ದಾವಣಗೆರೆ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಬುಧವಾರ ನಗರದಲ್ಲಿ ನಡೆದ ‘ಕರುನಾಡ ಸವಿಯೂಟ’ ಅಡುಗೆ ಸ್ಪರ್ಧೆಯಲ್ಲಿ ದಾವಣಗೆರೆಯ ಅತ್ತೆ–ಸೊಸೆಯರಾದ ಅಶ್ವಿನಿ ಕಲಬುರ್ಗಿ ಹಾಗೂ ಅಂಜಲಿ ಕಲಬುರ್ಗಿ ಪ್ರಥಮ ಸ್ಥಾನ ಪಡೆದು,
₹10,000 ಬಹುಮಾನ ಗೆದ್ದರು.
ದಾವಣಗೆರೆಯ ಸುನಂದಾ ವರ್ಣೇಕರ್ ದ್ವಿತೀಯ ಸ್ಥಾನ ಪಡೆದಿದ್ದು, ₹7,000 ಹಾಗೂ ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿನ ಕಾವ್ಯಾ ಎಸ್.ಬೆಲ್ಲದ್ ತೃತೀಯ ಸ್ಥಾನ ಪಡೆದು ₹5,000 ಬಹುಮಾನ ಪಡೆದರು. ಫಿರ್ದೂಸ್ ಖಾನಂ, ಲೀಲಾ ಕೆ.ಬಸವರಾಜ ಹಾಗೂ 9ನೇ ತರಗತಿಯ ಗಂಗೂ ಬಸಪ್ಪ ಸಮಾಧಾನಕರ ಬಹುಮಾನಕ್ಕೆ ಪಾತ್ರರಾದರು.
ದಾವಣಗೆರೆ, ಶಿವಮೊಗ್ಗ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಯವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮನೆಯಲ್ಲೇ ತಯಾರಿಸಿ ತಂದಿದ್ದ ಅಡುಗೆಯನ್ನು ಸ್ಪರ್ಧೆಗೆ ಇರಿಸಿದ್ದರು. ಸಸ್ಯಾಹಾರ ಹಾಗೂ ಮಾಂಸಾಹಾರದ ತರಹೇವಾರಿ ಖಾದ್ಯಗಳ ಪರಿಮಳ ಎಲ್ಲರನ್ನೂ ಸೆಳೆಯಿತು. ‘ಒಗ್ಗರಣೆ ಡಬ್ಬಿ’ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಅಡುಗೆ ರುಚಿ ನೋಡಿ ತೀರ್ಪು ಪ್ರಕಟಿಸಿದರು.
‘ಇಂಡೇನ್’ ಗ್ಯಾಸ್, ‘ಶ್ರೀಕೃಷ್ಣ’ ಶುದ್ಧ ಹಳ್ಳಿತುಪ್ಪ, ಫಿಲಿಪ್ಸ್ ಜೂಸರ್ ಮಿಕ್ಸರ್ ಗ್ರೈಂಡರ್, ಪ್ರೀತಿ ಸಂಸ್ಥೆ, ಎಸ್‌ಎಸ್‌ಪಿ ಹಿಂಗ್, ಇಂಡಿಯಾ ಗೇಟ್ ಬಾಸುಮತಿ ರೈಸ್, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ವೆನ್‌ಕಾಬ್ ಚಿಕನ್ ಮತ್ತು ಸುಜಯ್ ನೀರಾವರಿ ಸಂಸ್ಥೆಗಳ ಸಹಯೋಗ ಇತ್ತು.