ಭಾನುವಾರ, ಜನವರಿ 17, 2021
26 °C
ಪತ್ರಕರ್ತರ ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು

ಮಾಧ್ಯಮ ಮಾಲೀಕರು ಇತರ ಆಸಕ್ತಿಯಿಂದ ದೂರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸರ್ಕಾರವನ್ನು ಬಗ್ಗಿಸಲು, ತಮ್ಮ ವ್ಯವಹಾರಗಳನ್ನು ರಕ್ಷಿಸಿಕೊಳ್ಳಲು ಮಾಧ್ಯಮರಂಗಕ್ಕೆ ಉದ್ಯಮಿಗಳು ಬರುತ್ತಿದ್ದಾರೆ. ಮಾಧ್ಯಮ ಸಂಸ್ಥೆಗಳ ಮಾಲೀಕರು ಇತರೆ ಆಸಕ್ತಿಯಿಂದ ದೂರವಿದ್ದರೆ ಮಾತ್ರ ಮಾಧ್ಯಮ ಕ್ಷೇತ್ರಕ್ಕೆ ಒಳಿತಾಗಲಿದೆ. ಈ ಬಗ್ಗೆ ಚರ್ಚೆ ಎದ್ದಿದೆಯಾದರೂ ಪರಿಸ್ಥಿತಿ ಅವಲೋಕಿಸಿದರೆ ಇತರ ಆಸಕ್ತಿಗಳಿಲ್ಲದ ಮಾಧ್ಯಮಗಳು ಬರುವುದು ಇನ್ನು ಕಷ್ಟ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಹೇಳಿದರು.

ಜಿಲ್ಲಾ ವರದಿಗಾರರ ಒಕ್ಕೂಟದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾಧ್ಯಮ, ಉದ್ಯಮ ಮತ್ತು ರಾಜಕಾರಣಿಗಳು ಒಂದಾಗಿವೆ. ಇದು ಬಹಳ ಅಪಾಯಕಾರಿಯಾಗಿದೆ. ರಾಜಕೀಯ ಎನ್ನುವುದು ಜನರ ಅಭಿಪ್ರಾಯದ ಮೇಲೆ ನಿಂತಿರುತ್ತದೆ. ಈಗ ತಿರುಚಿದ ಅಭಿಪ್ರಾಯಗಳು ಪ್ರಕಟವಾಗಲು ಈ ಒಂದಾಗುವಿಕೆಯೇ ಕಾರಣ. ಮಾಧ್ಯಮವನ್ನು ಒಂದು ಉದ್ಯಮವೆಂದೇ ಪರಿಗಣಿಸುತ್ತಾರಾ ಎಂದು ನೋಡಿದರೆ ಅದೂ ಇಲ್ಲ. ಈ ಉದ್ಯಮದಿಂದ ಲಾಭ ಮಾಡುತ್ತಿಲ್ಲ. ಬದಲಾಗಿ ಇನ್ಯಾವುದೋ ಆಸಕ್ತಿಯನ್ನು ರಕ್ಷಿಸಿಕೊಳ್ಳಲು ಮಾಧ್ಯಮವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.

ಮಾಧ್ಯಮ ರಂಗಕ್ಕೆ ಉದ್ಯಮ ಪ್ರವೇಶ ಪಡೆದಾಗ ಸಮಾಜದ ಹಿತಾಸಕ್ತಿಗೆ ಕುತ್ತು ಬಂದಿತ್ತು. ಆದರೆ ಪತ್ರಕರ್ತರಿಗೆ ಒಳ್ಳೆಯ ವೇತನವಾದರೂ ಸಿಕ್ಕೀತು ಎಂಬ ಭರವಸೆಯಾದರೂ ಇತ್ತು. ಈಗ ಆ ಭರವಸೆಯೂ ಇಲ್ಲ. ಪತ್ರಕರ್ತರು ಬದುಕಿ ಉಳಿಯುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ ಎಂದರು.

ಟೊಯೊಟಾದಂತಹ ಯಾವುದೋ ಕಂಪನಿಯಲ್ಲಿ ಉದ್ಯೋಗಿಗಳನ್ನು ಕಿತ್ತು ಹಾಕಲು ಮುಂದಾದಾಗ ನಡೆಯುವ ಪ್ರತಿಭಟನೆ ದೊಡ್ಡ  ಸುದ್ದಿಯಾಗಿ ಪ್ರಕಟ, ಪ್ರಸಾರವಾಗುತ್ತದೆ. ಅದೇ ಮಾಧ್ಯಮ ಸಂಸ್ಥೆಯಲ್ಲಿಯೇ ತೆಗೆದು ಹಾಕಿದರೆ ಒಂದಕ್ಷರವೂ ಬರುವುದಿಲ್ಲ. ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ಯೂನಿಯನ್‌, ಎಡಿಟರ್ಸ್‌ ಗಿಲ್ಡ್‌, ಪ್ರೆಸ್‌ಕ್ಲಬ್‌ ಸಹಿತ ಪತ್ರಕರ್ತರ ಹಲವು ಸಂಘಟನೆಗಳಿವೆ. ಆದರೆ ಯಾವುದೇ ಸಂಘಟನೆಗಳು ಪತ್ರಕರ್ತರ ಉಳಿವಿಗಾಗಿ ಹೋರಾಟ ಮಾಡುತ್ತಿಲ್ಲ. ಕಾರ್ಯನಿರತ ಪತ್ರಕರ್ತರ ಸಂಘವು ಕೋವಿಡ್‌ ಕಾಲದಲ್ಲಿ ಚೆನ್ನಾಗಿ ಕೆಲಸ ಮಾಡಿದೆ. ಮೃತಪಟ್ಟವರಿಗೆ ಮುಖ್ಯಮಂತ್ರಿಗಳ ನಿಧಿಯಿಂದ ಪರಿಹಾರ ಕೊಡಿಸಿತು. ಆದರೆ ಉದ್ಯೋಗ ಕಳೆದುಕೊಂಡವರ, ಕಳೆದುಕೊಳ್ಳುವವರ ನೆರವಿಗೆ ನಿಲ್ಲುವವರು ಯಾರು ಎಂದು ಪ್ರಶ್ನಿಸಿದರು.

ಇಷ್ಟೊಂದು ಕಡಿಮೆ ವೇತನಕ್ಕೆ ವರದಿಗಾರರು ಸಿಗುತ್ತಾರೆ ಎಂಬುದು ಗೊತ್ತೇ ಇರಲಿಲ್ಲ. ನನ್ನ ಕಾರಿನ ಚಾಲಕನಿಗೂ ಇದಕ್ಕಿಂತ ಹೆಚ್ಚು ವೇತನ ನೀಡುತ್ತಿದ್ದೇನೆ ಎಂದು ಪತ್ರಿಕೆಯೊಂದರ ಮಾಲೀಕರೊಬ್ಬರು ಹಿಂದೆ ಉದ್ಘರಿಸಿದ್ದರು. ಮಾಧ್ಯಮದ ಮಾದರಿಯಲ್ಲಿಯೇ ದೋಷವಿದೆ. ಇಲ್ಲದೇ ಇದ್ದರೆ ಈ ದುಃಸ್ಥಿತಿಗೆ ತಲುಪುತ್ತಿರಲಿಲ್ಲ ಎಂದು ತಿಳಿಸಿದರು.

ಕೋಮುವಾದ, ಜಾತ್ಯತೀತವಾದ ಎಂದು ಚರ್ಚೆ ಮಾಡುತ್ತೇವೆ. ಕೋಮುವಾದಿ ಬಂಡವಾಳಿಗರೇ ಮಾಧ್ಯಮದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಜಾತ್ಯತೀತವಾದಿ ಬಂಡವಾಳಿಗರು ಹೂಡಿಕೆ ಮಾಡಬೇಕಾದ ಅನಿವಾರ್ಯ ಉಂಟಾಗಿದೆ ಎಂದರು.

ಮಾಧ್ಯಮರಂಗವು ಈ ಎಲ್ಲ ಅಪಾಯದಿಂದ ಪಾರಾಗಿ, ಜನರ ಧ್ವನಿಯಾಗಿಯೇ ಉಳಿಯಬೇಕು. ಪ್ರಜಾಪ್ರಭುತ್ವ ಉಳಿಯಬೇಕಿದ್ದರೆ, ಸಮಾಜದ ಹಿತಾಸಕ್ತಿ ಕಾಪಾಡಬೇಕಿದ್ದರೆ, ಪತ್ರಕರ್ತರ ಹಿತಾಸಕ್ತಿಯೂ ಕಾಪಾಡಬೇಕಿದ್ದರೆ ಅದು ಅಗತ್ಯ ಎಂದು ತಿಳಿಸಿದರು.

ಒಕ್ಕೂಟದ ಅಧ್ಯಕ್ಷ ಜಿ.ಎಂ.ಆರ್‌. ಆರಾಧ್ಯ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು