ಶನಿವಾರ, ಮಾರ್ಚ್ 6, 2021
32 °C

ಕನ್ನಡ ಅನ್ನದ ಭಾಷೆಯಾಗಲಿ: ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸಾ.ಚಿ. ರಮೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕನ್ನಡವನ್ನು ಎಲ್ಲೆಡೆ ಬಳಸಲು ಎಲ್ಲರೂ ಮುಂದಾಗಬೇಕು. ಆಡಳಿತದಲ್ಲಿ ಕನ್ನಡ ಬಳಕೆಗೆ ಸರ್ಕಾರ ಆದೇಶ ಹೊರಡಿಸಬೇಕು. ಕನ್ನಡ ಅನ್ನದ ಭಾಷೆಯಾಗುವಂತೆ ಮಾಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸಾ.ಚಿ. ರಮೇಶ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ಅಧ್ಯಯನ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡದ ಬೆಳವಣಿಗೆ: ಸವಾಲುಗಳು ಮತ್ತು ಸಾಧ್ಯತೆಗಳು’ ವಿಷಯ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲೇ ವಚನಕಾರರು ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡಿದ್ದರು. ಬೇರೆ ರಾಜ್ಯದಲ್ಲಿ ಆದಂತೆ ಆಡಳಿತದಲ್ಲಿ, ಜೀವನದಲ್ಲಿ ಕನ್ನಡ ತರುವ ಕೆಲಸ ಇಲ್ಲಿ ಆಗಿಲ್ಲ. ಕನ್ನಡನಾಡಿನಲ್ಲಿ ಕನ್ನಡಕ್ಕೇ ಮೊದಲ ಪ್ರಾಧಾನ್ಯತೆ ಸಿಗಬೇಕು. ಭಾಷೆ ಪ್ರೀತಿಸದೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

‘ಕನ್ನಡ ಭಾಷೆಯ ಬಗ್ಗೆ ಕನ್ನಡಿಗರಲ್ಲಿ ಅವಜ್ಞೆ ಇದೆ. ಬೇರೆ ಭಾಷೆಯ ಜನರು ತಮ್ಮ ಮಾತೃಭಾಷೆ ಪ್ರೀತಿಸಿದಷ್ಟು ನಾವು ಪ್ರೀತಿಸುತ್ತಿಲ್ಲ. ಬೇರೆ ರಾಜ‌್ಯದವರು ಕನ್ನಡವನ್ನು ಕಲಿತು ತೋರಿದ ಪ್ರೀತಿಯನ್ನು ನಾವು ತೋರದಿರುವುದು ವಿಷಾದನೀಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘ, ಸಂಸ್ಥೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸಿನಿಮಾ, ಸಾಹಿತ್ಯ, ನಾಟಕ, ಪತ್ರಿಕೆಗಳು ಕನ್ನಡ ಕಟ್ಟುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಆದರೂ ಕನ್ನಡ ಉಳಿಸಬೇಕೆನ್ನುವ ಕೂಗು ಇಂದಿಗೂ ಕೇಳಿ ಬರುತ್ತಿದೆ.  ಯುವಕರು ಕನ್ನಡ ಸಾಹಿತ್ಯವನ್ನು ಓದಿ, ಕನ್ನಡದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥ ಡಾ.ಡಿ. ಪಾಂಡುರಂಗಬಾಬು, ‘ಕನ್ನಡಕ್ಕಿರುವ ಸವಾಲು ಮತ್ತು ಸಾಧ್ಯತೆಗಳನ್ನು ಸಾಮಾನ್ಯ ಪರಿಭಾಷೆಯಲ್ಲಿ ಅಭಿವ್ಯಕ್ತಿಸುವ ಅಗತ್ಯ ಇದೆ. ಕನ್ನಡಕ್ಕೆ ಸಂಬಂಧಿಸಿದ ಬೆಳವಣಿಗೆಯನ್ನು ಖಚಿತಪಡಿಸಿಕೊಂಡು ಬಳಿಕ ಸವಾಲು ಮತ್ತು ಸಾಧ್ಯತೆ ಬಗ್ಗೆ ಚರ್ಚೆ ಮಾಡಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಔಪಚಾರಿಕವಾಗಿ, ಸಾಂಸ್ಥಿಕವಾಗಿ ಕನ್ನಡದ ಬೆಳವಣಿಗೆಯ ಸವಾಲುಗಳನ್ನು ಶತಮಾನಗಳಿಂದ ಬೇರೆ ಬೇರೆ ರೀತಿ ಗುರುತಿಸಿಕೊಂಡು ಬಂದಿದ್ದೇವೆ. ರಾಜಕೀಯ ಇಚ್ಛಾಶಕ್ತಿ ಕೊರತೆ, ಇಂಗ್ಲಿಷ್‌ ದಬ್ಬಾಳಿಕೆ, ಕನ್ನಡಿಗರ ಅಭಿಮಾನ ಶೂನ್ಯವನ್ನು ಬಹಳ ವರ್ಷಗಳಿಂದ ಸವಾಲು ಎಂಬಂತೆ ನಿರ್ದಿಷ್ಟಪಡಿಸಿಕೊಂಡು ಬಂದಿದ್ದು, ಇದರ ಹೊರತಾದ ಸವಾಲುಗಳ ಬಗ್ಗೆ ಯಾರೂ ಚಿಂತಿಸಿಲ್ಲ’ ಎಂದು ಹೇಳಿದರು.

‘ಕನ್ನಡವನ್ನು ಕನ್ನಡಿಗರರು ಯಾಕೆ ಹೆಚ್ಚು ಬಳಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಸಮಸ್ಯೆ ಹುಡುಕಲು ಸಾಧ್ಯ.  ಬದುಕು ಮುಖ್ಯ ಭಾಷೆ ನಂತರ. ಇದರ ಹಿಂದಿನ ಸಂಕೀರ್ಣತೆ ಅರ್ಥಮಾಡಿಕೊಳ್ಳಬೇಕು. ಸಾಮಾನ್ಯರು, ಬೌದ್ಧಿಕ ವರ್ಗ, ರಾಜಕೀಯ ಈ ಮೂರನ್ನೂ ಒಟ್ಟುಗೂಡಿಸಿ ಹೋರಾಟ ರೂಪಿಸುವ ಅಗತ್ಯ ಇದೆ. ಈ ಮೂರನ್ನು ಒಗ್ಗೂಡಿಸುವ ವೇದಿಕೆ ಅಗತ್ಯ ಇದೆ’ ಎಂದು ವಿಶ್ಲೇಷಿಸಿದರು.

ಕಾಲೇಜಿನ ಪ್ರಾಚಾರ್ಯ ತೂ.ಕ. ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್‌. ಗಿರಿಸ್ವಾಮಿ, ಡಾ. ಅಶೋಕಕುಮಾರ ರಂಜೇರೆ, ಡಾ.ಪಿ. ಮಹದೇವಯ್ಯ, ಡಾ. ಬಿ. ಪ್ರಕಾಶ್‌ ಹಲಗೇರಿ, ರೂಪೇಶ್‌ ಇದ್ದರು. ಅಭಿಲಾಷ್‌ ಸ್ವಾಗತಿಸಿದರು. 

ನಿರ್ಣಯವಾಗದ ಕನ್ನಡ ಉಳಿವಿನ ಚರ್ಚೆ

ಇಂದು ಸಾವಿರಾರು ದೇಸಿ ಭಾಷೆಗಳು ಸಂಕೀರ್ಣದ ಸ್ಥಿತಿಯಲ್ಲಿವೆ. ಅದರಲ್ಲಿ ಕನ್ನಡವೂ ಒಂದು. ಕೇಶಿರಾಜ, ಆಂಡಯ್ಯ ಸೇರಿ ಶತಮಾನಗಳಿಂದಲೂ ಕನ್ನಡದ ಉಳಿವಿನ ಚರ್ಚೆ ನಡೆಯುತ್ತಲೇ ಇದೆ. 80 ವರ್ಷಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನಗಳಲ್ಲೂ ಕನ್ನಡದ ಉಳಿವಿನ ಚರ್ಚೆ, ಠರಾವು ನಡೆದಿವೆ. ಆದರೆ ಈ ಠರಾವು ನಿರ್ಣಯವಾಗಿ ರೂಪುಗೊಂಡಿವೆಯೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ ಎಂದು  ‘ಕನ್ನಡದ ಬೆಳವಣಿಗೆಯ ಸವಾಲುಗಳು’ ಕುರಿತ ಮೊದಲ ಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ. ಅಶೋಕಕುಮಾರ ರಂಜೇರೆ ಪ್ರಶ್ನೆ ಎತ್ತಿದರು.

‘ಕನ್ನಡ ಹಳೆಯ ಮಾದರಿಯಲ್ಲಿ ಇರಬೇಕಾ, ಮಾರ್ಪಾಡಾಗಬೇಕಾ, ಜಾಗತಿಕ ಸಂದರ್ಭದಲ್ಲಿ ಕನ್ನಡವನ್ನೂ ಹೇಗೆ ರೂಪಿಸಿಕೊಳ್ಳುತ್ತಿದ್ದೇವೆ ಎಂಬುದು ಚರ್ಚೆಯಲ್ಲಿದೆ. ಸರ್ವೆ ಪ್ರಕಾರ ಜಗತ್ತಿನ 11,100 ಭಾಷೆಗಳು ಅಳಿವಿನ ಅಂಚಿನಲ್ಲಿವೆ. ಶೇ 70 ರಷ್ಟು ಭಾಷೆ ಮರೆಯಾಗಲಿವೆ ಎನ್ನುವ ಚರ್ಚೆ ಇದ್ದು, ಅದರಲ್ಲಿ ಕನ್ನಡವೂ ಸೇರಿದೆ. ಕನ್ನಡ ಬೆಳವಣಿಗೆ ಸವಾಲಿಗೆ ಕಾರಣಗಳನ್ನು ಹುಡುಕಬೇಕಿದೆ. ಶೈಕ್ಷಣಿಕ, ಆಡಳಿತಾತ್ಮಕ ಕಾರಣಗಳನ್ನೂ ಹುಡುಕಬೇಕಿದೆ’ ಎಂದು ವಿಶ್ಲೇಷಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು