳಲು ಬೇರೊಂದು ಜಾತಿ ಹುನ್ನಾರ ನಡೆಸುತ್ತಿದ್ದು, ಅದಕ್ಕಾಗಿ ಅರ್ಜಿಯನ್ನೂ ಸಲ್ಲಿಸಿವೆ. ಆದರೆ ಅರ್ಜಿಗಳು ತಿರಸ್ಕೃತವಾಗಿದೆ. ಬೇರೆಯವರು ಮೀಸಲಾತಿ ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿರುವಾಗ ನೀವು ಸುಮ್ಮನೆ ಕುಳಿತುಕೊಳ್ಳಬೇಡಿ, ವಿಧಾನಸೌಧಕ್ಕೆ ಮುಟ್ಟುವ ರೀತಿಯಲ್ಲಿ ನಿಮ್ಮ ಹಕ್ಕನ್ನು ಪ್ರತಿಪಾದಿಸಿ ಎಂದು ಸಲಹೆ ನೀಡಿದರು.

ಉಪನ್ಯಾಸಕ ಮಳಲ್ಕೆರೆ ಓಬಳೇಶಪ್ಪ ಮಾತನಾಡಿ, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಿನ ಮೀಸಲಾತಿ ತೆಗೆದುಕೊಂಡಿದ್ದಾರೆ ಎಂಬ ಭಾವನೆ ಕೆಲವರಲ್ಲಿ ಇದೆ. ಆದರೆ ಅಷ್ಟು ಮೀಸಲಾತಿ ಜನರನ್ನು ತಲುಪುತ್ತಿಲ್ಲ. ತಮಿಳುನಾಡು ಹಾಗೂ ಆಂಧ್ರದಲ್ಲಿ ಹಿಂದುಳಿದ ವರ್ಗಗಳಿಗೆ ಇರುವಷ್ಟು ಮೀಸಲಾತಿ ಕರ್ನಾಟಕದಲ್ಲಿ ಇಲ್ಲ’ ಎಂದು ಹೇಳಿದರು.

‘ಸರ್ಕಾರಗಳು ವಿವಿಧ ಜನಾಂಗಗಳನ್ನು ಒಡೆಯುವ ಯತ್ನ ಮಾಡುತ್ತಿದ್ದು, ಜನರು ಇದಕ್ಕೆ ಮರುಳಾಗಬಾರದು. ರಾಜಕೀಯವನ್ನು ಹೊರಗಿಟ್ಟು ಮೀಸಲಾತಿಗಾಗಿ ಹೋರಾಟ ಮಾಡಬೇಕು. ಇದೇ 21ರಂದು ರಾಜನಹಳ್ಳಿ ಮಠದಲ್ಲಿ ನಡೆಯುವ ಸಭೆಯಲ್ಲಿ ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲಕ್ಕೆ ಹೋರಾಟ ನಡೆಸಬೇಕು. ಸಂಘಟಿತರಾಗಿ ಹೋರಾಟ ಮಾಡಿದಾಗ ಯಶಸ್ಸು ಸಿಗುತ್ತದೆ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ಎಂ.ಬಿ. ಹಾಲಪ್ಪ, ಗೌರವಾಧ್ಯಕ್ಷ ಎ. ಮುರುಗೇಂದ್ರಪ್ಪ ದೊಡ್ಡಮನೆ, ಉಪಾಧ್ಯಕ್ಷರಾದ ಎನ್‌.ಡಿ.ಮುರುಗೆಪ್ಪ, ಕರಿಲಕ್ಕೇನಹಳ್ಳಿ ಎಚ್‌.ಕೆ. ತಿಪ್ಪೇಸ್ವಾಮಿ, ಖಜಾಂಚಿ ಪಿ.ಒ. ಹೇಮಣ್ಣ, ಗೌರವ ಕಾರ್ಯದರ್ಶಿ ಶ್ಯಾಗಲೆ ಜಿ.ಎನ್‌. ಸತೀಶ್‌, ಕಾನೂನು ಸಲಹೆಗಾರ ಕಂದಗಲ್ಲು ಎಲ್‌.ಒ. ಮಂಜಪ್ಪ, ಮಹಿಳಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT