ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಭಾರತ ಸಂತರು ನೆಲೆಸಿದ ಪುಣ್ಯಭೂಮಿ’

ಸೊಕ್ಕೆ ಗ್ರಾಮದಲ್ಲಿ ಶಿರಡಿ ಸಾಯಿಬಾಬಾ ದೇವಾಲಯ, ವಿಮಾನ ಗೋಪುರ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನೆ: ಕೃಷಿ ಸಚಿವ ಚಲುವರಾಯ ಸ್ವಾಮಿ ಅಭಿಮತ
Published 22 ನವೆಂಬರ್ 2023, 14:22 IST
Last Updated 22 ನವೆಂಬರ್ 2023, 14:22 IST
ಅಕ್ಷರ ಗಾತ್ರ

ಜಗಳೂರು: ಭಾರತ ದೇಶ ಸಾಧು ಸಂತರು ನೆಲೆಸಿದ ಪುಣ್ಯ ಭೂಮಿಯಾಗಿದ್ದು, ಧಾರ್ಮಿಕ ಸೇವೆ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದರು.

ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಬುಧವಾರ ಶಿರಡಿ ಸಾಯಿಬಾಬಾ ದೇವಾಲಯ, ವಿಮಾನ ಗೋಪುರ, ಶಿಲಾಮೂರ್ತಿ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಿವೃತ್ತ ಅಧಿಕಾರಿ ಸೊಕ್ಕೆ ತಿಪ್ಪೇಸ್ವಾಮಿ ಅವರು ತಮ್ಮ‌ ಹುಟ್ಟೂರಿನಲ್ಲಿ ಜನಕಲ್ಯಾಣಕ್ಕಾಗಿ ದೇವಸ್ಥಾನ ನಿರ್ಮಿಸಿದ್ದಾರೆ. ಹಲವು ಜನಪರ ಕಾರ್ಯಕ್ರಮಗಳನ್ನು ಕೈಗೊಂಡಿದ್ದದ್ದು, ಅವರ ವ್ಯಕ್ತಿತ್ವ ಮಾದರಿಯಾಗಿದೆ‌ ಎಂದು ಶ್ಲಾಘಿಸಿದರು. 

‘ನಮ್ಮ ಮಠದ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ಸೇರಿ ಸೇವಾ ಕ್ಷೇತ್ರದ ವಿವಿಧ ಆಯಾಮಗಳಲ್ಲಿ ತಿಪ್ಪೇಸ್ವಾಮಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನಲ್ಲಿ ಬರ ಆವರಿಸಿರಬಹುದು. ಆದರೆ ಭಕ್ತಿ ಪರ್ವಕ್ಕೆ ಬರವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಆಧ್ಯತ್ಮದಿಂದ ನೆಮ್ಮದಿ ಸಾಧ್ಯ. ತಾಲ್ಲೂಕಿನಲ್ಲಿ ಮೊದಲ ಬಾರಿಗೆ ಐತಿಹಾಸಿಕ ಶಿರಡಿ ಸಾಯಿಬಾಬಾ ದೇವಸ್ಥಾನ ನಿರ್ಮಿಸಿರುವುದು ಸುತ್ತಮುತ್ತಲಿನ ಭಕ್ತರಿಗೆ ಅನುಕೂಲವಾಗಲಿದೆ ಎಂದರು.  

‘ಪಾಳು ಬಿದ್ದಿರುವ 40 ಎಕರೆ ಸರ್ಕಾರಿ ಜಮೀನಿನಲ್ಲಿ ಸಿರಿಧಾನ್ಯಗಳ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಇದರಿಂದ ಬರಪೀಡಿತ ನಾಡಿನ ರೈತರಿಗೆ ಅನುಕೂಲವಾಗಲಿದೆ’ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಕೃಷಿ ಸಚಿವರಿಗೆ ಮನವಿ ಮಾಡಿದರು.

ಗ್ರಾ‌ಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸ್ವಾತಿ ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ನನ್ನ ತಂದೆ ತಿಪ್ಪೇಸ್ವಾಮಿ ಅವರ ಸಂಕಲ್ಪದಂತೆ ಸೊಕ್ಕೆ ಗ್ರಾಮದಲ್ಲಿ ಸುಂದರ ವಿನ್ಯಾಸದೊಂದಿಗೆ ದೇವಸ್ಥಾನ ನಿರ್ಮಾಣವಾಗಿದ್ದು, ಈ ಭಾಗದ ಭಕ್ತರಿಗೆ ಆಧ್ಯಾತ್ಮಿಕ ಸ್ಫೂರ್ತಿ ದೊರೆಯಲಿದೆ’ ಎಂದರು.

ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ, ಐಎಎಸ್ ನಿವೃತ್ತ ಅಧಿಕಾರಿ ಕೆ.ಶಿವರಾಮ್ ಮಾತನಾಡಿದರು.

ಸೊಕ್ಕೆ ತಿಪ್ಪೇಸ್ವಾಮಿ, ಶಿವಾನುಭವ ಚರವರ್ಯ ಕರಿವೃಷಭ ದೇಶಿಕೇಂದ್ರ ಶಿವಯೊಗೀಶ್ವರ ಸ್ವಾಮೀಜಿ, ಮಂಡ್ಯ ಶಾಸಕ ರವಿಕುಮಾರ್ ಗಾಣಿಗ, ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ, ಆರ್‌ಎಸ್‌ಎಸ್ ಮುಖಂಡ ಎನ್‌.ತಿಪ್ಪೇಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಸಗೋಡು ಜಯಸಿಂಹ, ಉದ್ಯಮಿ ಪರ್ವತಶೆಟ್ಟಿ, ಚಿತ್ರನಟರಾದ ಡಾಲಿ ಧನಂಜಯ್, ನಾಗಭೂಷಣ್, ಸಂಗೀತ ನಿರ್ದೇಶಕ ಅನೂಪ್ ಸಿಳೀನ್, ತಹಶೀಲ್ದಾರ್ ಕಲೀಂಉಲ್ಲಾ, ಕೆಪಿಸಿಸಿ ಎಸ್‌ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಸದಸ್ಯರ ಕಲ್ಲೇಶ್‌ರಾಜ್ ಪಟೇಲ್, ಮುಖಂಡರಾದ ಎ.ಎಂ.ಮರುಳಾರಾಧ್ಯ, ಸೊಕ್ಕೆ ನಾಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿರುಮಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT