ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 6 ತಿಂಗಳ ವಿಮೆ ವಜಾಗೊಳಿಸಲು ಲಾರಿ ಮಾಲೀಕರ ಆಗ್ರಹ

Last Updated 9 ಜೂನ್ 2020, 7:57 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎರಡೂವರೆ ತಿಂಗಳು ಲಾರಿಗಳು ರಸ್ತೆಗೆ ಇಳಿಯದೇ ಲಾರಿ ಮಾಲೀಕರಿಗೆ ನಷ್ಟವಾಗಿದ್ದು, ಸರ್ಕಾರ ಎರಡು ತ್ರೈಮಾಸಿಕ ತೆರಿಗೆ ಹಾಗೂ 6 ತಿಂಗಳ ವಿಮೆಯನ್ನು ವಜಾ ಮಾಡಬೇಕು ಎಂದು ದಾವಣಗೆರೆ ಜಿಲ್ಲಾ ಲಾರಿ ಮಾಲೀಕರು ಮತ್ತು ಸಾರಿಗೆ ಏಜೆಂಟರ ಸಂಘದ ಜಿಲ್ಲಾಧ್ಯಕ್ಷ ಸೈಯ್ಯದ್ ಸೈಫುಲ್ಲಾ ಆಗ್ರಹಿಸಿದರು.

‘ಲಾಕ್‌ಡೌನ್ ಸಮಯದಲ್ಲಿ ಲಾರಿ ಚಾಲಕರು ಜೀವವನ್ನು ಲೆಕ್ಕಿಸದೇ ಅವಶ್ಯಕ ವಸ್ತುಗಳ ಸಾಗಣೆ ಮಾಡಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಿದ್ದಾರೆ. ಈ ಬಗ್ಗೆ ಸರ್ಕಾರ ಗಮನಹರಿಸಿ ಪರಿಹಾರ ನೀಡಬೇಕು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಕಡಿಮೆಯಾದರೂ ಅದಕ್ಕೆ ತಕ್ಕಂತೆ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತಿಲ್ಲ. ಬದಲಾಗಿ ಬೆಲೆ ಹೆಚ್ಚಿಸಿ ಸರ್ಕಾರ ನಮ್ಮ ಮೇಲೆ ಬರೆ ಎಳೆಯುತ್ತಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಇತ್ತೀಚಿನ ದಿನಗಳಲ್ಲಿ ಸರಕು ಉತ್ಪಾದನೆ ಪ್ರಮಾಣ ಕುಂಠಿತಗೊಂಡಿದೆ. ಆದರೆ ಸರಕು ಸಾಗಾಣಿಕೆ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಬಹಳಷ್ಟು ವಾಹನಗಳಿಗೆ ಸಾಗಣೆ ಮಾಡಲು ಸರಕಿನ ಕೊರತೆ ಇದೆ. ಈವರೆಗೆ ಸಾರಿಗೆ ಉದ್ಯಮದಲ್ಲಿ ಖರ್ಚಿಗೆ ಅನುಗುಣವಾಗಿ ಲಾರಿಯ ಬಾಡಿಗೆಗಳು ಹೆಚ್ಚಾಗಿಲ್ಲ. ಹೆಚ್ಚಾದರೂ ಇದರ ಲಾಭವನ್ನು ಮಧ್ಯವರ್ತಿಗಳು (ಟ್ರಾನ್ಸ್‌ಪೋರ್ಟ್‌ ಏಜೆಂಟ್ಸ್ ಹಾಗೂ ಬುಕಿಂಗ್ ಏಜೆಂಟ್ಸ್‌) ಪಡೆಯುತ್ತಿದ್ದಾರೆ’ ಎಂದರು.

‘ನಾವು ಸರಕನ್ನು ಖರೀದಿದಾರರು ಹೇಳಿದ ಸ್ಥಳಕ್ಕೆ ತಲುಪಿಸಿದ ಮೇಲೆ ಯಾವುದೇ ಡಿಸ್ಕೌಂಟ್, ಮಾಮೂಲು ವಜಾ ಮಾಡದೇ ಆ ಸರಕು ಸಾಗಿಸಲು ನಿರ್ಧಾರಿತ ಬಾಡಿಗೆ ಸ್ಥಳದಲ್ಲಿ ನೀಡಬೇಕು. ಲಾರಿ ಮಾಲೀಕರ ಹಕ್ಕನ್ನು ಕಸಿದು ಏಜೆಂಟರು ಬಾಡಿಗೆ ನಿಗದಿ ಮಾಡಬಾರದು. ಯಾವುದೇ ತರಹದ ರೀಫಂಡ್ ಪಡೆಯಬಾರದು. ಪಡೆದಿದ್ದು ಗೊತ್ತಾದಲ್ಲಿ ಆ ಟ್ರಾನ್ಸ್‌ಫೋರ್ಟ್ ಕಚೇರಿಯ ಮೇಲೆ ಪ್ರಕರಣ ದಾಖಲಿಸುವುದರ ಜೊತೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ಪ್ರಧಾನ ಕಾರ್ಯದರ್ಶಿ ಭೀಮಣ್ಣ, ಸಂಘದ ಕಾರ್ಯದರ್ಶಿ ಎಸ್‌.ಕೆ.ಮಲ್ಲಿಕಾರ್ಜುನ್, ದಾವಣಗೆರೆ ಲೋಕಲ್‌ ಮತ್ತು ಗೂಡ್ಸ್‌ ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ದಾದಾಪೀರ್‌ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT