ಮಂಗಳವಾರ, ಜನವರಿ 28, 2020
29 °C

‘ಭ್ರೂಣಲಿಂಗ ಪತ್ತೆ ಮಾಡಿದಲ್ಲಿ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಾನೂನಿನ ಪ್ರಕಾರ ಭ್ರೂಣ ಲಿಂಗ ಪತ್ತೆ ಮಾಡುವ ಹಾಗಿಲ್ಲ. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮಾಡುವವರು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ಪಕ್ಷ ಲಿಂಗ ಪತ್ತೆ ಮಾಡಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ಜಿಲ್ಲಾ ಪಿ.ಸಿ.ಅಂಡ್ ಪಿ.ಎನ್.ಡಿ.ಟಿ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ‘ಹೆಣ್ಣು ಮಗುವನ್ನು ಉಳಿಸಿ, ಬೆಳೆಸಿ, ಓದಿಸಿ, ಸಂರಕ್ಷಿಸಿ’ ಎಂಬ ಘೋಷವಾಕ್ಯದಡಿ ಜಿಲ್ಲೆಯ  ತಜ್ಞ ವೈದ್ಯರಿಗೆ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಕಾಯ್ದೆ ಕುರಿತು ರಂಗಮಹಲ್‌ನಲ್ಲಿ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವೈದ್ಯರು, ವಕೀಲರು ಸೇರಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವೃತ್ತಿಯಲ್ಲಿರುವವರು ಕಾಯ್ದೆ ಪ್ರಕಾರ ಲಿಂಗ ಪತ್ತೆ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಗಂಭೀರ ಅಪರಾಧ ಎಂಬುದು ನಿಮಗೆ ತಿಳಿದಿದೆ. ಆದರೂ ಈ ಅಪರಾಧ ಮಾಡಿದರೆ ಸಹಿಸುವುದಿಲ್ಲ. ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಸ್ಕ್ಯಾನಿಂಗ್ ಕೇಂದ್ರಗಳಿಗೆ ಮಾರುವೇಷದಲ್ಲಿ ಭೇಟಿ ನೀಡಿ ಪರಿಶೀಲಿಸುತ್ತೇವೆ’ ಎಂದು ಎಚ್ಚರಿಸಿದರು.

ಲಿಂಗ ಪತ್ತೆ ಕಾನೂನು ಬಾಹಿರ. ಹೆಣ್ಣು ಭ್ರೂಣ ಹತ್ಯೆಗಳು ನಡೆದರೆ ಅದರ ಬಗ್ಗೆ ನಮಗೆ ಮಾಹಿತಿ ಸಿಗುತ್ತದೆ. ಆದ್ದರಿಂದ ನೀವು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಲಿಂಗಾನುಪಾತ ಸಾವಿರ ಗಂಡಿಗೆ 946 ಹೆಣ್ಣು ಇದೆ. ಇದನ್ನು ಸುಧಾರಣೆಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಕೆಂಗಬಾಲಯ್ಯ ಮಾತನಾಡಿ, ‘ಹೆಣ್ಣೆಂದರೆ ಅಭದ್ರತೆ, ಸಮಸ್ಯೆ ಹೆಚ್ಚು ಎಂದು ಒಂದು ವರ್ಗ ಯೋಚಿಸಿ ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗುತ್ತಿದ್ದರೆ, ಸುಶಿಕ್ಷಿತ ವರ್ಗ ತಮ್ಮ ಕುಟುಂಬ ಬೆಳೆಯಲು ಗಂಡು ಬೇಕೆಂಬ ಆಸೆಯಿಂದ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿದೆ. ಸರ್ಕಾರವೇ ಭಾಗ್ಯಲಕ್ಷ್ಮೀ ಬಾಂಡ್, ಸುಕನ್ಯಾ ಸುರಕ್ಷಾ ಸೇರಿ ವಿವಿಧ ಯೋಜನೆ ಮೂಲಕ ಹೆಣ್ಣನ್ನು ಉಳಿಸಲು ಜವಾಬ್ದಾರಿ ಹೊತ್ತಿದೆ. ಹೆಣ್ಣಾಗಲಿ, ಗಂಡಾಗಲಿ ಮಕ್ಕಳನ್ನು ಬೆಳೆಸುವುದು ನಮ್ಮ ಜವಾಬ್ದಾರಿ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ‘ಇಂದಿಗೂ ಗ್ರಾಮೀಣ ಭಾಗದಲ್ಲಿ ಗಂಡು ಮಕ್ಕಳೇ ಸಂತತಿ ಬೆಳೆಸುವುದು, ಹಾಗಾಗಿ ಕುಟುಂಬಕ್ಕೆ ಒಂದು ಗಂಡು ಬೇಕೇ ಬೇಕೆಂಬ ನಂಬಿಕೆ ಹೊಂದಿರುವ ಒಂದು ವರ್ಗ ಈ ಹೆಣ್ಣು ಭ್ರೂಣ ಹತ್ಯೆಯಲ್ಲಿ ತೊಡಗುತ್ತಿದ್ದರೆ ಮತ್ತೊಂದು ವರ್ಗ ಸುಶಿಕ್ಷಿತ, ಶ್ರೀಮಂತ ಕುಟುಂಬಗಳು ತಮಗೆ ಗಂಡು ಮಗು ಬೇಕೆಂಬ ಉತ್ಕಟ ಹಂಬಲ ಹೊಂದಿರುತ್ತಾರೆ. ಈ ಎರಡು ವರ್ಗಗಳನ್ನು ನೀವು ಅತ್ಯಂತ ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು’ ಎಂದರು.

ಎಸ್.ಎಸ್.ಐ.ಎಂ.ಎಸ್ ಅಂಡ್ ಆರ್.ಸಿ ಯ ರೇಡಿಯಾಲಜಿಸ್ಟ್ ಡಾ.ಚಂದನ್ ಗಿರಿಯಪ್ಪ ಹಾಗೂ ಪಿ.ಸಿ ಅಂಡ್ ಪಿ.ಎನ್.ಡಿ.ಟಿ ಸಲಹಾ ಸಮಿತಿಯ ಕಾನೂನು ಸಲಹೆಗಾರ ವಿ.ರವಿಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕಾಯ್ದೆ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್, ಡಿಎಚ್‍ಒ ಡಾ.ರಾಘವೇಂದ್ರ ಸ್ವಾಮಿ, ಪಿಸಿ ಅಂಡ್ ಪಿಎನ್‍ಡಿಟಿ ಕೋಶದ ನೋಡಲ್ ಅಧಿಕಾರಿ ಡಾ.ರೇಣುಕಾರಾಧ್ಯ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು