ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈಚಾರಿಕತೆಯಿಂದ ಸಂಸ್ಕೃತಿ, ಪರಂಪರೆಗೆ ಹಾನಿಯಾಗದಿರಲಿ

ಕೊಡದಗುಡ್ಡದಲ್ಲಿ ಪಂಚಪೀಠಾಧೀಶರ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ರಂಭಾಪುರಿ ಶ್ರೀ
Published 14 ಮಾರ್ಚ್ 2024, 15:58 IST
Last Updated 14 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಜಗಳೂರು: ‘ವೈಚಾರಿಕತೆಯ ನೆಪದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಗೆ ಹಾನಿಯಾಗಬಾರದು. ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣುಗಳಿದ್ದಂತೆ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೊಡದಗುಡ್ಡ ವೀರಭದ್ರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸ, ಮಹಾದ್ವಾರ ಉದ್ಘಾಟನೆ, ಕರಿಗಲ್ಲು ಸ್ಥಾಪನೆ, ಕಲ್ಯಾಣ ಮಂಟಪದ ಶಿಲಾನ್ಯಾಸ ಧರ್ಮ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಕಲ ಮೋಕ್ಷಗಳಿಗೆ ಧರ್ಮವೇ ಮೂಲ. ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮ. ಮನುಷ್ಯನಿಗೆ ಮಾತೃಭೂಮಿ ಎಷ್ಟು ಮುಖ್ಯವೋ ಅಷ್ಟೇ ಧರ್ಮವೂ ಮುಖ್ಯ ಎಂಬುದನ್ನು ಮರೆಯಬಾರದು. ಕೊಡದಗುಡ್ಡ ವೀರಭದ್ರೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯದ ಸಂಕಲ್ಪಗಳು ಸಂತಸ ತಂದಿದೆ. ಸರ್ಕಾರದ ಅನುದಾನದ ಜೊತೆಗೆ ಶಾಸಕರ ವಿಶೇಷ ಅನುದಾನದಡಿ ₹ 11 ಲಕ್ಷ ಒದಗಿಸಿದಲ್ಲಿ ಕಲ್ಯಾಣ ಮಂಟಪದ ಕನಸು ಸಾಕಾರಗೊಳ್ಳುತ್ತದೆ’ ಎಂದು ಸ್ವಾಮೀಜಿ ಹೇಳಿದರು.

ಉತ್ತರ ಖಂಡ ರಾಜ್ಯ ಹಿಮವತ್ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಧರ್ಮದ ದಿಕ್ಸೂಚಿಯಿಲ್ಲದೆ ಇದ್ದರೆ ಬದುಕಿಗೆ ಅರ್ಥವೇ ಇಲ್ಲ. ಸಮೃದ್ಧ, ಸದೃಢ ನಾಡು ಕಟ್ಟುವುದೇ ಧರ್ಮ ಪೀಠಗಳ ಗುರಿಯಾಗಿದೆ. ಶಿವಾಗಮಗಳು ವೀರಶೈವ ಧರ್ಮ ಸಾಹಿತ್ಯದ ಮೂಲ ಬೇರುಗಳು. ಜೀವನದ ಜಂಜಾಟದಲ್ಲಿ ಸಿಲುಕಿರುವ ಮನುಷ್ಯನಿಗೆ ಪುಣ್ಯ ಕ್ಷೇತ್ರಗಳು ಸ್ಫೂರ್ತಿ ಮತ್ತು ಚೈತನ್ಯ ನೀಡುವ ಕೇಂದ್ರಗಳಾಗಿವೆ’ ಎಂದರು.

‘ಕೊಡದಗುಡ್ಡ ಕ್ಷೇತ್ರದಲ್ಲಿ ರಸ್ತೆ, ನೀರು, ಕಲ್ಯಾಣ ಮಂಟಪ ಸೇರಿ ಅಗತ್ಯ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಬಿ.ದೇವೇಂದ್ರಪ್ಪ ಭರವಸೆ ನೀಡಿದರು. ಶಾಸಕರು ವೈಯಕ್ತಿಕವಾಗಿ ₹ 11 ಲಕ್ಷ ದೇಣಿಗೆ ನೀಡುವುದಾಗಿ ಘೋಷಿಸಿದರು.

‘ಇಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾದಲ್ಲಿ ಬಡವರ್ಗದವರ ಸರಳ ವಿವಾಹ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ. ಬಿಜೆಪಿ ಆಡಳಿತದ 5 ವರ್ಷಗಳಲ್ಲಿ ಯಾವುದೇ ಅಭಿವೃದ್ದಿಗೊಂಡಿಲ್ಲ. ಶಂಕುಸ್ಥಾಪನೆ ನೆರವೇರಿಸಿದ್ದ ₹ 30 ಲಕ್ಷ ವೆಚ್ಚದ ಶೌಚಾಲಯ ಕಣ್ಮರೆಯಾಗಿದೆ’ ಎಂದು ವಿಎಸ್ಎಸ್ಎನ್ ಅಧ್ಯಕ್ಷ ಬಸವಾಪುರ ರವಿಚಂದ್ರ ಆರೋಪಿಸಿದರು.

ಸಮಾರಂಭಕ್ಕೂ ಮುನ್ನ ರಂಭಾಪುರಿ ಮತ್ತು ಕೇದಾರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಿತು. ಕುಂಭಹೊತ್ತ ಮಹಿಳೆಯರು, ಆರತಿ ಹಿಡಿದ ಮಹಿಳೆಯರು, ಡೊಳ್ಳು, ವೀರಗಾಸೆ, ಕಹಳೆ, ಗೊಂಬೆಕುಣಿತ ಗಮನ ಸೆಳೆದವು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಚಾರ್ಯ ಸ್ವಾಮೀಜಿ, ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಚಾರ್ಯ ಸ್ವಾಮೀಜಿ, ಶಿರಾಳಕೊಪ್ಪದ ವಿರಕ್ತಮಠದ ನಿರಂಜನ ಪ್ರಣವ ಸ್ವರೂಪಿ ಶ್ರೀ ಸಿದ್ದೇಶ್ವರ ದೇವರು, ಕಾಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮಂಜುನಾಥ್, ಮುಖಂಡರಾದ ಶಿವನಗೌಡ, ಯು.ಜಿ.ಶಿವಕುಮಾರ್, ಪಲ್ಲಾಗಟ್ಟೆ ಶೇಖರಪ್ಪ, ಬಿ.ಮಹೇಶ್ವರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT