ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೆಳೆಗೆ ಕೆರೆ ನೀರು; ಪಶು–ಪಕ್ಷಿಗಳಿಗೆ ಸಂಕಷ್ಟ

ಟ್ಯಾಂಕರ್‌ ಮೂಲಕ ನೀರು; ಕೊಂಡಜ್ಜಿ ಕೆರೆಗೆ ನಿತ್ಯ ಕನ್ನ
Published 30 ಮಾರ್ಚ್ 2024, 7:48 IST
Last Updated 30 ಮಾರ್ಚ್ 2024, 7:48 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿಯ ವಿಶಾಲ ಕೆರೆಯು ಬರಗಾಲದ ಹಿನ್ನೆಲೆಯಲ್ಲಿ ಸಂಪೂರ್ಣ ಖಾಲಿಯಾಗುವ ಹಂತ ತಲುಪಿದ್ದು, ಅಳಿದುಳಿದಿರುವ ಒಂದಷ್ಟು ನೀರನ್ನೂ ರೈತರು ಟ್ಯಾಂಕರ್‌ಗಳ ಮೂಲಕ ‘ಖಾಲಿ’ ಮಾಡುತ್ತಿರುವುದರಿಂದ ಕೆರೆಯನ್ನೇ ನೆಚ್ಚಿಕೊಂಡಿರುವ ಪಶು– ಪಕ್ಷಿಗಳಿಗೆ ಅಪಾಯ ಎದುರಾಗಿದೆ.

ಕೆರೆಯ ಒಡಲು ಈಗಾಗಲೇ ಬಹುತೇಕ ಬರಿದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೆರೆಯು ನೀರಿಲ್ಲದೇ ಸಂಪೂರ್ಣ ಒಣಗಿ ಹೋಗಲಿದೆ. ಪರಿಸ್ಥಿತಿ ಹೀಗಿರುವಾಗ ರೈತರು ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳನ್ನು ಉಳಿಸಿಕೊಳ್ಳಲು ಕೆರೆಯ ನೀರಿನ ಮೊರೆ ಹೋಗಿದ್ದಾರೆ. ಇದರಿಂದಾಗಿ ಸುಡು ಬೇಸಿಗೆಯಲ್ಲಿ ಕೆರೆಯ ನೀರನ್ನೇ ಆಶ್ರಯಿಸಿರುವ ಪ್ರಾಣಿ– ಪಕ್ಷಿಗಳ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ.

ಕೊಂಡಜ್ಜಿ ಕೆರೆಯ ಸುತ್ತಮುತ್ತ ದಟ್ಟ ಅರಣ್ಯ ಪ್ರದೇಶವಿದೆ. ಈ ಕಾನನದಲ್ಲಿ ಜಿಂಕೆ, ನವಿಲು, ಮೊಲ, ಮುಂಗುಸಿ, ಕೆಂಪು ಮೂತಿಯ ಮುಸಿಯಾಗಳು, ಅಪಾರ ಪ್ರಬೇಧದ ಪಕ್ಷಿಗಳು ನೆಲೆ ಕಂಡುಕೊಂಡಿವೆ. ವಿವಿಧ ಪ್ರಬೇಧದ ವಲಸೆ ಪಕ್ಷಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತವೆ. ಅಳಿವಿನಂಚಿನಲ್ಲಿರುವ ಚಿಟ್ಟೆಗಳೂ ಈ ಭಾಗದಲ್ಲಿರುವುದು ವಿಶೇಷ.

ಆದರೆ, ಕೆರೆಯಿಂದ ನಿತ್ಯವೂ ಹತ್ತಾರು ಟ್ಯಾಂಕರ್‌ಗಳ ಮೂಲಕ ನಿರಂತರವಾಗಿ ನೀರು ಕೊಂಡೊಯ್ಯಲಾಗುತ್ತಿದೆ. ಕೆರೆಯ ಎಲ್ಲ ದಿಕ್ಕುಗಳಿಂದಲೂ ಟ್ಯಾಂಕರ್‌ಗಳಿಗೆ ನೀರು ತುಂಬಿಸಿಕೊಳ್ಳಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಕೆಲವೇ ದಿನಗಳಲ್ಲಿ ಕೆರೆ ಬರಿದಾಗಿ ಬಟಾಬಯಲಿನಂತಾಗಲಿದೆ.

ಕೆಲವೆಡೆ ರೈತರು ಪ್ರಾಣಿ – ಪಕ್ಷಿಗಳ ಮೇಲಿನ ಪ್ರೀತಿಯಿಂದ ಅವುಗಳ ಉಳಿವಿಗಾಗಿ ತಮ್ಮ ಜಮೀನಿನ ಕೊಳವೆಬಾವಿ ನೀರನ್ನು ಕೆರೆ–ಕಟ್ಟೆ, ನದಿಗೆ ಹರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಆದರೆ ಅದಕ್ಕೆ ತದ್ವಿರುದ್ಧ ಎಂಬಂತೆ ಇಲ್ಲಿ ಪ್ರಾಣಿ ಪಕ್ಷಿಗಳಿಗೆ ಮೀಸಲಿರಬೇಕಿರುವ ಅಲ್ಪ ಪ್ರಮಾಣದ ನೀರನ್ನೂ ಪಡೆಯುವ ಕೆಲಸ ನಡೆಯುತ್ತಿದೆ.

‘ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಮನುಷ್ಯರು ಇದನ್ನು ಅರಿಯಬೇಕು. ಪ್ರಾಣಿ ಪಕ್ಷಿಗಳ ಉಳಿವಿಗಾಗಿಯಾದರೂ, ರೈತರು ಕೆರೆಯ ನೀರನ್ನು ಬೆಳೆಗಳಿಗಾಗಿ ಬಳಸುವುದನ್ನು ನಿಲ್ಲಿಸಬೇಕು’ ಎನ್ನುತ್ತಾರೆ ‘ಪರಿಸರಕ್ಕಾಗಿ ನಾವು ಸಂಸ್ಥೆ’ಯ ಜಿಲ್ಲಾ ಸಂಚಾಲಕ ಜಬಿ ಉಲ್ಲಾ ಚುಟ್ಗಿ.

ಕೆರೆಯ ನೀರು ಸಂಪೂರ್ಣ ಖಾಲಿಯಾಗುವುದರಿಂದ ಕೆರೆಯ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೂ ಸಮಸ್ಯೆ ಉಂಟಾಗಲಿದೆ. ಬೇಸಿಗೆಯ ಬಿಸಿಲಿನಲ್ಲಿ ಈ ಕೆರೆಯ ನೀರನ್ನೇ ಜಾನುವಾರುಗಳೂ ಆಶ್ರಯಿಸಿವೆ ಎಂದು ಅವರು ಹೇಳಿದರು.

ಕೊಂಡಜ್ಜಿ ಕೆರೆಯ ನೀರನ್ನು ಟ್ಯಾಂಕರ್‌ಗಳ ಮೂಲಕ ಸಾಗಿಸುತ್ತಿದ್ದು ಪಕ್ಷಿಗಳು ಜಲಚರಗಳು ಸಂಕಷ್ಟದಲ್ಲಿವೆ
ಕೊಂಡಜ್ಜಿ ಕೆರೆಯ ನೀರನ್ನು ಟ್ಯಾಂಕರ್‌ಗಳ ಮೂಲಕ ಸಾಗಿಸುತ್ತಿದ್ದು ಪಕ್ಷಿಗಳು ಜಲಚರಗಳು ಸಂಕಷ್ಟದಲ್ಲಿವೆ

ಕೊಂಡಜ್ಜಿ ಕೆರೆಯ ನೀರನ್ನು ಬೆಳೆಗಳಿಗೆ ಬಳಸುವುದು ಸರಿಯಲ್ಲ. ಕೆರೆಗೆ ಶನಿವಾರ ಭೇಟಿ ನೀಡಿ ಈ ಬಗ್ಗೆ ಪರಿಶೀಲಿಸಲಾಗುವುದು. ತೋಟ ಜಮೀನುಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದ್ದರೆ ನಿಲ್ಲಿಸಲಾಗುವುದು

–ಗುರುಬಸವರಾಜ ಕೆ.ಎನ್‌. ಹರಿಹರ ತಹಶೀಲ್ದಾರ್‌

ಅರಣ್ಯ ಪ್ರದೇಶದಲ್ಲಿನ ಪ್ರಾಣಿ– ಪಕ್ಷಿಗಳಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುತ್ತಿದೆ. ಅರಣ್ಯದ ಎರಡು ಕಡೆಗಳಲ್ಲಿ ತೊಟ್ಟಿಗಳನ್ನು ನಿರ್ಮಿಸಿ ನಿಯಮಿತವಾಗಿ ನೀರು ಪೂರೈಸಲಾಗುತ್ತಿದೆಯಾದರೂ ಪ್ರಾಣಿ ಪಕ್ಷಿಗಳ ಉಳಿವಿಗೆ ಕೆರೆಯ ನೀರು ಅಗತ್ಯ

–ಮೊಹ್ಮದ್ ಖಾಲಿದ್ ಮುಸ್ತಫಾ ಡಿವೈಆರ್‌ಎಫ್‌ಒ ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT