ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು: ಬರಕ್ಕೆ ನಲುಗಿದ ತೋಟಗಾರಿಕೆ ಬೆಳೆಗಳು

ಟ್ಯಾಂಕರ್‌ನಲ್ಲಿ ನೀರು ಹಾಯಿಸಿ ಅಡಿಕೆ ಉಳಿಸಿಕೊಳ್ಳಲು ರೈತರ ಹರಸಾಹಸ; 57 ಕೆರೆ ಯೋಜನೆ ವಿಳಂಬದಿಂದ ಬರದ ತೀವ್ರತೆ ಹೆಚ್ಚಳ
ಡಿ. ಶ್ರೀನಿವಾಸ್
Published 16 ಫೆಬ್ರುವರಿ 2024, 5:37 IST
Last Updated 16 ಫೆಬ್ರುವರಿ 2024, 5:37 IST
ಅಕ್ಷರ ಗಾತ್ರ

ಜಗಳೂರು: ತೀವ್ರ ಬರಗಾಲದ ಪರಿಣಾಮ ಜಗಳೂರು ತಾಲ್ಲೂಕಿನ ಕಸಬಾ, ಸೊಕ್ಕೆ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತವಾಗಿದ್ದು, ಸಾವಿರಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿಹೋಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಯಾವುದೇ ಜಲಾಶಯ ಮೂಲದ ನೀರಾವರಿ ಸೌಲಭ್ಯವಿಲ್ಲದ ಜಗಳೂರು ತಾಲ್ಲೂಕಿನಲ್ಲಿ ಕೇವಲ ಅಂತರ್ಜಲದ ಆಧಾರದಲ್ಲಿ ಸುಮಾರು 30,000 ಎಕರೆ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಕಳೆದ ವರ್ಷ ಅತಿಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿತ್ತು. ಇದರಿಂದಾಗಿ 40ಕ್ಕೂ ಹೆಚ್ಚು ಕೆರೆಗಳಿಗೆ ಸಾಕಷ್ಟು ನೀರು ಹರಿದು ಬಂದಿತ್ತು. ಪ್ರಸ್ತುತ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮು ಎರಡೂ ಅವಧಿಯಲ್ಲಿ ಮಳೆ ಕೈಕೊಟ್ಟಿದ್ದು, ಬಹುತೇಕ ಕೆರೆಕಟ್ಟೆಗಳು ಹನಿ ನೀರಿಲ್ಲದೇ ಒಣಗಿ ಬಿರುಕು ಬಿಟ್ಟಿವೆ. ತುಪ್ಪದಹಳ್ಳಿ ಕೆರೆಯನ್ನು ಹೊರತುಪಡಿಸಿ ಉಳಿದ ಎಲ್ಲ ಕೆರೆಗಳು ಬರಿದಾಗಿವೆ.

ಕೆರೆಗಳಲ್ಲಿ ನೀರು ಖಾಲಿಯಾಗುತ್ತಿದ್ದಂತೆ ಆಸುಪಾಸಿನ ಕೊಳವೆಬಾವಿಗಳಲ್ಲಿ ಅಂತರ್ಜಲ ಪಾತಾಳಕ್ಕೆ ಕುಸಿದಿದ್ದು, ತಾಲ್ಲೂಕಿನ ಎಲ್ಲೆಡೆ ಜಲಕ್ಷಾಮ ಎದುರಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸಮೃದ್ಧವಾಗಿ ಮಳೆಯಾಗಿದ್ದರಿಂದ ಸಾವಿರಾರು ಎಕರೆ ಪ್ರದೇಶದಲ್ಲಿ ಬಹುವಾರ್ಷಿಕ ಅಡಿಕೆಯನ್ನು ಬೆಳೆಯಲಾಗಿದೆ. ಬೇಸಿಗೆಯ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದ್ದು, ಸಮಪರ್ಕವಾಗಿ ನೀರು ದೊರೆಯದ ಕಾರಣ, ಅಡಿಕೆ, ಬಾಳೆ, ಪಪ್ಪಾಯ, ದಾಳಿಂಬೆ ಮುಂತಾದ ತೋಟಗಾರಿಕಾ ಬೆಳೆಗಳು ಒಣಗಲು ಆರಂಭಿಸಿವೆ. ಲಕ್ಷಗಟ್ಟಲೆ ಹಣ ಸುರಿದು ನಿರ್ಮಿಸಿರುವ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಸೊಕ್ಕೆ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ದುಬಾರಿ ಖರ್ಚಿನಲ್ಲಿ ಪ್ರತಿನಿತ್ಯ ಟ್ಯಾಂಕರ್ ನೀರು ಖರೀದಿಸಿ ತೋಟಗಳಿಗೆ ನೀರು ಹಾಯಿಸಲಾಗುತ್ತಿದೆ. ಇನ್ನೂ ಕೆಲವು ರೈತರು ಎರಡು–ಮೂರು ಕೊಳವೆಬಾವಿಗಳನ್ನು ಕೊರೆಸುತ್ತಿದ್ದಾರೆ. ಬೋರ್‌ವೆಲ್ ವಾಹನಗಳು ಆರ್ಭಟ ತಾಲ್ಲೂಕಿನಲ್ಲಿ ಹೆಚ್ಚಾಗಿದ್ದು, ಸಾಲಸೋಲ ಮಾಡಿ ತಮ್ಮ ತೋಟಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನ ನಡೆಸಿದ್ದಾರೆ.

ತುಂಗಭದ್ರಾ ನದಿಯಿಂದ ತಾಲ್ಲೂಕಿನ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯು ಹಲವು ವರ್ಷಗಳಿಂದ ಮಂದಗತಿಯದ್ದು, ಬರದ ತೀವ್ರತೆಯನ್ನು ಹೆಚ್ಚಿಸಿದೆ. ಕ್ಷಿಪ್ರಗತಿಯಲ್ಲಿ ಕಾಮಗಾರಿ ಮುಗಿಸಿ ಎಲ್ಲ ಕೆರೆಗಳಿಗೆ ನೀರು ಹರಿಸಿದ್ದಲ್ಲಿ ಅಂತರ್ಜಲ ಕುಸಿತವನ್ನು ತಡೆಗಟ್ಟಬಹುದಿತ್ತು ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ಟ್ಯಾಂಕರ್‌ನಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ
ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ಟ್ಯಾಂಕರ್‌ನಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ
ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ಟ್ಯಾಂಕರ್‌ನಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ
ಜಗಳೂರು ತಾಲ್ಲೂಕಿನ ಪಾಲನಾಯಕನಕೋಟೆ ಭಾಗದಲ್ಲಿ ಟ್ಯಾಂಕರ್‌ನಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲಾಗುತ್ತಿದೆ
ಗಣೇಶ್
ಗಣೇಶ್

‘ಆಕಾಶವೇ ಕಳಚಿ ಬಿದ್ದಂತಾಗಿದೆ’ ‘10 ಎಕರೆಯಲ್ಲಿ ಅಡಿಕೆ ರೇಷ್ಮೆ ಮುಂತಾದ ನೀರಾವರಿ ಬೆಳೆಗಳನ್ನು ಬೆಳೆದಿದ್ದೇನೆ. 5 ಕೊಳವೆ ಬಾವಿಗಳಿದ್ದು ಮಳೆ ಕೊರತೆ ಕಾರಣ ಈಗಾಗಲೇ ನಾಲ್ಕು ಕೊಳವೆಬಾವಿಗಳು ಕಳೆದ ಒಂದು ತಿಂಗಳಲ್ಲಿ ಬತ್ತಿಹೋಗಿವೆ. ಈಗ ಕೇವಲ ಒಂದು ಕೊಳವೆಬಾವಿಯಲ್ಲಿ ಮಾತ್ರ ನೀರು ಬರುತ್ತಿದೆ. ಅದರಲ್ಲೂ ಸಹ ಯಾವುದೇ ಘಳಿಗೆಯಲ್ಲಿ ನೀರು ನಿಂತುಹೋಗುವ ಆತಂಕ ಇದೆ. ಹಿಂದೆ ಜಮೀನನ್ನು ಆಧಾರವಾಗಿಟ್ಟು ಸಾಲ ಮಾಡಿ ಕೊಳವೆಬಾವಿಗಳನ್ನು ಕೊರೆಸಿ ಅಡಿಕೆ ತೋಟ ಮಾಡಿದ್ದೆ. ಟ್ಯಾಂಕರ್‌ನಲ್ಲಿ ನೀರು ಖರೀದಿಸಿ ತೋಟಕ್ಕೆ ಹಾಯಿಸುತ್ತಿದ್ದೇನೆ. ದಿಢೀರ್ ಅಂತರ್ಜಲ ಕುಸಿತದಿಂದ ನಮ್ಮ ಕುಟುಂಬ ತೀವ್ರ ಚಿಂತೆಗೀಡಾಗಿದೆ. ಏನು ಮಾಡಬೇಕೋ ತೋಚುತ್ತಿಲ್ಲ. ಆಕಾಶವೇ ಕಳಚಿ ಬಿದ್ದಂತಾಗಿದೆ’ ಎಂದು ತಾಲ್ಲೂಕಿನ ದೊಣೆಹಳ್ಳಿ ಗ್ರಾಮದ ಯುವರೈತ ಗಣೇಶ್ ‘ಪ್ರಜಾವಾಣಿ’ಯೊಂದಿಗೆ ತಮ್ಮ ಆತಂಕ ತೋಡಿಕೊಂಡರು.

ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆಸುವ ಯತ್ನ’ ‘ತಾಲ್ಲೂಕಿನಲ್ಲಿ 4000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ 400 ಹೆಕ್ಟೇರ್‌ನಲ್ಲಿ ದಾಳಿಂಬೆ 200 ಹೆಕ್ಟೇರ್‌ನಲ್ಲಿ ಪಪ್ಪಾಯ ಮತ್ತು 200 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದೆ. ತಾಲ್ಲೂಕಿನಲ್ಲಿ ಸುಮಾರು 17000ಕ್ಕೂ ಹೆಚ್ಚು ಕೊಳವೆಬಾವಿಗಳು ಇವೆ. ನಿತ್ಯವೂ ಕೊಳವೆ ಬಾವಿ ವೈಫಲ್ಯದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕೆಲವರು ಸಾವಿರ ಅಡಿಗೂ ಹೆಚ್ಚು ಆಳದಷ್ಟು ಅನಗತ್ಯವಾಗಿ ಹಾಗೂ ಅವೈಜ್ಞಾನಿಕವಾಗಿ ಕೊಳವೆಬಾವಿ ಕೊರೆಸುತ್ತಿದ್ದಾರೆ. ಇದರಿಂದ ರೈತರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದ್ದು ನೀರೂ ಲಭ್ಯವಾಗುತ್ತಿಲ್ಲ’ ಎಂದು ತೋಟಗಾರಿಕೆ ಅಧಿಕಾರಿ ಅರುಣ್ ಕುಮಾರ್ ಹೇಳುತ್ತಾರೆ.

‘ಅರಣ್ಯ ಕೃಷಿ ಸೂಕ್ತ’ ‘ಕಡಿಮೆ ಪ್ರಮಾಣದ ಮಳೆ ಸುರಿಯುವ ಜಗಳೂರಿನಂತಹ ಬಯಲುಸೀಮೆ ಪ್ರದೇಶಕ್ಕೆ ಅಡಿಕೆ ಬೆಳೆ ಸೂಕ್ತವಲ್ಲ. ಖುಷ್ಕಿ ಬೇಸಾಯಕ್ಕೆ ಸೂಕ್ತವಾಗುವ ಮರ ಬೇಸಾಯ ಪದ್ಧತಿ ಅತ್ಯುತ್ತಮ ಪರ್ಯಾಯ ಮಾರ್ಗ. ಅಡಿಕೆ ದಾಳಿಂಬೆ ಬದಲಿಗೆ ಹೆಚ್ಚು ನೀರು ಬೇಡದ ನೇರಳೆ ಹಲಸು ಹುಣಸೆ ಬೇಲ ಸಪೋಟ ಬಾರೇ ಮುಂತಾದ ಅರಣ್ಯ ಕೃಷಿ ಈ ಭಾಗಕ್ಕೆ ಸೂಕ್ತ’ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತೋಟಯ್ಯ ರೈತರಿಗೆ ಸಲಹೆ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT