ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿ ನಿವೇಶನದಲ್ಲಿ ಸಾಹಿತಿ ಫೈಜ್ನಟ್ರಾಜ್ ಸಾವಯವ ಕೃಷಿ

ಮಿಶ್ರಬೆಳೆ ಬೆಳೆದು ಮನೆಯ ಅಗತ್ಯ ಪೂರೈಕೆ
Last Updated 7 ಜುಲೈ 2021, 9:51 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಕೈ ತೋಟದೊಳಗೆ ಹೆಜ್ಜೆ ಇಟ್ಟರೆ ಹಚ್ಚ ಹಸಿರಿನ ಸ್ವಾಗತ, ವೈವಿಧ್ಯಮಯ ಸಸ್ಯರಾಶಿ, ಸರಳ ಕೃಷಿ ತಂತ್ರಜ್ಞಾನದ ಅಳವಡಿಕೆ, ಪ್ರಾಕೃತಿಕ ಸೊಬಗಿನ ಮೆರುಗು, ಸಾವಯವ ಪದ್ಧತಿಯಲ್ಲಿ ಆರೈಕೆ...

ಇದು ಸಾಹಿತ್ಯ ಕೃಷಿ ಜೊತೆಗೆ ಮಣ್ಣಿನ ಕೃಷಿಯನ್ನೂ ಕೈಗೊಂಡಿರುವ ಸಂತೇಬೆನ್ನೂರಿನ ಸಾಹಿತಿ ಫೈಜ್ನಟ್ರಾಜ್ ಅವರ ಕೈ ಚಳಕದಲ್ಲಿ ಚಿಗುರೊಡೆದಿರುವ ಕೈ ತೋಟದ ಚಿತ್ರಣ. ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾಗಿರುವ ಫೈಜ್ನಟ್ರಾಜ್ ಅವರು ಕೊರೊನಾ ಮೊದಲನೇ ಅಲೆಯ ಕಾರಣ ಲಾಕ್‌ಡೌನ್‌ ಘೋಷಿಸಿದ್ದ ಸಂದರ್ಭದಲ್ಲಿ ತಮ್ಮ ಮನೆಯ ಪಕ್ಕದಲ್ಲೇ ಇರುವ 25x75 ಖಾಲಿ ನಿವೇಶನದಲ್ಲಿ ಕೃಷಿ ಆರಂಭಿಸಿದರು. ಕಾಲದ ಸದ್ಬಳಕೆಯಿಂದಾಗಿ ಕೈ ತೋಟವು ನಳನಳಿಸುತ್ತಿದೆ. ಸಾವಯವ ಪದ್ಧತಿಯಿಂದ ಗಿಡ-ಮರಗಳು ಸಮೃದ್ಧವಾಗಿ ಬೆಳೆದಿವೆ.

ತೆಂಗು, ಅಡಿಕೆ, ಹಣ್ಣು, ತರಕಾರಿ, ಸೊಪ್ಪು ಮಿಶ್ರ ಬೆಳೆಯಿಂದ ಮನೆಯ ಅಗತ್ಯವನ್ನು ಪೂರೈಸಿಕೊಳ್ಳುತ್ತಿದ್ದಾರೆ. ಉತ್ತಮ ಆದಾಯಕ್ಕಾಗಿ 55 ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಸುತ್ತ ತೆಂಗಿನ ಮರಗಳಿವೆ. ಬಾಳೆ, ಸಪೋಟ, ಮಾವು, ನೇರಳೆ, ದಾಳಿಂಬೆ, ಸೀತಾಫಲ, ಪಪ್ಪಾಯ, ಪೇರಲ ಹಣ್ಣಿನ ಮರಗಳನ್ನೂ ಅಲ್ಲಲ್ಲಿ ನೆಡಲಾಗಿದೆ. ತರಕಾರಿ ಹಾಗೂ ಸೊಪ್ಪಿನ ಮಡಿಗಳು ಇವೆ. ಮನೆಗೆ ಬಳಸುವ ಹೆಚ್ಚುವರಿ ನೀರನ್ನು ಕೈ ತೋಟದ ಕಡೆ ತಿರುಗಿಸಲಾಗಿದೆ. ನೀರು ಪೋಲು ಮಾಡುವ ಬದಲು ಗಿಡ-ಮರ ಬೆಳೆಸಲು ಬಳಸಿರುವುದು ತೃಪ್ತಿ ನೀಡಿದೆ ಎನ್ನುತ್ತಾರೆ ಫೈಜ್ನಟ್ರಾಜ್.

‘ಪಕ್ಕದಲ್ಲೇ ದನ ಕಟ್ಟುವುದರಿಂದ ಗಂಜಲ ಸಂಗ್ರಹಿಸುತ್ತೇನೆ. ಅದನ್ನು ಬೃಹತ್ ಪ್ಲಾಸ್ಟಿಕ್ ಟ್ಯಾಂಕ್‌ನಲ್ಲಿ ಹಾಕಿ ಜೀವಾಮೃತ ತಯಾರಿಸುತ್ತೇನೆ. ಮನೆಯ ಹಸಿ ತ್ಯಾಜ್ಯವನ್ನು ಗುಂಡಿಯಲ್ಲಿ ಸಂಗ್ರಹಿಸುತ್ತೇನೆ. ಇದರಿಂದ ನಾಟಿ ಗೊಬ್ಬರ ತಯಾರಾಗುತ್ತದೆ. ಆಗಾಗ್ಗೆ ಗಿಡ-ಮರಗಳಿಗೆ ಕೊಡುವುದರಿಂದ ಸಮೃದ್ಧವಾಗಿ ಬೆಳೆಯುತ್ತಿವೆ. ಲಾಕ್‌ಡೌನ್ ಸಮಯದಲ್ಲಿ ಕೈ ತೋಟದಲ್ಲಿ ಕಾಲ ಕಳೆಯುವುದು ಮುದ ನೀಡಿದೆ. ಔಷಧ ಬಳಸದೆ ಸಣ್ಣ ಪ್ರಮಾಣದ ಕೃಷಿ ಸಾಧ್ಯವಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT