ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಇಂದಿನಿಂದ ಮೇ ಸಾಹಿತ್ಯ ಮೇಳ

Last Updated 27 ಮೇ 2022, 4:06 IST
ಅಕ್ಷರ ಗಾತ್ರ

ದಾವಣಗೆರೆ: 75 ವರ್ಷಗಳಲ್ಲಿ ಭಾರತ ಸಂವಿಧಾನಬದ್ಧವಾಗಿ ಉನ್ನತಿ ಹೊಂದುತ್ತಿದೆಯೇ? ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸರ್ವಧರ್ಮ ಸಮಭಾವದಂಥ ಸಂವಿಧಾನದ ಉದಾತ್ತ ಆಶಯಗಳು ಸಾಕಾರಗೊಳ್ಳುತ್ತಿವೆಯೇ? ಸಂವಿಧಾನವು ದಿನ ಬದುಕಾಗಿ ಅನುವಾದಗೊಂಡಿದೆಯೇ? ಸರ್ವಜನಾಂಗದ ಶಾಂತಿಯ ತೋಟ ಎಂದು ಕರೆಸಿಕೊಂಡಿದ್ದ ನೆಲದಲ್ಲಿ ಎಲ್ಲ ಮತ, ಧರ್ಮ, ಪಂಥ, ಶ್ರದ್ಧೆಯ ಜನರು ಶಾಂತಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗಳನ್ನು ಇಟ್ಟುಕೊಂಡು 8ನೇ ಮೇ ಸಾಹಿತ್ಯ ಮೇಳ ಮೇ 27 ಮತ್ತು 28ರಂದು ತಾಜ್‌ ಪ್ಯಾಲೇಸ್‌ ಸಭಾಂಗಣದಲ್ಲಿ ನಡೆಯಲಿದೆ.

‘ಸ್ವಾತಂತ್ರ್ಯ–75 ನೆಲದ ದನಿಗಳು ಗಳಿಸಿದ್ದೇನು? ಕಳೆದುಕೊಂಡಿದ್ದೇನು?’ ಎಂಬ ಪ್ರಮುಖ ವಿಚಾರ ಇಟ್ಟುಕೊಂಡು ನಡೆಯಲಿರುವ ಈ ಸಮ್ಮೇಳನಕ್ಕೆ ಆರು ಮಂದಿ ಶ್ರಮಜೀವಿಗಳು ಚಾಲನೆ ನೀಡಲಿದ್ದಾರೆ.

ಮೇ 27ರಂದು ಬೆಳಿಗ್ಗೆ 10ಕ್ಕೆ ಉದ್ಘಾಟನೆಗೊಳ್ಳಲಿದ್ದು, ಜಸ್ಟಿಸ್ ಕೆ. ಚಂದ್ರು, ಪಿ.ಸಾಯಿನಾಥ್, ದೆಹಲಿಯ ಕವಿತಾ ಕೃಷ್ಣನ್, ಮಂಗಳೂರಿನ ಅಬ್ದುಸ್ಸಲಾಂಪುತ್ತಿಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಂ.ಜಿ. ಈಶ್ವರಪ್ಪ, ಐವನ್ ಡಿಸಿಲ್ವಾ, ಡಿ.ಬಿ. ರಜಿಯಾ, ಅಶೋಕ ಬರಗುಂಡಿ, ಎಲ್. ಎಚ್.ಅರಣ್ ಕುಮಾರ್ ಉಪಸ್ಥಿತರಿರುವರು.

ಮಧ್ಯಾಹ್ನ 2ರಿಂದ ನಡೆಯುವ ಅಭಿವ್ಯಕ್ತಿ ಗೋಷ್ಠಿಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್, ನಟ ಚೇತನ ಅಹಿಂಸಾ ಮಾತನಾಡುವರು. ಮಧ್ಯಾಹ್ನ 3.15ಕ್ಕೆ ನಡೆಯುವ ‘ಗ್ರಾಮಭಾರತ’ ಗೋಷ್ಠಿಯಲ್ಲಿ ಕೆ.ಪಿ. ಸುರೇಶ್, ಪ್ರಕಾಶ್ ಕಮ್ಮರಡಿ ಮಾತನಾಡುವರು. 4.30ರಿಂದ ಕಾವ್ಯಪ್ರಸ್ತುತಿ, ಸಂಜೆ 6ಕ್ಕೆ ‘ತರುಣ ಭಾರತ’ ಕುರಿತು ಗೋಷ್ಠಿ, ‘ನಂಗೇಲಿ’ ರಂಗಪ್ರಸ್ತುತಿ ಇರಲಿದೆ. ರಾತ್ರಿ 10ರಿಂದ ಆನಂದ ಋಗ್ವೇದಿ, ಎಚ್.ಎ. ಭಿಕ್ಷಾವರ್ತಿ ಮಠ, ಹುಲಿಕಟ್ಟೆ ಚನ್ನಬಸಪ್ಪ, ಇಸ್ಮಾಯಿಲ್ ಎಲಿಗಾರ್, ಲಿಂಗರಾಜ ಕಮ್ಮಾರ ಉಪಸ್ಥಿತಿಯಲ್ಲಿ ಹೊನಲು ಬೆಳಕಿನ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.

28ರಂದು ನಡೆಯುವ ಕವಿಗೋಷ್ಠಿಯಲ್ಲಿ ರಂಜಾನ್ ದರ್ಗಾ ಅವಲೋಕನ ಮಾಡುವರು. ವಿಲ್ಸನ್‌ ಕಟೀಲ್‌ ಮೊದಲ ಮಾತು ಆಡುವರು. ಅಂದು 10.30ಕ್ಕೆ ನಡೆಯುವ ‘ಬಹುತ್ವ ಭಾರತ’ ಕಾರ್ಯಕ್ರಮದಲ್ಲಿ ಸುಧೀಂದ್ರ ಕುಲಕರ್ಣಿ, ಚಂದ್ರಶೇಖರ ಗೋರೆಬಾಳ, ನಸ್ರೀನ್ ಮಿಠಾಯಿ, ಬಿ.ಟಿ.ವೆಂಕಟೇಶ್ ಪಾಲ್ಗೊಳ್ಳುವರು. ಮಧ್ಯಾಹ್ನ 12.30ಕ್ಕೆ ನಡೆಯುವ ‘ಮಹಿಳಾ ಭಾರತ’ ವಿಚಾರಗೋಷ್ಠಿಯಲ್ಲಿ ಮೀನಾಕ್ಷಿ ಬಾಳಿ, ಕೆಸ್ತರ ಮಾರ್ಯ, ಮುಮ್ತಾಜ್‌ ಬೇಗಂ, ರೂಮಿ ಹರೀಶ್‌ ಮಾತನಾಡುವರು.

ಮಧ್ಯಾಹ್ನ 3ಕ್ಕೆ ನಬಿಸಾಬ್ ಕಿಲ್ಲೇದಾರ, ಕೋರ್ಣೇಶ್ವರ ಸ್ವಾಮೀಜಿ, ಮಮತಾ ಯಜಮಾನ್, ನೂರ್ ಶ್ರೀಧರ್ ಅನುಭವ ಕಥನ ಪ್ರಸ್ತುತಪಡಿಸಲಿದ್ದಾರೆ. ಸಂಜೆ 5ಕ್ಕೆ ಪ್ರಶಸ್ತಿ ಪ್ರದಾನ, ಸಮಾರೋಪ ನಡೆಯಲಿದ್ದು, ಬಸವರಾಜ್ ಹೂಗಾರ ಪ್ರಾಸ್ತಾವಿಕ ಭಾಷಣ ಮಾಡುವರು. ಮೂಡ್ನಾಕೂಡು ಚಿನ್ನಸ್ವಾಮಿ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಕುಂ.ವೀರಭದ್ರಪ್ಪ ಸಮಾರೋಪ ಭಾಷಣ ಮಾಡುವರು. ವಿ.ಎ.ಲಕ್ಷ್ಮಣ್, ದೀಪ್ತಿ ಭದ್ರಾವತಿ, ರೇಣುಕಾ ರಮಾನಂದ ಅವರಿಗೆ ‘ವಿಭಾ’ ಸಾಹಿತ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ. ಜಿ.ಎಸ್‌.ಜಯದೇವ, ಎಸ್‌.ಶಾಂತಮ್ಮ, ಸಿ.ಚನ್ನಬಸವಣ್ಣ ಅವರಿಗೆ ‘ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ದಾವಣಗೆರೆಯ ಬಿ.ಟಿ. ಜಾಹ್ನವಿ ಅವರಿಗೆ ನವಲಕಲ್ ಬೃಹನ್ಮಠ ಶಾಣತವೀರಮ್ಮ ಮಹಾತಾಯಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘಟಕ ಲಡಾಯಿ ಪ್ರಕಾಶನದ ಬಸವರಾಜ ಸೂಳಿಬಾವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT