ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಆಲಿಕಲ್ಲು ಮಳೆಯಿಂದ ಮಾವು ಬೆಳೆಗಾರರು ನಷ್ಟದಲ್ಲಿ

ಚಿಕ್ಕಜಾಜೂರು: ಮಾವು ಇಳುವರಿ ಕುಸಿತ
Last Updated 3 ಜೂನ್ 2022, 3:55 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಈ ವರ್ಷ ಮಾವು ಇಳುವರಿ ಕುಸಿತದ ಜೊತೆ, ಏಪ್ರಿಲ್‌ ತಿಂಗಳಿನಲ್ಲಿ ಸುರಿದ ಆಲಿಕಲ್ಲು ಮಳೆ ಹೋಬಳಿಯ ಬಹುತೇಕ ಗ್ರಾಮಗಳಲ್ಲಿಯ ಮಾವು ಬೆಳೆಗಾರರಿಗೆ ಕಹಿ ಅನುಭವವನ್ನು ತಂದಿದೆ.

ಕಳೆದ ವರ್ಷ ಉತ್ತಮ ಮಳೆಯಾಗಿದ್ದರೂ, ಮಾವಿನ ಮರಗಳಲ್ಲಿ ಚಿಗುರು ಹೆಚ್ಚಾಗಿದೆಯೇ ವಿನಾ, ಮಾವಿನ ಫಲದ ಇಳುವರಿ ಮಾತ್ರ
ಕನಿಷ್ಠ ಮಟ್ಟಕ್ಕೆ ಇಳಿದಿದೆ. ಮಾವು ಬೆಳೆಗಾರರು, ಮಾವಿನ ಮರಗಳನ್ನು ಏಕೆ ಬೆಳೆದೆವೋ ಎಂದು ಚಿಂತಿಸುವಂತಾಗಿದೆ. ಈ ವರ್ಷ ಮರಗಳಲ್ಲಿ ಇಳುವರಿ ತೀವ್ರ ಕುಂಠಿತಗೊಂಡಿದೆ. ಮಾವು ಬೆಳೆಗಾರರು ಕಂಗಾಲಾಗುವಂತಾಗಿದೆ. ಏಪ್ರಿಲ್‌ ತಿಂಗಳ ಕೊನೆಯಲ್ಲಿ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಯಿಂದಾಗಿ ಬಿಟ್ಟ ಮಾವಿನ ಕಾಯಿಗಳೂ ರೋಗದಿಂದ ನಷ್ಟವಾಗಿವೆ ಎನ್ನುತ್ತಾರೆ ಮಾವು ಬೆಳೆಗಾರರು.

‘ಎರಡು ಎಕರೆಯಲ್ಲಿ ಬೆಳೆದಿರುವ ಸಿಂಧೂರ ಮತ್ತು ಬಾದಾಮಿ ತಳಿಯ 120 ಸಸಿಗಳನ್ನು ವರ್ಷಕ್ಕೆ ₹ 65,000, ₹ 55,000ಕ್ಕೆ ಖೇಣಿ ಕೊಡುತ್ತಿದ್ದೆ. ಕಳೆದ ವರ್ಷ ಉತ್ತಮ ಮಳೆಯಾಗಿ ಮರಗಳೆಲ್ಲಾ ಹಚ್ಚ ಹಸಿರಿನಿಂದ ತುಂಬಿತ್ತು. ಉತ್ತಮ ಇಳುವರಿ ಹಾಗೂ ಆದಾಯದ ನಿರೀಕ್ಷೆಯಲ್ಲಿದ್ದ. ಆದರೆ, ನಮ್ಮ ನಿರೀಕ್ಷೆಗಿಂತ ತೀರ ಕನಿಷ್ಠ ಮಟ್ಟದ ಇಳುವರಿ ಬಂದಿತು. ಅರ್ಧದಷ್ಟು ಮರಗಳಲ್ಲಿ ಮಾತ್ರ ಕಾಯಿ ಬಿಟ್ಟಿದ್ದವು. ಉಳಿದ ಮರಗಳಲ್ಲಿ ಹೀಚುಗಳೇ ಇಲ್ಲದಂತಾಗಿ ಬರಿ ಸೊಪ್ಪು ಮಾತ್ರ ಇದೆ. ಈ ವರ್ಷ ಎಲ್ಲ ಕಡೆಯೂ ಇಳುವರಿ ಸಾಧಾರಣವಾಗಿದ್ದರಿಂದ ಮಾವಿನ ಹಣ್ಣಿನ ಬೆಲೆ ಹೆಚ್ಚಾಗುವುದರಿಂದ ಹೆಚ್ಚು ಅದಾಯ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ, ಏಪ್ರಿಲ್‌ ತಿಂಗಳಿನಲ್ಲಿ ಎರಡು ಬಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಬಂದಿದ್ದರಿಂದ, ಅರ್ಧದಷ್ಟು ಕಾಯಿಗಳು ಉದುರಿ ಹೋದವು. ಒಂದೊಂದು ಮರದಲ್ಲಿ 40ರಿಂದ 50ಕ್ಕೂ ಹೆಚ್ಚು ಕಾಯಿಗಳು ಉದುರಿವೆ’ ಎಂದು ಹನುಮನಕಟ್ಟೆ ಗ್ರಾಮದ ಮಾವು ಬೆಳೆಗಾರ ಶಿವಪ್ಪ
ತಿಳಿಸಿದರು.

ಕುಸಿದ ಖೇಣಿ ಬೆಲೆ: ಈ ಬಾರಿ ಅಲಿಕಲ್ಲು ಮಳೆಯಾಗಿದ್ದರಿಂದ, ಬಹುತೇಕ ಕಾಯಿಗಳು ಕೊಳೆತು ಉದುರಿ ಬಿದ್ದಿವೆ. ತೊಟ್ಟಿನ ಭಾಗದಲ್ಲಿ ಕಪ್ಪು ಬಣ್ಣ ಬಂದಿರುವುದರಿಂದ ಖೇಣಿದಾರರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಾಗಲೇ ಹಣ್ಣಿಗೆ ಬಂದಿರುವುದರಿಂದ, ಪಕ್ಷಿಗಳ ಹಾವಳಿ ಹೆಚ್ಚಾಗಿದೆ. ಜನರ ಹಾವಳಿಯೂ ಇದೆ. ಈ ರೀತಿ ನಷ್ಟ ಅನುಭವಿಸುವ ಬದಲು ಬಂದಷ್ಟು ಬರಲಿ ಎಂದು ಈ ವರ್ಷ ಹೊಳಲ್ಕೆರೆಯ ವ್ಯಾಪಾರಿಯೊಬ್ಬರಿಗೆ ₹ 20,000ಕ್ಕೆ ಖೇಣಿ ಕೊಟ್ಟಿದ್ದೇನೆ ಎಂದು ಶಿವಪ್ಪ ತಿಳಿಸಿದರು.

ಇಳುವರಿಯಲ್ಲಿ ತೀವ್ರ ಕುಸಿತ
2–3 ವರ್ಷಗಳಿಂದ ಬಿ. ದುರ್ಗ ಹೋಬಳಿಯಲ್ಲಿ ಸರಿಯಾಗಿ ಮಳೆ ಬಾರದೇ ಮತ್ತು ತೋಟಗಳಲ್ಲಿಯ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತದಿಂದಾಗಿ ಮಾವಿನ ಮರಗಳಲ್ಲಿ ಇಳುವರಿ ತೀವ್ರ ಕುಸಿತವಾಗಿದೆ. ಬಿ. ದುರ್ಗ ಹೋಬಳಿಯ ಹಿರೇಎಮ್ಮಿಗನೂರು, ಚಿಕ್ಕ ಎಮ್ಮಿಗನೂರು, ಕಡೂರು, ಸಮೀಪದ ಚಿಕ್ಕಂದವಾಡಿ, ಕೇಶವಾಪುರ ಗ್ರಾಮಗಳಲ್ಲಿ ಮಾವು ಬೆಳೆಗಾರರು ಹೆಚ್ಚಾಗಿದ್ದು, ಎರಡು ವರ್ಷಗಳಿಗಿಂತಲೂ ಈ ವರ್ಷ ಮಾವು ಇಳುವರಿ ತೀವ್ರ ಕುಸಿತವಾಗಿದೆ. ಮುಂಗಾರು ಪೂರ್ವದಲ್ಲಿ ಬೀಸಿದ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ. ಇಷ್ಟೆಲ್ಲ ರೈತರು ನಷ್ಟ ಅನುಭವಿಸಿದ್ದರೂ, ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆ ವತಿಯಿಂದಾಗಲಿ ಅಥವಾ ಸರ್ಕಾರದ ವತಿಯಿಂದಾಗಲಿ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ’ ಎನ್ನುತ್ತಾರೆ ಮಾವು ಬೆಳೆಗಾರರಾದ ಕೇಶವಾಪುರದ ಪ್ರಕಾಶ್‌, ಭೀಮಪ್ಪ, ಮಲ್ಲಿಕಾರ್ಜುನ, ಹಿರೇಎಮ್ಮಿಗನೂರು ಗ್ರಾಮದ ಮಲ್ಲಿಕಾರ್ಜುನಪ್ಪ, ಶಂಬಣ್ಣ, ಮಾಳಿಗೆರ ನಾಗರಾಜ್‌, ಚಿಕ್ಕಎಮ್ಮಿಗನೂರು ಈ. ಫಾಲಾಕ್ಷಪ್ಪ ಮೊದಲಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT