ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಠರೋಗ: ನಿಯಂತ್ರಣವಲ್ಲ, ನಿರ್ಮೂಲನೆಗೆ ಪಣ

ಇಂದಿನಿಂದ 15 ದಿನಗಳ ಕಾಲ ನಡೆಯಲಿದೆ ಸ್ಪರ್ಶ್‌ ಜಾಗೃತಿ ಅಭಿಯಾನ
Last Updated 30 ಜನವರಿ 2023, 5:36 IST
ಅಕ್ಷರ ಗಾತ್ರ

ದಾವಣಗೆರೆ: ಕುಷ್ಠರೋಗ ನಿಯಂತ್ರಿಸಲು ಕ್ರಮ ಕೈಗೊಳ್ಳುವ ಕಾಲ ಮುಗಿದಿದೆ. ಈಗ ಸಂಪೂರ್ಣ ನಿರ್ಮೂಲನೆಗೆ ಸರ್ಕಾರ ಮುಂದಾಗಿದೆ. ಅದಕ್ಕಾಗಿ ಶಾಲೆ–ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ಸ್ಪರ್ಶ್‌ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ. ಮಹಾತ್ಮ ಗಾಂಧೀಜಿಯ ಪುಣ್ಯತಿಥಿಯ ದಿನವಾದ ಜ.30ರಿಂದ 15 ದಿನಗಳ ಕಾಲ ಈ ಅಭಿಯಾನ ನಡೆಯಲಿದೆ.

‘ಕುಷ್ಠರೋಗ ಈಗ ನಿಯಂತ್ರಣದಲ್ಲಿದೆ. ನಿಯಂತ್ರಿಸಬೇಕು ಎಂಬುದು ಹೆಯ ವಿಷಯವಾಗಿದೆ. ಈಗ ಕುಷ್ಠರೋಗಮುಕ್ತ ಸಮಾಜವನ್ನು ನಿರ್ಮಿಸುವುದು ಗುರಿಯಾಗಿದೆ. ಅದಕ್ಕಾಗಿ ಕುಷ್ಠರೋಗ ನಿರ್ಮೂಲನಾ ದಿನವಾದ ಜ.30ರಿಂದ ಫೆ.13ರ ವರೆಗೆ ಸ್ಪರ್ಶ್‌ ಅಭಿಯಾನ ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಪಿ.ಡಿ. ಮುರುಳೀಧರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವಿವಿಧ ಶಾಲೆ– ಕಾಲೇಜುಗಳಿಗೆ ನಮ್ಮ ತಂಡ ಭೇಟಿ ನೀಡಲಿದೆ. ಅಲ್ಲಿ ಕುಷ್ಠರೋಗಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗುವುದು. ರೋಗ ಪತ್ತೆ ಹಚ್ಚುವುದು ಹೇಗೆ? ಪತ್ತೆ ಹಚ್ಚಿದ ಮೇಲೆ ಚಿಕಿತ್ಸೆ ಕೊಡಿಸುವುದು ಹೇಗೆ? ಏನು ಔಷಧ? ಯಾರನ್ನು ಕಾಣಬೇಕು? ಎಂಬುದನ್ನು ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತಿಳಿಸಲಾಗುವುದು ಎಂದು ವಿವರಿಸಿದರು.

ಕುಷ್ಠರೋಗ ಬಂದರೆ ಊರಿಂದ ಹೊರಹಾಕುವ ಕಾಲವೊಂದಿತ್ತು. ಅದಾದ ಬಳಿಕ ಮನೆಯಿಂದ ಹೊರಹಾಕದೇ ಇದ್ದರೂ ಹೊರಗೆ ತಿಳಿಸದೇ ಗುಪ್ತವಾಗಿ ಇಡುವ ಮನಃಸ್ಥಿತಿ ಇತ್ತು. ಈಗ ಅವರಾಗಿಯೇ ಹೇಳದೇ ಇದ್ದರೂ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದಾಗ ಮಾಹಿತಿ ನೀಡುತ್ತಿದ್ದಾರೆ. ಮುಂದೆ ವೈದ್ಯಕೀಯ ಸಿಬ್ಬಂದಿ ಮನೆಮನೆಗೆ ಬರುವ ಬದಲು, ರೋಗದ ಲಕ್ಷಣ ಕಂಡ ತಕ್ಷಣ ಜನರೇ ಆಸ್ಪತ್ರೆಗೆ ಬರುವಂತಾಗಬೇಕು. ಆಗ ಕುಷ್ಠರೋಗವನ್ನು ಬೇರುಸಹಿತ ಕಿತ್ತು ಹಾಕಲು ಸಾಧ್ಯ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮತ್ತು ಉಚಿತ ಔಷಧ ಇದೆ. ಆರಂಭಿಕ ಹಂತದಲ್ಲಿಯೇ ಆಸ್ಪತ್ರೆಗೆ ಬಂದರೆ ಗುಣಪಡಿಸುವುದು ಸುಲಭ. ಆನಂತರ ಬಂದರೂ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗಬಹುದು ಎಂಬುದು ಅವರ ಅಭಿಪ್ರಾಯವಾಗಿದೆ.

ಜಿಲ್ಲೆಯಲ್ಲಿ ಕುಷ್ಠರೋಗ ನಿಯಂತ್ರಣದಲ್ಲಿದೆ. ತಿಂಗಳಿಗೆ 4–5, ವರ್ಷಕ್ಕೆ ಸರಾಸರಿ 60ರಷ್ಟು ‍ಕುಷ್ಠರೋಗ ಪ್ರಕರಣಗಳು ಪತ್ತೆಯಾಗುತ್ತಿವೆ. ಇದು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಮುಂದೊಂದು ದಿನ ಸೊನ್ನೆಗೆ ತರುವುದೇ ಆರೋಗ್ಯ ಇಲಾಖೆಯ ಉದ್ದೇಶ. ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT