ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಇ–ಇಂಡೆಂಟ್‌ಗೆ ಮದ್ಯ ಮಾರಾಟಗಾರರ ವಿರೋಧ

Last Updated 10 ಮೇ 2022, 13:32 IST
ಅಕ್ಷರ ಗಾತ್ರ

ದಾವಣಗೆರೆ: ಪಾನೀಯ ನಿಗಮದಲ್ಲಿ ಇ–ಇಂಡೆಂಟ್‌ ಪದ್ಧತಿಯನ್ನು ಜಾರಿಗೊಳಿಸಿರುವುದನ್ನು ವಿರೋಧಿಸಿ ದಾವಣಗೆರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಆಶ್ರಯದಲ್ಲಿ ಮದ್ಯ ಮಾರಾಟಗಾರರು ನಗರದ ಎಪಿಎಂಸಿ ಬಳಿಯ ಪಾನೀಯ ನಿಗಮದ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ಪಾನೀಯ ನಿಗಮದಲ್ಲಿ ಏಪ್ರಿಲ್‌ 4ರಿಂದ ಇ–ಇಂಡೆಂಟ್‌ ಪದ್ಧತಿಯನ್ನು ಏಕಾಏಕಿ ಜಾರಿಗೊಳಿಸಿದ್ದಾರೆ. ಇದನ್ನು ಜಾರಿಗೊಳಿಸುವ ಮುನ್ನ ಇಲಾಖೆಯ ಅಧಿಕಾರಿಗಳ ಅಥವಾ ರಾಜ್ಯ ಸಮಿತಿ ಸಂಘದ ಪದಾಧಿಕಾರಿಗಳಾಗಲಿ ನೂತನ ಪದ್ಧತಿ ಜಾರಿಗೊಳಿಸುವ ವಿಚಾರವಾಗಿ ನಿಗಮದ ವ್ಯವಸ್ಥಾಪಕರು ಚರ್ಚೆ ಮಾಡದೇ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದ ರಾಜ್ಯದ ಸನ್ನದುದಾರರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

‘ನೂತನ ಪದ್ಧತಿಯ ಪ್ರಕಾರ ರಾತ್ರಿ 9.30ರಿಂದ ಬೆಳಿಗ್ಗೆ 9.30ರ ಒಳಗೆ ಹಣ ಕಟ್ಟಿ ಇಂಡೆಂಟ್‌ ಹಾಕಬೇಕು. ರಾತ್ರಿ 11.30ರ ಬಳಿಕವೇ ಎಷ್ಟು ವಹಿವಾಟು ನಡೆದಿದೆ ಎಂಬ ಲೆಕ್ಕ ಸಿಗುತ್ತದೆ. ಬೆಳಿಗ್ಗೆ 9.30ರ ಒಳಗೆ ಬ್ಯಾಂಕಿಗೆ ಹಣ ಪಾವತಿಸಿ ಇಂಡೆಂಟ್‌ ಹಾಕುವುದು ಕಷ್ಟವಾಗುತ್ತಿದೆ. ಈ ಮೊದಲು ಮಧ್ಯಾಹ್ನ 3 ಗಂಟೆಯವರೆಗೂ ಇಂಡೆಂಟ್‌ ಹಾಕಲು ಅವಕಾಶವಿತ್ತು. ಈ ವ್ಯವಸ್ಥೆಯನ್ನು ಸರಳೀಕರಣಗೊಳಿಸಬೇಕು. ರಾತ್ರಿಯ ಬದಲು ಹಗಲಿನ ವೇಳೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆದಾಯ ತರುವುದರಲ್ಲಿ ದ್ವಿತೀಯ ಸ್ಥಾನದಲ್ಲಿರುವ ಈ ಉದ್ದಿಮೆಯನ್ನು ಪ್ರತಿ ವರ್ಷ ಏನಾದರೂ ಒಂದು ರೀತಿಯಲ್ಲಿ ಕಾನೂನು ಬದಲಾವಣೆ ಮಾಡಿ, ವಿನಾಕಾರಣ ಪದ್ಧತಿಯನ್ನು ಬದಲಾಯಿಸಲಾಗುತ್ತಿದೆ. ನಮ್ಮ ಮೇಲೆ ಹೇರಿರುವ ಇ–ಇಂಡೆಂಟ್‌ ಪದ್ಧತಿಯನ್ನು ಹಿಂತೆಗೆದುಕೊಂಡು ಈ ಹಿಂದಿರುವಂತೆ ಸರಳ ಇಂಡೆಂಟ್‌ ಪದ್ಧತಿಯನ್ನು ಜಾರಿಗೊಳಿಸುವ ಮೂಲಕ ಅನುಕೂಲ ಮಾಡಿಕೊಡಬೇಕು. ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಈಶ್ವರಸಿಂಗ್‌ ಕವಿತಾಳ, ಬಾತಿ ಶಂಕರ್‌, ಆರ್‌.ಮಹೇಶ್ ಶೆಟ್ಟಿ, ಕೆ.ಎಸ್‌.ಸತೀಶ್‌, ಎಂ.ಉಮೇಶ್‌, ಎಚ್‌.ಕೆ. ಹೇಮಣ್ಣ, ನಿಖಿತ್‌ ಶೆಟ್ಟಿ, ಬಿ.ಎನ್‌. ಅನಂತಕುಮಾರ್‌ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT