ಭಾನುವಾರ, ಮಾರ್ಚ್ 26, 2023
24 °C
ಎಲ್ಲೆಡೆ ಪಟಾಕಿಯ ಸಂಭ್ರಮ l ಅಂಗಡಿ, ಹೋಟೆಲ್‌ಗಳಲ್ಲಿ ಪೂಜೆ

ದಾವಣಗೆರೆ: ಸಂಭ್ರಮ, ಭಕ್ತಿಯಿಂದ ನಡೆದ ಲಕ್ಷ್ಮೀ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ದೀಪಾವಳಿಯ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಗುರುವಾರ ನಗರ ಸಹಿತ ಎಲ್ಲ ಕಡೆಗಳಿಂದ ಪಟಾಕಿಯ ಸದ್ದು ಅನುರಣಿಸಿದೆ. ಆಕಾಶದಲ್ಲಿ ಸಿಡಿಮದ್ದುಗಳು ಚಿತ್ತಾರ ಬಿಡಿಸಿದವು. ವ್ಯಾಪಾರಸ್ತರು ತಮ್ಮ ಅಂಗಡಿ, ಹೋಟೆಲ್‌, ಇನ್ನಿತರ ವ್ಯವಹಾರ ಕೇಂದ್ರಗಳನ್ನು ಸ್ವಚ್ಛಗೊಳಿಸಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಮನೆ ಮನೆಗಳಲ್ಲಿ ಶ್ರದ್ಧಾಭಕ್ತಿಯಿಂದ ಲಕ್ಷ್ಮೀ ಪೂಜೆ ನಡೆಯಿತು.

ಬಹುತೇಕರು ವಾಹನಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿದರು. ಅಂಗಡಿ, ಮನೆಗಳನ್ನು ಬಾಳೆ ಕಂದು, ಮಾವಿನಸೊಪ್ಪು, ಕಾಚಿಕಡ್ಡಿ, ಹೂಮಾಲೆಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಹಲವು ಕಡೆಗಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಪ್ರವಾಸಿ ಮಂದಿರ ರಸ್ತೆ, ಪಾಲಿಕೆ ಮುಂಭಾಗ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ, ಗಡಿಯಾರ ಕಂಬ, ಕಾಯಿಪೇಟೆ, ವಿಜಯಲಕ್ಷ್ಮಿ ರಸ್ತೆ, ಚಾಮರಾಜಪೇಟೆ ಸರ್ಕಲ್, ಕೆ.ಆರ್. ಮಾರುಕಟ್ಟೆ, ಮಂಡಿ ಪೇಟೆ, ನಿಟುವಳ್ಳಿ ಸಹಿತ ಎಲ್ಲ ಕಡೆಗಳಲ್ಲಿ ಗುರುವಾರವೂ ಜನಜಂಗುಳಿ ಉಂಟಾಗಿತ್ತು. ವ್ಯಾಪಾರ ಜೋರಾಗಿ ನಡೆಯಿತು. ದಿನಸಿ, ಬಟ್ಟೆ ಅಂಗಡಿಗಳಲ್ಲಿ ಭಾರಿ ಸಂಖ್ಯೆಯಲ್ಲಿ ಗ್ರಾಹಕರು ಸೇರಿದ್ದರು.  ಹೊಸಬಟ್ಟೆ, ಪೂಜಾ ಸಾಮಗ್ರಿ ಖರೀದಿ ಜೋರಾಗಿ ನಡೆಯಿತು. ಬಾಳೆಕಂದು, ಮಾವಿನಸೊಪ್ಪು, ಚೆಂಡು ಹೂವು, ಕಾಕಡ, ಸೇವಂತಿಗೆ, ಬಟನ್‌ ಗುಲಾಬಿ, ಸಹಿತ ವಿವಿಧ ಹೂವುಗಳು, ಕುಂಬಳಕಾಯಿಗೆ ಬೇಡಿಕೆ ಹೆಚ್ಚಿತ್ತು.

ಮನೆ, ಅಂಗಡಿಗಳಲ್ಲಿ ತೂಗು ಹಾಕಲು ಆಕಾಶಬುಟ್ಟಿ ಖರೀದಿಗೆ ಜನ ಉತ್ಸುಕರಾಗಿದ್ದರು. ಹಣತೆಗಳ ಮಾರಾಟವೂ ಜೋರಾಗಿ ನಡೆಯಿತು.

ಗ್ರಾಮೀಣ ಪ್ರದೇಶಗಳಲ್ಲಿ ಪೂಜೆಗಾಗಿ ಬೇಸಾಯದ ಸಲಕರಣೆಗಳಾದ ಕುಂಟೆ, ನೊಗ, ಎತ್ತಿನ ಗಾಡಿ, ನೇಗಿಲು ತೊಳೆದು ಒಟ್ಟಾಗಿ ಜೋಡಿಸಿಟ್ಟರು. ಬಳಿಕ ಅವುಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದರು.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ಗ್ರಾಮದೇವತೆ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ಬನಶಂಕರಿ, ಕರಿಯಮ್ಮ, ಚೌಡಮ್ಮ, ಆಂಜನೇಯ ದೇವಸ್ಥಾನಗಳೂ ಸೇರಿದಂತೆ ಸುತ್ತಮುತ್ತಲಿನ ಎಲ್ಲ ದೇವಸ್ಥಾನಗಳನ್ನು ಸಿಂಗರಿಸಲಾಗಿತ್ತು. ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ನಡೆದವು.

ಪಟಾಕಿಗೆ ಬಂತು ಬೇಡಿಕೆ: ಬುಧವಾರದವರೆಗೆ ಪಟಾಕಿ ಅಂಗಡಿಗಳಲ್ಲಿ ಅಷ್ಟಾಗಿ ವ್ಯಾಪಾರ ಇರಲಿಲ್ಲ. ಗುರುವಾರ ಜನರು ಒಂದೇ ಸಮನೆ ಮುಗಿಬಿದ್ದರು. ಯುವಕರು ಸದ್ದಿನ ಪಟಾಕಿಗಳ ಖರೀದಿಗೆ ಹೆಚ್ಚಿನ ಒತ್ತು ನೀಡಿದರು. ಮಹಿಳೆಯರು ಸದ್ದಿಲ್ಲದ, ಅಪಾಯವಿಲ್ಲದ ಸುರುಸುರು ಕಡ್ಡಿ, ನೆಲಚಕ್ರ ಮುಂತಾದ ಬೆಳಕಿನ ಪಟಾಕಿಗಳಿಗೆ ಆದ್ಯತೆ ನೀಡುತ್ತಿರುವುದು ಕಂಡು ಬಂತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.