ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುಶಿಕ್ಷಿತರಿಂದಲೇ ಮೌಢ್ಯಾಚರಣೆಗೆ ಪ್ರೇರಣೆ: ರಾಮಚಂದ್ರಪ್ಪ ವಿಷಾದ

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಕಾರ್ಯಾಗಾರ
Published 21 ಮೇ 2024, 5:10 IST
Last Updated 21 ಮೇ 2024, 5:10 IST
ಅಕ್ಷರ ಗಾತ್ರ

ಹರಿಹರ: ‘ಉನ್ನತ ಶಿಕ್ಷಣ ಪಡೆದವರು, ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳೇ ಮೌಢ್ಯಕ್ಕೆ ಶರಣಾಗಿರುವುದು ವಿಷಾದನೀಯ’ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು. 

ನಗರ ಹೊರವಲಯದ ಮೈತ್ರಿವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ರಾಜ್ಯಮಟ್ಟದ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

‘ಮೌಢ್ಯ ಆಚರಣೆ ಹಾಗೂ ಮೌಢ್ಯಾಚರಣೆಗೆ ಪ್ರಚೋದಿಸುವುದು ಸಮಾಜದ ಪ್ರಗತಿಗೆ ಮಾರಕವಾಗಿದ್ದು, ಅವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದರು. 

‘ಕೋವಿಡ್ ಸಂದರ್ಭದಲ್ಲಿ ದೇಶದ ಜನರಿಗೆ ಧೈರ್ಯ ತುಂಬುವ ಹಾಗೂ ವೈಜ್ಞಾನಿಕ ಮಾಹಿತಿಗಳನ್ನು ಒದಗಿಸಬೇಕಾದ ಜವಾಬ್ದಾರಿಯುತ ವ್ಯಕ್ತಿಗಳೇ ಚಪ್ಪಾಳೆ ತಟ್ಟಿ, ದೀಪ ಬೆಳಗಿಸಿ, ಗಂಟೆ ಬಾರಿಸಿ ಎಂದು ಜನರನ್ನು ಮೌಢ್ಯಕ್ಕೆ ಪ್ರಚೋದಿಸಿದ್ದು ಎಷ್ಟು ಸರಿ? ಇಂತಹ ಮೌಢ್ಯಗಳನ್ನು ಜನರು ಪ್ರಶ್ನಿಸುವಂತಾಗಬೇಕು’ ಎಂದು ಹೇಳಿದರು. 

‘ವಿಜ್ಞಾನ ಮತ್ತು ತಂತ್ರಜ್ಞಾನ ಯಾವುದೇ ಧರ್ಮ, ಸಮುದಾಯ, ಆಧ್ಯಾತ್ಮದ ವಿರೋಧಿಯಲ್ಲ. ನಾವು ಆಚರಿಸುವ ಆಚರಣೆ, ಪರಂಪರೆ ಎಷ್ಟರ ಮಟ್ಟಿಗೆ ಸೂಕ್ತ ಎಂಬುದನ್ನು ವಿಜ್ಞಾನ, ತಂತ್ರಜ್ಞಾನದ ತಕ್ಕಡಿಯಲ್ಲಿಟ್ಟು ವಿಮರ್ಶೆ ಮಾಡುವ ಗುಣ ಜನ ಸಾಮಾನ್ಯರಲ್ಲಿ ಬೆಳೆಸಬೇಕಿದೆ. ದೇಶವಾಸಿಗಳು ಪ್ರಜ್ಞಾವಂತರಾದರೆ ದೇಶ ಮತ್ತಷ್ಟು ಸುಭದ್ರವಾಗಿರಲು ಸಾಧ್ಯ’ ಎಂದರು. 

‘ನಮ್ಮ ಸಮಿತಿ ಜೊತೆಗೆ ಬದ್ಧತೆಯಿಂದ ದುಡಿಯುವ ನೂರಾರು ಕಾರ್ಯಕರ್ತರಿದ್ದು, ಅವರ ಮೂಲಕ ಮುಂದಿನ ದಿನಗಳಲ್ಲಿ ನಾಡಿನಲ್ಲಿ ವೈಜ್ಞಾನಿಕ ಜಾಗೃತಿ ಆಂದೋಲನ ರೂಪಿಸಲಾಗುವುದು’ ಎಂದು ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ಆರ್.ಎನ್.ರಾಜಾನಾಯ್ಕ ಹೇಳಿದರು. 

ಸಮಿತಿಯ ನಿರ್ದೇಶಕ ರವೀಂದ್ರನಾಥ್ ಸಿರಿವರ, ಕಾರ್ಯದರ್ಶಿ ಈ.ಬಸವರಾಜ್, ಖಜಾಂಚಿ ಕೆ.ಬಿ.ಮಹೇಶ್ವರಪ್ಪ, ಸದಸ್ಯರಾದ ವರಲಕ್ಷ್ಮಿ, ಸಿದ್ಧರಾಮ ರೆಡ್ಡಿ, ಎಂ.ಗುರುಸಿದ್ಧಸ್ವಾಮಿ, ರವಿ ಪ್ರಸಾದ್, ಶಾಂತಕುಮಾರ್, ಕೆ.ವಿ.ಜಗನ್ನಾಥ್, ಎಚ್.ಕೆ.ಎಸ್. ಸ್ವಾಮಿ, ಮಂಜೇಗೌಡ, ಶಿಕ್ಷಕರಾದ ಬಿ.ಅರುಣ್‌ಕುಮಾರ್, ರಿಯಾಜ್ ಅಹಮದ್, ಮಲ್ಲಿಕಾರ್ಜುನ ಅಂಗಡಿ, ಶೋಭಾ ಇದ್ದರು.

ಹರಿಹರದ ಮೈತ್ರಿವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಹಲವು ಮುಖಂಡರು ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು
ಹರಿಹರದ ಮೈತ್ರಿವನದಲ್ಲಿ ನಡೆದ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಹಲವು ಮುಖಂಡರು ಹಾಗೂ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT