ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಪದ್ಧತಿ ನಿರ್ಮೂಲನೆಗೆ ಕೈಜೋಡಿಸಿ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್
Last Updated 24 ಜುಲೈ 2019, 14:40 IST
ಅಕ್ಷರ ಗಾತ್ರ

ದಾವಣಗೆರೆ: ದೇವದಾಸಿ ಮಹಿಳೆಯರಿಗೆ ಉಚಿತವಾಗಿ ಕಾನೂನು ಅರಿವು ಹಾಗೂ ನೆರವು ಒದಗಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್ ಹೇಳಿದರು.

ಇಲ್ಲಿನ ರೋಟರಿ ಬಾಲಭವನದಲ್ಲಿ ಬುಧವಾರ ನಡೆದ ದೇವದಾಸಿ ಮಹಿಳೆಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಲವು ಮಾತೆಯರು ದೇವದಾಸಿ ಪದ್ಧತಿಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಅಂತಹವರನ್ನು ಪ್ರೋತ್ಸಾಹಿಸಬೇಕು. ಈ ಅನಿಷ್ಠ ಪದ್ಧತಿಯನ್ನು ಮಕ್ಕಳು ಹಾಗೂ ಮೊಮ್ಮಕ್ಕಳು ಮುಂದುವರಿಸಿಕೊಂಡು ಹೋಗದ ಹಾಗೆ ಶಿಕ್ಷಣ ನೀಡಬೇಕು ಹಾಗೂ ಸಮಾಜದಲ್ಲಿ ಗೌರವಯುತ ಬದುಕನ್ನು ಕಲ್ಪಿಸುವ ಮೂಲಕ ಹೆಣ್ಣಿನ ನೆಲೆಗಟ್ಟನ್ನು ಕಾಣಬೇಕು ಎನ್ನುವ ಉದ್ದೇಶವಿದೆ. ಕಾನೂನು ತೊಡಕುಗಳು ಇದ್ದರೆ ನಿಮ್ಮ ಸಮಸ್ಯೆಯನ್ನು ಮುಕ್ತವಾಗಿ ಹೇಳಿದರೆ ಪ್ರಾಧಿಕಾರ ಕೈಜೋಡಿಸುತ್ತದೆ’ ಎಂದು ಹೇಳಿದರು.

‘ದೇವದಾಸಿಯರಿಗೆ ಹಲವು ಸಮಸ್ಯೆಗಳು ಇರುತ್ತವೆ. ಆಸ್ತಿ ಒತ್ತುವರಿ, ನಿಮ್ಮ ಜಮೀನನ್ನು ಬೇರೆಯವರು ಆಕ್ರಮಿಸಿಕೊಂಡಿರುತ್ತಾರೆ. ಮಾಸಾಶನ ಅರ್ಜಿಗಳು ಕೆಲವು ಸಲ ವಿಲೇವಾರಿಯಾಗಿರುವುದಿಲ್ಲ. ನೀವು ಅನಕ್ಷರಸ್ಥರಾದ್ದರಿಂದ ಕೋರ್ಟ್‌ಗೆ ಹೋಗಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ನಿಮ್ಮ ಸಮಸ್ಯೆಯನ್ನು ಪ್ರಾಧಿಕಾರಕ್ಕೆ ತಿಳಿಸಿದರೆ ಕಾನೂನಿನಲ್ಲಿ ಏನೆಲ್ಲ ಸೌಲಭ್ಯಗಳು ಇವೆಯೋ ಅವೆಲ್ಲವನ್ನು ಕೊಡಿಸಲು ಯತ್ನಿಸುತ್ತೇವೆ’ ಎಂದು ಹೇಳಿದರು.

‘ಸರ್ಕಾರಿ ಅಧಿಕಾರಿಗಳು ನಿಮಗೆ ಸೇರಬೇಕಾಗಿರುವ ಸೌಲಭ್ಯವನ್ನು ನೀಡದೇ ಇದ್ದಲ್ಲಿ ಅಧಿಕಾರಿಗಳನ್ನು ಕರೆಸಿ ಚರ್ಚಿಸಲಾಗುವುದು. ಕಾನೂನು ಪ್ರಕಾರ ಕೊಡದಿದ್ದರೆ ಅಧಿಕಾರಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುತ್ತೇವೆ. ದೇವದಾಸಿಯಂತಹ ಅನಿಷ್ಠ ಪದ್ಧತಿ ನಿರ್ಮೂಲನೆಗೆ ನೀವು ಸಹಾಯ ಮಾಡಬೇಕು. ನೀವು ಇದನ್ನು ನಿಲ್ಲಿಸಿದರೆ ಸಮಾಜದಲ್ಲಿರುವ ಇತರ ಕೆಟ್ಟ ಪಿಡುಗುಗಳನ್ನು ತೊಲಗಿಸಬಹುದು. ಯಾರೋ ಒಬ್ಬರಿಗೆ ದಾಸರಾಗಿ ಬಾಳುವುದಕ್ಕಿಂತ ಸಮಾಜದಲ್ಲಿ ನಿಮ್ಮದೇ ಆದ ಗೌರವಯುತ ಬದುಕು ಕಟ್ಟಿಕೊಳ್ಳಬಹುದು. ತಮ್ಮ ಸುಖಕ್ಕಾಗಿ ಮತ್ತೊಬ್ಬರನ್ನು ಬಲಿ ತೆಗೆದುಕೊಳ್ಳುವ ಪದ್ಧತಿಯಿಂದ ದೂರ ಉಳಿಯಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌.ಅರುಣ್‌ಕುಮಾರ್ ಮಾತನಾಡಿ, ‘ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಪ್ರಗತಿ ಸಾಧಿಸಿದ್ದು, ಇಂತಹ ಮಹಿಳೆಯನ್ನು ಪುರುಷ ಸಮಾಜ ಭೋಗದ ವಸ್ತುವನ್ನಾಗಿ ಮಾಡಿಕೊಂಡು ದೇವದಾಸಿ ಪದ್ಧತಿಗೆ ದೂಡಿದೆ. ಮಹಿಳೆಯರು ಶೋಷಣೆಗೊಳಗಾಗಲು ಇಂತಹ ಹೀನ ಪದ್ಧತಿ ಕಾರಣ. ಬಡವರು ಹಾಗೂ ಹಿಂದುಳಿದವರು ಹೆಚ್ಚಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಇದನ್ನು ತೊಲಗಿಸಬೇಕಾದರೆ ಕಾನೂನು ಅರಿವು ಮುಖ್ಯ. ಶಿಕ್ಷಣವೇ ಇದಕ್ಕೆ ಮದ್ದು’ ಎಂದು ಹೇಳಿದರು.

ವಕೀಲ ದಯಾನಂದ ‘ದೇವದಾಸಿ ಸಮರ್ಪಣಾ ನಿಷೇಧ ಕಾಯ್ದೆ ಮತ್ತು ಪ್ರಕೃತಿ ವಿಕೋಪಕ್ಕೊಳಗಾದವರಿಗೆ ಪರಿಹಾರ ಯೋಜನೆ’ ವಿಷಯ ಕುರಿತು ಮಾತನಾಡಿ, ‘ಬಡತನ, ನಿರುದ್ಯೋಗ, ಸಾಮಾಜಿಕ, ಆರ್ಥಿಕ ಇತರ ಕಾರಣಗಳಿಗಾಗಿ ದೇವದಾಸಿಯರಾಗುತ್ತಾರೆ. ಇದು ಮುಂದುವರಿದರೆ ವೇಶ್ಯಾವೃತ್ತಿಗೆ ದೂಡಲ್ಪಡುತ್ತಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ’ ಎಂದು ಹೇಳಿದರು.

‘ದೇವದಾಸಿ ಪದ್ಧತಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ ಕೇರಳದಲ್ಲಿ ಇದೆ. ದಾವಣಗೆರೆಯಲ್ಲಿ ಉಚ್ಚಂಗೆಮ್ಮನ ಗುಡ್ಡ, ಬೆಳಗಾವಿಯ ಸವದತ್ತಿ ಎಲ್ಲಮ್ಮ, ಶಿವಮೊಗ್ಗದ ಚಂದ್ರಗುತ್ತಿ ಹಾಗೂ ಕೊಳ್ಳೇಗಾಲದ ಕೆಲವು ದೇವಾಲಯಗಳಲ್ಲಿ ಜೀವಂತವಾಗಿದ್ದು, ಇದನ್ನು ತೊಲಗಿಸಬೇಕಿದೆ. ದೇವದಾಸಿ ಪದ್ಧತಿಗೆ ದೂಡುವವರಿಗೆ 3 ವರ್ಷಗಳ ಕಾಲ ಶಿಕ್ಷೆ ಹಾಗೂ ₹ 5 ಸಾವಿರದವರೆಗೂ ದಂಡ ವಿಧಿಸಲಾಗುತ್ತಿದೆ’ ಎಂದು ಎಚ್ಚರಿಕೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ಎಂ.ಪೂರ್ಣಿಮಾ ‘ಮಹಿಳಾ ಕಾನೂನುಗಳು’ ಕುರಿತು ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಟಿ.ಮಂಜುನಾಥ್‌ ಅಧ್ಯಕ್ಷತೆ ವಹಿಸಿದ್ದರು. ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪ್ರಜ್ಞಾ ಜಯರಾಜ್ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಅಂಕಿ ಅಂಶ

982 - ಹರಪನಹಳ್ಳಿ ತಾಲ್ಲೂಕಿನಲ್ಲಿರುವವರು

1,610 - ಜಿಲ್ಲೆಯಲ್ಲಿರುವ ದೇವದಾಸಿಯರ ಸಂಖ್ಯೆ

2,592 - ದೇವದಾಸಿಯರ ಒಟ್ಟು ಸಂಖ್ಯೆ

₹ 3 ಸಾವಿರ - ಮಾಸಾಶನ ಹೆಚ್ಚಳಕ್ಕೆ ಆಗ್ರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT