ಭಾನುವಾರ, ಏಪ್ರಿಲ್ 11, 2021
33 °C
10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮವಾಗಲಿ: ಎನ್.ಟಿ. ಯರ್ರಿಸ್ವಾಮಿ ಮನದಾಳದ ಮಾತು

ಚಂದ್ರಶೇಖರ ಆರ್. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಎನ್.ಟಿ. ಯರ್ರಿಸ್ವಾಮಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿದ್ದರೂ ಕನ್ನಡ ಸಾಹಿತ್ಯದ ಕೃಷಿ ಮಾಡಿದವರು. ಮನೆ ಮಾತು ತೆಲುಗು. ಆದರೂ ಕನ್ನಡ ಸಾಹಿತ್ಯದತ್ತ ಒಲವು ಮೂಡಿಸಿಕೊಂಡವರು. ಕವನ ಸಂಕಲನ, ಕಥಾ ಸಂಕಲನ, ಬ್ಯಾಂಕಿಂಗ್‌ ಕ್ಷೇತ್ರಗಳ ಕೃತಿ ರಚಿಸುವ ಮೂಲಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದವರು. ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿ ಸದ್ಯ ನಿವೃತ್ತರಾಗಿದ್ದಾರೆ.

ಬರಪೀಡಿತ ಜಗಳೂರು ತಾಲ್ಲೂಕಿನ ಆಲೇಹಳ್ಳಿಯಂತಹ ಕುಗ್ರಾಮದ ಬುಡಕಟ್ಟು ಜನಾಂಗದಿಂದ ಬಂದು ಸಾಧನೆ ಮಾಡಿದ ಅವರು 26 ಕೃತಿಗಳನ್ನು ರಚಿಸಿದ್ದಾರೆ. ಬ್ಯಾಂಕ್‌ ಅಧಿಕಾರಿಯಾಗಿ ಮೊದಲ ಬಾರಿ ಹುದ್ದೆಗೆ ಸೇರಿಕೊಳ್ಳುವ ಸಂದರ್ಭದಲ್ಲೇ ತಮ್ಮ ಮೊದಲ ಕವನ ಬರೆದರು. ಅವರ ಮೊದಲ ಕವನ ಕೂಡ ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದು ವಿಶೇಷ.

ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 

* ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಹೇಳಿ.
ಆಲೇಹಳ್ಳಿಯಲ್ಲಿ ಪ್ರಾಥಮಿಕ ಶಾಲೆ ಕೂಡ ಇರಲಿಲ್ಲ. ಅಂತಹ ಗ್ರಾಮದಿಂದ ಬಂದು ಓದಿ ಬ್ಯಾಂಕ್‌ ಅಧಿಕಾರಿಯಾದೆ. ನನ್ನಷ್ಟಕ್ಕೆ ನಾನೇ ಸಾಹಿತ್ಯದ ಕೃಷಿ ಮಾಡಿಕೊಂಡಿದ್ದವನನ್ನು ಗುರುತಿಸಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಇದರಿಂದ ಸ್ಫೂರ್ತಿ ಬಂದಿದೆ.

* ಬಾಲ್ಯದ ದಿನಗಳು ಹೇಗಿತ್ತು?
ಬಾಲ್ಯವನ್ನು ಆಲೇಹಳ್ಳಿಯಲ್ಲಿ, ಪ್ರೌಢಶಾಲಾ ವಿದ್ಯಾಭ್ಯಾಸ ತುರವನೂರು, ಬಿಎಸ್ಸಿ ಚಿತ್ರದುರ್ಗದಲ್ಲಿ ಮುಗಿಸಿದೆ. ಕೃಷಿಕ ಮನೆತನ. ತಂದೆ ತಿಮ್ಮಪ್ಪ, ತಾಯಿ ತಿಮ್ಮವ್ವ. 

* ಬ್ಯಾಂಕ್‌ ಅಧಿಕಾರಿಯಾಗಿದ್ದ ನಿಮಗೆ ಸಾಹಿತ್ಯದತ್ತ ಒಲವು ಮೂಡಿದ್ದು ಹೇಗೆ?
1979ರಲ್ಲಿ ಕೆನರಾ ಬ್ಯಾಂಕ್‌ನಿಂದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿಗೆ ನೇಮಕವಾಗಿತ್ತು. ಕೆಲಸಕ್ಕೆ ಹೋಗುವ ಮಾರ್ಗದಲ್ಲಿ ಬೇಲೂರಿನ ಶಿಲಾಬಾಲಿಕೆ ಕಂಡು ‘ಕೈಬೀಸಿ ಕರೆವಳು ಬೇಲೂರ ಬಾಲೆ...’ ಎಂಬ ಕವನ ಮೂಡಿತು. ಸ್ನೇಹಿತರ ಒತ್ತಾಸೆಗೆ ಪತ್ರಿಕೆಗೆ ಕಳುಹಿಸಿದೆ. ಅದು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿತು. ಅದು ಸಾಹಿತ್ಯದತ್ತ ಒಲವು ಮೂಡಿಸಿತು.

* ಸಾಹಿತ್ಯ ಸಮ್ಮೇಳನಗಳು ಜನರಿಂದ ದೂರವಾಗುತ್ತಿವೆ ಎಂಬ ಮಾತಿದೆಯಲ್ಲ?
ಸಮ್ಮೇಳನಗಳು ಜನರನ್ನೂ ಒಳಗೊಳ್ಳುತ್ತಿವೆ. ಹಾಗಾಗಿಯೇ ಸಮ್ಮೇಳನಗಳು ಇಂದು ಜಾತ್ರೆಯ ಸ್ವರೂಪ ಪಡೆದುಕೊಂಡಿವೆ. ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತುತ ಸಮಸ್ಯೆ ಬಗ್ಗೆ ಚರ್ಚೆ ನಡೆಸುತ್ತಿರುವುದು ಜನರನ್ನು ಒಳಗೊಳ್ಳುವ ಪ್ರಕ್ರಿಯೆಯ ಭಾಗ. ಈ ಬಾರಿ ಕೊರೊನಾ ಹಾಗೂ ಕೃಷಿ ಕಾಯ್ದೆಗಳ ಬಗ್ಗೆ ಗೋಷ್ಠಿಗಳು ಇವೆ. 

* ಯುವಜನರು ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಒಳಗೊಳ್ಳುವುದು ಹೇಗೆ?
ಯುವಜನರಿಗೆ ಓದುವ ತಾಳ್ಮೆ, ಸಮಯ ಇಲ್ಲ. ಯುವಜನರನ್ನು ಸೆಳೆಯಲು ಮಾಹಿತಿ ತಂತ್ರಜ್ಞಾನವನ್ನು ಸಾಹಿತ್ಯದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇ–ಬುಕ್, ಡಿಜಿಟಲ್‌ ಲೈಬ್ರರಿ, ಸಾಮಾಜಿಕ ಜಾಲತಾಣಗಳ ಮೂಲಕ ಕನ್ನಡದ ದರ್ಶನ ಮಾಡಿಸಬೇಕು. 

* ಕಸಾಪ ಅಧ್ಯಕ್ಷರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಜಿಲ್ಲಾ ಸಮ್ಮೇಳನ ನಡೆಸಲಾಗುತ್ತಿದೆ. ಇದನ್ನು  ಮುಂದೂಡಬೇಕು ಎಂದು ಕೂಗು ಕೇಳುತ್ತಿದೆಯಲ್ಲ?
ಕೊರೊನಾ ಕಾರಣಕ್ಕೆ ಸಮ್ಮೇಳನ ಮುಂದೂಡಲಾಗಿತ್ತು. ಸರ್ಕಾರದಿಂದ ಈಗಾಗಲೇ ಅನುದಾನ ಬಂದಿದೆ. 18 ಜಿಲ್ಲೆಗಳಲ್ಲೂ ಸಮ್ಮೇಳನ ನಡೆಯುತ್ತಿದೆ. ಕಸಾಪ ಚುನಾವಣೆಗೂ ಸಮ್ಮೇಳನಕ್ಕೂ ತಳುಕು ಹಾಕುವುದು ಬೇಡ.

* ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ನಡೆಸಬೇಕು ಎಂಬ ಬಗ್ಗೆ ಏನು ಹೇಳುತ್ತೀರಿ?
ಇದು ನನ್ನ ಹಕ್ಕೊತ್ತಾಯ ಕೂಡ. ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕನಾಗಿದ್ದಾಗ ಹಲವು ಬಾರಿ ಒತ್ತಾಯಿಸಿದ್ದೆ. ಈ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು.

* ಸಮ್ಮೇಳನಾಧ್ಯಕ್ಷರಾಗಿ ನಿಮ್ಮ ಸಂದೇಶ?
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಬೇಕು. ಕೇಂದ್ರ ಸರ್ಕಾರದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ  ಆದ್ಯತೆ ನೀಡಬೇಕು. ಕಚೇರಿಗಳಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು. ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಸಿಕೊಂಡು ಎಲ್ಲೆಡೆ ಕನ್ನಡದ ವಾತಾವರಣ ನಿರ್ಮಿಸಬೇಕು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು