ಮಂಗಳವಾರ, ಸೆಪ್ಟೆಂಬರ್ 27, 2022
27 °C

ಕಲಾವಿದರನ್ನು ಗುರುತಿಸುವ ಕಾರ್ಯ ನಿರಂತರವಾಗಲಿ: ನಟ ಸುಚೇಂದ್ರ ಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಲಲಿತಕಲಾ ಅಕಾಡೆಮಿ ಎಲೆಮರೆಯ ಕಾಯಿಯಂತೆ ಇರುವ ಕಲಾವಿದರನ್ನು ಗುರುತಿಸುವ ಕಾರ್ಯ ನಿರಂತರವಾಗಿ ನಡೆಯಲಿ ’ಎಂದು ನಟ ಸುಚೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.

ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ದಾವಣಗೆರೆ ಜಿಲ್ಲಾ ಸಂಸ್ಕಾರ ಭಾರತಿ ವತಿಯಿಂದ ಶನಿವಾರ ನಡೆದ ಫೆಲೋಶಿಪ್ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಲೆ ಎಂಬುದು ಒಂದು ತಪಸ್ಸು. ಈ ದೊಡ್ಡ ಕಲಾಯಾನದಲ್ಲಿ ಎಡರುತೊಡರುಗಳು ಬರುತ್ತವೆ. ಯಾವುದೇ ಕಲಾವಿದನಿಗೆ ಆನಂದಕ್ಕಿಂತ ದುಃಖವೇ ಜಾಸ್ತಿ ಇರುತ್ತದೆ. ಪ್ರತಿ ಹಂತದಲ್ಲೂ ಇದನ್ನು ಸ್ವೀಕಾರ ಮಾಡಬೇಕು. ಬಂದದ್ದೆಲ್ಲಾ ಬರಲಿ ಭಗವಂತನ ದಯೆಯೊಂದಿರಲಿ ಎಂಬಂತೆ ಮುಂದೆ ಸಾಗಬೇಕು’ ಎಂದು ಸಲಹೆ ನೀಡಿದರು.

‘ಮೋಕ್ಷಕ್ಕೆ ಕಾರಣವಾದ ವಿದ್ಯೆಯೇ ನಿಜವಾದ ವಿದ್ಯೆ. ಕಲೆಯ ಮೇಲೆ ಪ್ರೀತಿ ಇಲ್ಲದವರು ಪಶುವಿಗೆ ಸಮಾನ. ಅದೆಷ್ಟು ಸಂಕಷ್ಟಗಳು, ಸಂಕೀರ್ಣತೆಗಳು, ಸಂಕೋಲೆ, ಸಂದಿಗ್ದತೆಯನ್ನು ಅನುಸರಿಸಿ ಮುಂದೆ ಸಾಗುತ್ತಿರುವ ಕಲಾವಿದರನ್ನು  ಅಕಾಡೆಮಿ ಗುರುತಿಸಿರುವುದು ಉತ್ತಮ ಕಾರ್ಯ. ಈ ಉಪಕ್ರಮ ನಿರಂತತೆ ಪಡೆಯಲಿ ಕನಸು ಸಾಕಾರಗೊಳ್ಳಲಿ’ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಬಿ.ಡಿ. ಕುಂಬಾರ್, ‘ಪ್ರತಿಯೊಂದು ರಂಗದಲ್ಲೂ ಆದರ್ಶ ವ್ಯಕ್ತಿಗಳು ಇದ್ದಾರೆ. ಅದರಂತೆ ಕಲಾವಿದರಿಗೆ ಈ ಹಿರಿಯ ಕಲಾವಿದರು ರೋಲ್‌ ಮಾಡಲ್‌ಗಳಾಗಿದ್ದಾರೆ. ಕಲಾವಿದರು ಮಕ್ಕಳಿಗೂ ಕಲೆಯನ್ನು ಮನನ ಮಾಡಿಸಿದರೆ ನೆನಪಿನಲ್ಲಿ ಉಳಿಯಲು ಸಾಧ್ಯ’ ಎಂದು ಹೇಳಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ. ಮಹೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ‘ಒಬ್ಬ ವ್ಯಕ್ತಿಯ ಯಶಸ್ಸನ್ನು ಶಿಕ್ಷಣ ಹಾಗೂ ಪ್ರತಿಭೆಯಿಂದ ಗುರುತಿಸಲಾಗುತ್ತದೆ. ಸಾಧನೆಗಾಗಿ ಕೆಲವರು ತಮ್ಮ ಜೀವನ‌ವನ್ನೇ ಮುಡುಪಾಗಿಡುತ್ತಾರೆ. ನಾವು‌ ಮಾಡಿದ ಕೆಲಸ ಮಾತ್ರ ನಮ್ಮ ನಂತರವು ಉಳಿಯುತ್ತದೆ. ಭಾರತದಲ್ಲಿ ಜ್ಞಾನದ ಪ್ರವಾಹವಿದ್ದು, ವಿದೇಶಿಯರು ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡಿದರು. ಆದರೆ ನಮ್ಮ ಜ್ಞಾನ ಭಂಡಾರ ಕೊಳ್ಳೆಹೊಡೆಯಲು ಸಾಧ್ಯವಿಲ್ಲ’ ಎಂದರು.

‘ಅನುದಾನ ಪೂರ್ಣ ಬಳಕೆ’

‘ಕರ್ನಾಟಕ ಲಲಿತಕಲಾ ಅಕಾಡೆಮಿಗೆ ₹1.40 ಕೋಟಿ ಅನುದಾನ ಬಂದಿತ್ತು. ಬಳಕೆಯಾಗದ ಕಾರಣ ಕೊರೊನಾ ಕಾಲದಲ್ಲಿ ಸರ್ಕಾರ ಈ ಅನುದಾನ ಮರಳಿಸುವಂತೆ ಕೇಳಿತ್ತು. ಆದರೆ ನಾನು ಸುದೀರ್ಘ ಪತ್ರ ಬರೆದಿದ್ದೆ. ಈಗ ಅನುದಾನ ಸಂಪೂರ್ಣ ಬಳಕೆಯಾಗಿದೆ’ ಎಂದು ಡಿ.ಮಹೇಂದ್ರ ತಿಳಿಸಿದರು.

ಒಂದು ದೇಶ ಶ್ರೀಮಂತವಾಗಲು ಕಲೆ, ಕಲಾವಿದರು ಮುಖ್ಯ. ತಂಜಾವೂರ್ ಕಲೆಯಿಂದ ಇಲ್ಲಿಯವರಿಗೂ ಶ್ರೀಮಂತಿಕೆ, ಪರಂಪರೆಯನ್ನು ಚಿತ್ರಕಲಾವಿದರು ನೀಡಿದ್ದಾರೆ.
ಪ್ರೊ.ವಿ.ಜಿ. ಅಂದಾನಿ, ಫೆಲೋಶಿಪ್ ಪುರಸ್ಕೃತ ಕಲಾವಿದ

ಕೌಶಲಪೂರ್ಣ ವಿದ್ಯಾರ್ಥಿಗಳಿಗೆ ಮಹತ್ವಪೂರ್ಣ ಭವಿಷ್ಯವಿದೆ. ಕೆಲವು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆದಿದ್ದಾರೆ.
ಪ್ರೊ.ಪಿ.ಎಸ್‌. ಪುಂಚಿತ್ತಾಯ, ಕಲಾವಿದ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು