ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅರೆ ಮಲೆನಾಡಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮತಯಾಚನೆ

Published 2 ಮೇ 2024, 4:59 IST
Last Updated 2 ಮೇ 2024, 4:59 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಕಟ್ಟಕಡೆಯಲ್ಲಿರುವ, ಶಿವಮೊಗ್ಗ ಸೀಮೆಗೆ ಅಂಟಿಕೊಂಡಿರುವ ಹೊನ್ನಾಳಿ–ನ್ಯಾಮತಿ ಅವಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ಬೆಳಿಗ್ಗೆಯಿಂದಲೇ ಕಾಂಗ್ರೆಸ್‌ನ ಕಲರವ.

ಲೋಕಸಭೆ ಚುನಾವಣೆಯ ದಾವಣಗೆರೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಬಿಸಿಲು ಏರುವ ಮೊದಲೇ ದಾವಣಗೆರೆಯಿಂದ ಹೊರಟು ಮಾಸಡಿ ಗ್ರಾಮದಿಂದ ಮತಯಾಚನೆ ಆರಂಭಿಸಿದರು.

ಅವರನ್ನು ಸಾಂಪ್ರದಾಯಿಕ ಶೈಲಿಯಲ್ಲೇ ಸ್ವಾಗತಿಸಿದ ಗ್ರಾಮದ ಹೆಣ್ಣುಮಕ್ಕಳು, ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಗ್ರಾಮೀಣ ಮಹಿಳೆಯರ ಹೇಳಿಕೆ ಆಲಿಸಿದ ಅಭ್ಯರ್ಥಿ ಹಾಗೂ ಶಾಸಕ ಡಿ.ಜಿ. ಶಾಂತನಗೌಡ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಆದಿಯಾಗಿ ಪಕ್ಷದ ಪ‍್ರತಿಯೊಬ್ಬ ಮುಖಂಡರ ಮುಖದಲ್ಲೂ ಮಂದಹಾಸ ಹೊರಹೊಮ್ಮಿತು.

‘ನಮ್ಮೂರಲ್ಲಿ ನಾಮಧಾರಿ ಕುಂಚಟಿಗ ಮತ್ತು ಕುರುಬ ಸಮುದಾಯದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಸುತ್ತಲಿನ ಇನ್ನೂ ಕೆಲವು ಗ್ರಾಮಗಳಲ್ಲೂ ಇದೇ ಸಮುದಾಯದವರ ಸಂಖ್ಯೆ ಅಧಿಕವಾಗಿದೆ. ಗ್ರಾಮದಲ್ಲಿ ಸಾಮಾಜಿಕ ಸಾಮರಸ್ಯವಿದೆ. ರಾಜಕೀಯಕ್ಕೆ ಸಂಬಂಧಿಸಿದಂತೆ ಬಿಜೆಪಿ– ಕಾಂಗ್ರೆಸ್‌ ಬೆಂಬಲಿಗರು ಇದ್ದಾರೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿವೆ’ ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ವಿವರಿಸಿದರು.

‘ಪಕ್ಷೇತರ ಅಭ್ಯರ್ಥಿಯಾಗಿರುವ ಜಿ.ಬಿ. ವಿನಯಕುಮಾರ್‌ ಅವರ ಪರ ಅಭಿಮಾನವೂ ಕಂಡುಬರುತ್ತಿದೆ. ಯುವ ಸಮೂಹ ಅವರ ಬೆಂಬಲಕ್ಕೆ ನಿಂತಂತಿದೆ’ ಎಂದೂ ಕೆಲವರು ತಿಳಿಸಿದರು.

‘ನಾನು ಕಾಂಗ್ರೆಸ್‌ನ ಕಟ್ಟಾ ಕಾರ್ಯಕರ್ತ. ಅಭ್ಯರ್ಥಿಯಾಗಿರುವ ಪ್ರಭಾ ಮೇಡಂ ಊರಿಗೆ ಭೇಟಿ ನೀಡಿದ್ದು ಸಂತಸ ತಂದಿದೆ. ನಮ್ಮ ಮತಗಳು ಬೇರೆಡೆ ಹಂಚಿಹೋಗದಂತೆ ನೋಡಿಕೊಳ್ಳುತ್ತಿದ್ದೇವೆ. ಗೆದ್ದಮೇಲೆ ಮುಂದೆಯೂ ಇವರನ್ನು ಊರಿಗೆ ಕರೆಸುತ್ತೇವೆ’ ಎಂದು ಶ್ವೇತ ವಸ್ತ್ರಧಾರಿಯಾಗಿದ್ದ ನರಸಿಂಹಪ್ಪ ಹೇಳಿದರು.

ಜೈಕಾರದ ನಡುವೆ ಭಾಷಣ ಮಾಡಿದ ಅಭ್ಯರ್ಥಿ ಅಲ್ಲಿಂದ ಹೊರಟಿದ್ದು ಹೊನ್ನಾಳಿ ದಾಟಿಕೊಂಡು, ಶಿವಮೊಗ್ಗ ಮಾರ್ಗದಲ್ಲಿರುವ ಹರಳಹಳ್ಳಿ ಗ್ರಾಮಕ್ಕೆ.

‘ಊರಲ್ಲಿ ಸಾದರ ಲಿಂಗಾಯತ ಹಾಗೂ ಕುರುಬ ಸಮುದಾಯದವರ ಸಂಖ್ಯೆಯೇ ಅಧಿಕ. ಆದಿ ಕರ್ನಾಟಕ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ’ ಎಂದ ಸ್ಥಳೀಯರು, ಪಕ್ಷಗಳ ಬಲಾಬಲಕ್ಕೆ ಸಂಬಂಧಿಸಿದಂತೆ ಗುಟ್ಟು ಬಿಟ್ಟುಕೊಡಲಿಲ್ಲವಾದರೂ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಿರುವುದು ಸಭೆಯಲ್ಲಿ ಪಾಲ್ಗೊಂಡವರ ಸಂಖ್ಯೆ ಕಂಡು ಗೋಚರವಾಗುತ್ತಿತ್ತು.

‘ನಮ್ಮದೇನಿದ್ದರೂ ಕಾಂಗ್ರೆಸ್‌ ಪಕ್ಷ. ಯಾರು ಏನೇ ಹೇಳಿದರೂ ನಾವು ಪಕ್ಷ ನಿಷ್ಠೆಯನ್ನು ತೊರೆಯುವುದಿಲ್ಲ’ ಎಂದು ಹೆಮ್ಮೆಯಿಂದಲೇ ಹೇಳಿಕೊಂಡಿದ್ದು ಡಿ.ಕೆ. ಬಸವರಾಜು ಮತ್ತು ಎಚ್‌.ಕೆ. ಕೆಂಚಪ್ಪ.

ಸಾದರ ಲಿಂಗಾಯತರೂ, ಕುರುಬರೂ, ಆದಿ ಕರ್ನಾಟಕ ಸಮುದಾಯದವರೂ, ಮುಸ್ಲಿಮರೂ ಇರುವ ಊರು ಗೋವಿನಕೋವಿ. ಹೋಬಳಿ ಕೇಂದ್ರವಾದ ಈ ಗ್ರಾಮದ ಸುತ್ತಲಿನ ಹಲವು ಊರುಗಳ ಜನರನ್ನು ಪ್ರಚಾರ ಸಭೆಗೆ ಕರೆತರಲಾಗಿತ್ತು. ರಸ್ತೆಬದಿಯಲ್ಲಿರುವ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾದುಕುಳಿತಿದ್ದ ಮಹಿಳೆಯರೂ, ಮಕ್ಕಳೂ ಕುತೂಹಲದಿಂದ ಇಣುಕಿ ನೋಡುತ್ತಿದ್ದರು. ಡಾ.ಪ್ರಭಾ ಅವರಿಗೆ ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಜೊತೆಯಾದರು.

‘ಉಚಿತ ಬಸ್‌ ಪ್ರಯಾಣ ಸೌಲಭ್ಯ (ಶಕ್ತಿ ಯೋಜನೆ)ದಿಂದಾಗಿ ಪುಣ್ಯಕ್ಷೇತ್ರಗಳಿಗೆಲ್ಲ ಭೇಟಿ ನೀಡಿ ಬಂದಿರುವ, ಇನ್ನೂ ಭೇಟಿ ನೀಡಲು ಪ್ರವಾಸಕ್ಕೆ ಹೋಗುತ್ತಿರುವ ಹೆಣ್ಣುಮಕ್ಕಳೆಲ್ಲ ಈ ಬಾರಿ ಏನು ಹೇಳಿದರೂ ಕಾಂಗ್ರೆಸ್‌ಗೇ ಮತ ಹಾಕುತ್ತಾರೆ. ಜೀವನದಲ್ಲೇ ದೂರದ ದೇವಸ್ಥಾನಗಳಿಗೆ ಹೋಗದವರೂ ಈಗ ಹೋಗುತ್ತಿದ್ದಾರೆ. ಈಗ ವೋಟ್‌ ಹಾಕದಿದ್ದರೆ ಬಸ್‌ ಛಾರ್ಜ್‌ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ‌’ ಎಂದು ಪುಟ್ಟ ಅಂಗಡಿ ಇಟ್ಟುಕೊಂಡಿರುವ ಬಿಜೋಗಟ್ಟಿಯ ಮಹೇಶ್ವರಪ್ಪ ಗ್ರಾಮದ ಹೆಣ್ಣುಮಕ್ಕಳ ಒಲವು ಯಾವ ಕಡೆ ಇರಬಹುದು ಎಂಬುದನ್ನು ಬಿಚ್ಚಿಟ್ಟರು.

ಅಲ್ಲಿಂದ ಅಭ್ಯರ್ಥಿಯು ಪಕ್ಷದ ಬೆಂಬಲಿಗರ ಪಡೆಯೊಂದಿಗೆ ಮುಂದಿನ ಊರುಗಳಾದ ಚೀಲೂರು ಕಡದಕಟ್ಟೆ, ಚೀಲೂರು, ಗ್ರಾಮಗಳಿಗೆ ಭೇಟಿ ನೀಡಿ, ಆದ್ಯತೆಯನ್ನು ಅರುಹಿ ಮತ ಹಾಕುವಂತೆ ಕೋರಿದರು.

ಮುಖಂಡರೊಬ್ಬರು ಗ್ರಾಮಸ್ಥರ ಹೆಸರನ್ನು ಹೇಳುತ್ತ, ‘ಅಣ್ಣಾ ಈಗ ಕೈ ಮುಗೀತೀನಿ. ನಿಮ್ಮವರಿಗೆಲ್ಲ ಹೇಳಿ ವೋಟ್‌ ಹಾಕಿಸು. ನಾಳೆಯಿಂದ ಮನೆಮನೆಗೆ ಬಂದು ಕಾಲು ಮುಗೀತೀನಿ’ ಎಂದು ಬೇಡಿಕೊಳ್ಳುತ್ತ ಮತ ಯಾಚಿಸುತ್ತಿದ್ದರು.

ಬಹುತೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ ಸ್ವಾಗತಿಸಿದ ಜನ ಸಾಲಾಗಿ ನಿಂತು ಭಾಷಣ ಆಲಿಸಿದರು. ಗ್ಯಾರಂಟಿ ಯೋಜನೆ ಸೇರಿದಂತೆ ಪಕ್ಷದ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಳಿಬಂದ ಮಾತುಗಳನ್ನು ಆಲಿಸಿ ಚಪ್ಪಾಳೆ ತಟ್ಟಿದರು. ಜನರ ಕೇಕೆಗೆ ಆಯಾ ಗ್ರಾಮದ ತಮಟೆ ವಾದ್ಯಗಳ ಹಿಮ್ಮೇಳ ಜೊತೆಯಾಗಿತ್ತು.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ಸಿದ್ದರಾಮಯ್ಯ ಡಿಕೆಶಿ ಬೈದವರಿಗೆ ಟಿಕೆಟ್‌ ಸಿಗಲಿಲ್ಲ

ಗೋವಿನಕೋವಿ (ದಾವಣಗೆರೆ): ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ದೂಷಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಹೀಗಳೆದ ಬಿಜೆಪಿಯ 10 ಜನ ಸಂಸದರಿಗೆ ಟಿಕೆಟ್‌ ಸಿಗಲಿಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್‌ ವ್ಯಂಗ್ಯವಾಡಿದರು. ಸಂಸದರಾದ ಅನಂತಕುಮಾರ್‌ ಹೆಗಡೆ ಪ್ರತಾಪಸಿಂಹ ಡಿ.ವಿ. ಸದಾನಂದಗೌಡ ಮುನಿಸ್ವಾಮಿ ಅವರಿಗೆ ಟಿಕೆಟ್‌ ಸಿಗಲಿಲ್ಲ. ಕಾಂಗ್ರೆಸ್‌ ಪಕ್ಷವನ್ನು ಅದರಲ್ಲೂ ಸಿದ್ದರಾಮಯ್ಯ ಅವರನ್ನು ಸದಾ ಟೀಕಿಸುತ್ತಿದ್ದ ಕೆ.ಎಸ್‌. ಈಶ್ವರಪ್ಪ ಅವರ ಮಗನಿಗೂ ಟಿಕೆಟ್ ಸಿಗಲಿಲ್ಲ ಎಂದು ಅವರು ಹೇಳುತ್ತಿದ್ದಂತೆಯೇ ಗೋವಿನಕೋವಿಯಲ್ಲಿ ನೆರೆದಿದ್ದ ಜನ ಚಪ್ಪಾಳೆ ಕೇಕೆ ಮೂಲಕ ಹುರಿದುಂಬಿಸಿದರು.‌ ವಿಶೇಷವಾಗಿ ಮಹಿಳೆಯರನ್ನೇ ಗುರಿಯಾಗಿಸಿ ಭಾಷಣ ಮಾಡಿದ ಪ್ರದೀಪ್‌ ಈಶ್ವರ್‌ ಅವರ ಬಳಿ ಬಂದ ಯುವಸಮೂಹ ಸೆಲ್ಫೀ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದುದು ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT