ಶುಕ್ರವಾರ, ಏಪ್ರಿಲ್ 3, 2020
19 °C
ಅಕ್ಕಪಕ್ಕದ ರಾಜ್ಯಗಳಿಗೆ ಹೋಗುವವರಿದ್ದಾರೆ, ಉತ್ತರ ಭಾರತಕ್ಕಿಲ್ಲ

ಕೋವಿಡ್‌ -19: ಕಡಿಮೆಯಾಗುತ್ತಿದೆ ದೂರದೂರಿನ ಪಯಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ 19 ಸೋಂಕಿನ ಕಾರಣದಿಂದಾಗಿ ಉತ್ತರ ಭಾರತದ ರಾಜ್ಯಗಳಿಗೆ ಹೋಗುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಅಕ್ಕಪಕ್ಕದ ರಾಜ್ಯಗಳಿಗೆ ಸದ್ಯ ಹೋಗುತ್ತಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಮಕ್ಕಳಿಗೆ ಪರೀಕ್ಷೆ ಇರುವುದರಿಂದ ಪ್ರವಾಸ ಹೋಗುವವರ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಏಪ್ರಿಲ್‌, ಮೇ ತಿಂಗಳಲ್ಲಿ ಪ್ರವಾಸಕ್ಕೆ ಹೋಗಲು ಮಾರ್ಚ್‌ನಲ್ಲಿಯೇ ಪ್ರವಾಸ ಬುಕ್‌ ಮಾಡುತ್ತಾರೆ. ಈ ಬಾರಿ ಈ ರೀತಿ ಮುಂಗಡ ಬುಕ್‌ ಮಾಡುವವರ ಸಂಖ್ಯೆಯೇ ಕಡಿಮೆಯಾಗಿದೆ. ದೆಹಲಿ, ಆಗ್ರಾ, ಶಿಮ್ಲಾ, ಮನಾಲಿಗೆ ಹೋಗುವವರು ಪ್ರತಿವರ್ಷ ಇರುತ್ತಿದ್ದರು. ಈ ಬಾರಿ ಇನ್ನೂ ಬುಕ್‌ ಆಗಿಲ್ಲ ಎನ್ನುತ್ತಾರೆ ಓಯೊ ಟೂರ್ಸ್‌ನ ಗಿರೀಶ್‌.

ಫೆಬ್ರುವರಿ ಕೊನೆಗೆ 14 ಮಂದಿಯ ತಂಡವು ಗುಜರಾತ್‌ಗೆ ಪ್ರವಾಸ ಹೋಗಿ ಬಂದಿದೆ. ಯಾವುದೇ ತೊಂದರೆಯಾಗಿಲ್ಲ. ಕೋವಿಡ್‌ನ ಪರಿಣಾಮ ಪ್ರವಾಸಿಗಳ ಮೇಲೆ ಹೇಗೆ ಬೀರಿದೆ ಎಂಬುದು ಗೊತ್ತಾಗಬೇಕಿದ್ದರೆ ಇನ್ನೊಂದು ತಿಂಗಳು ಕಾಯಬೇಕು ಎನ್ನುವುದು ಅವರ ಅಭಿಪ್ರಾಯ.

‘ಕರ್ನಾಟಕದಲ್ಲಿ ಒಂದೋ ಎರಡೋ ಪ್ರಕರಣಗಳು ಪತ್ತೆಯಾಗಿರಬಹುದು. ಇದು ದಾವಣಗೆರೆಯ ಪ್ರವಾಸಿಗರ ಮೇಲೆ ದೊಡ್ಡ ಪರಿಣಾಮ ಬೀರಿಲ್ಲ. ನಮ್ಮ ಟೂರಿಸ್ಟ್‌ ಮೂಲಕ ತೇಕಡಿ, ಮನ್ನಾರ್‌ಗೆ ಪ್ರವಾಸ ಹೋಗಿ ಬರಲಾಗಿದೆ. ನಿನ್ನೆ ಒಂದು ತಂಡ ಊಟಿಗೆ ಹೋಗಿದೆ. ಮುಂದಿನ ವಾರ ಮಹಾರಾಷ್ಟ್ರ, ಗೋವಾಗೆ ಹೋಗಲು ಬುಕ್ಕಿಂಗ್‌ ಆಗಿದೆ’ ಎಂದು ದೀಕ್ಷಿತ್‌ ಟೂರಿಸ್ಟ್‌ನ ಕೆ.ಡಿ. ದೀಕ್ಷಿತ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಸುತ್ತಮುತ್ತಲ ಜಿಲ್ಲೆಗಳಿಗೆ, ಅಕ್ಕಪಕ್ಕದ ರಾಜ್ಯಗಳಿಗೆ ಜನ ಹೋಗುತ್ತಿದ್ದಾರೆ. ಉತ್ತರ ಭಾರತ, ವಿದೇಶಗಳಿಗೆ ಮಾತ್ರ ಹೋಗುವವರು ಕಡಿಮೆ. ಕೋವಿಡ್‌ 19 ಬಗ್ಗೆ ದಾವಣಗೆರೆಯ ಜನರು ತಲೆ ಕೆಡಿಸಿಕೊಂಡಿಲ್ಲ’ ಎನ್ನುತ್ತಾರೆ ಅವರು.

ಮಾಧ್ಯಮಗಳಲ್ಲಿ ಬರುತ್ತಿರುವ ‘ಭಾರಿ ಆತಂಕ’ ಎಂಬ ಸುದ್ದಿಗಳನ್ನು ಹೊರತುಪಡಿಸಿ ಈ ಬಗ್ಗೆ ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮಗಳು ಆಗಿಲ್ಲ. ನಮ್ಮ ಜನಪ್ರತಿನಿಧಿಗಳು ಅವರದ್ದೇ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ. ಸರ್ಕಾರ ಸರಿಯಾದ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು