ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅದ್ದೂರಿಯಾಗಿ ನಡೆದ ಮಹೇಶ್ವರ ಜಾತ್ರೆ

Last Updated 16 ಜನವರಿ 2022, 14:58 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಬಸಾಪುರದಲ್ಲಿ ಮಂಗಳವಾರ ಮಹೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ನಗರ, ಸುತ್ತಮುತ್ತಲ ಗ್ರಾಮಗಳ ಜನರು ಹಬ್ಬದಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಕೊರೊನಾ ಕಾರಣದಿಂದ ಕಳೆದ ವರ್ಷ ಬಸಾಪುರದ ಜಾತ್ರೆಯಲ್ಲಿ ಸಂಭ್ರಮ ಇರಲಿಲ್ಲ. ಎರಡು ದಿನಗಳ ಕಾಲ ನಡೆಯುವ ಹಬ್ಬವನ್ನು ಒಂದೇ ದಿನದಲ್ಲಿ ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ವೈಭವದಿಂದ ಜಾತ್ರೆ ನಡೆಯಿತು.

ಮಹೇಶ್ವರ ಸ್ವಾಮಿಯ ಗದ್ದುಗೆ ಸಮೀಪ ಇರುವ ಪುಷ್ಕರಣಿಯಲ್ಲಿ ಸ್ವಾಮೀಜಿ ಒಬ್ಬರು ಮುಳುಗಿ ಮೃತ್ತಿಕೆಯನ್ನು ತಂದರು. ಅದನ್ನು 2 ಬಾಳೇಹಣ್ಣಿನ ಚಿಪ್ಪಿನಲ್ಲಿಟ್ಟು ಪೂಜಿಸ ಲಾಯಿತು. ನಂತರ ಪುಷ್ಕರಣೆ ವಿಸರ್ಜಿಸ ಲಾಯಿತು. ಎರಡೂ ಚಿಪ್ಪುಗಳು ತೇಲಿದ್ದರಿಂದ ಗ್ರಾಮಸ್ಥರ ಸಂಭ್ರಮ ಇಮ್ಮಡಿಯಾಯಿತು.

ವಿಸರ್ಜಿಸಿದ ಎರಡೂ ಚಿಪ್ಪುಗಳು ಮುಳುಗಿದರೆ ಗಂಡಾಂತರವೆಂದೂ, ಎರಡೂ ತೇಲಿದರೆ ತುಂಬಾ ಒಳ್ಳೆಯದೆಂದೂ, ಒಂದು ತೇಲಿ ಒಂದು ಮುಳುಗಿದರೆ ಸಾಧಾರಣ ಫಲ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದೆ.

ಮಹೇಶ್ವರ ಗದ್ದುಗೆ ಬಳಿ ಆನೆಕೊಂಡದ ಬಸವೇಶ್ವರ ಸ್ವಾಮಿ, ಬಸಾಪುರದ ಗುರುಸಿದ್ದೇಶ್ವರ ಸ್ವಾಮಿ ಹಾಗೂ ಹಾಲಸ್ವಾಮಿ ದೇವರ ವಿಗ್ರಹಗಳ ಸಮಾಗಮವಾಗಿತ್ತು.ಜೊತೆಗೆ ಆನೆಕೊಂಡದ ಬಸವೇಶ್ವರ ಸ್ವಾಮಿಯ ವಿಗ್ರಹವನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು. ನಂತರ ಒಲೆ ಹಚ್ಚಿ ಪ್ರಸಾದ ತಯಾರಿಸಲಾಯಿತು.

ವಿವಿಧೆಡೆ ಜಾತ್ರೆ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮಹೇಶ್ವರ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಹೇಶ್ವರನನ್ನು ಪೂಜಿಸಿದ ಜನರು ಪ್ರಸಾದವಾಗಿ ಅನ್ನ, ಹಾಲು,ಪುಡಿ ಬೆಲ್ಲ,ಬಾಳೆ ಹಣ್ಣು ಬೆರೆಸಿ ಸ್ವೀಕರಿಸಿದರು.

ದಸರಾ, ದೀಪಾವಳಿ, ಯುಗಾದಿ ಮುಂತಾದ ಹಬ್ಬಗಳನ್ನು ಮನೆಗಳಲ್ಲಿ ಮನೆಯವರೊಂದಿಗೆ ಮಾಡಿದರೆ, ಮಹೇಶ್ವರ ಜಾತ್ರೆಯನ್ನು ಊರ ಹೊರ ಭಾಗದ ದೇವ ಸ್ಥಾನದ ಆವರಣ ಅಥವಾ ತೋಟದಲ್ಲಿ ಮಾಡಲಾಗುತ್ತದೆ.

ಹಬ್ಬಕ್ಕಾಗಿ ಗ್ರಾಮಸ್ಥರು ಒಂದೆರಡು ದಿನಗಳ ಮೊದಲೇ ಹಬ್ಬ ಆಚರಿಸುವ ಸ್ಥಳವನ್ನ ಶುದ್ಧಗೊಳಿಸಿ, ಮಹೇಶ್ವರನ ಗದ್ದುಗೆ ಸ್ಥಾಪಿಸಿ ತಯಾರಿಯಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ಚಿಕ್ಕ ಮಕ್ಕಳು, ಯುವಕರು ಇಳಿ ವಯಸ್ಸಿನ ಹಿರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT