ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥೀಮ್ ಪಾರ್ಕ್, ಬಯಲುರಂಗ ಚಟುವಟಿಕೆಗೆ ವಿಸ್ತೃತ ಯೋಜನೆ ರೂಪಿಸಿ: ಮಲ್ಲಿಕಾರ್ಜುನ್

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
Published 10 ಮಾರ್ಚ್ 2024, 5:59 IST
Last Updated 10 ಮಾರ್ಚ್ 2024, 5:59 IST
ಅಕ್ಷರ ಗಾತ್ರ

ದಾವಣಗೆರೆ: ‘ಬಯಲು ರಂಗಮಂದಿರ ಹಾಗೂ ಥೀಮ್ ಪಾರ್ಕ್‌ಗಳಲ್ಲಿ ನಿರಂತರ ಚಟುವಟಿಕೆ ನಡೆಯಬೇಕು. ಈ ನಿಟ್ಟಿನಲ್ಲಿ ಇನ್ನೂ ಅನೇಕ ಕೆಲಸಗಳು ಆಗಬೇಕಿದ್ದು, ಈ ಬಗ್ಗೆ ವಿಸ್ತೃತ ಯೋಜನೆ (ಮಾಸ್ಟರ್ ಪ್ಲಾನ್) ತಯಾರಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚಿಸಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಸ್ಮಾರ್ಟ್‌ಸಿಟಿ ವತಿಯಿಂದ ₹5.23 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಥೀಮ್ ಪಾರ್ಕ್ ಮತ್ತು ಬಯಲು ರಂಗ ಮಂದಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಉದ್ಘಾಟನೆಯ ಬಳಿಕ ಈ ಜಾಗವನ್ನು ಪಾಳು ಬಿಡಬಾರದು. ಸದಾ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ‌ದಾವಣಗೆರೆ ವಿಶ್ವವಿದ್ಯಾಲಯಕ್ಕೂ ಸಾಕಷ್ಟು ಅನುದಾನ ಬರಲಿದ್ದು, ಥೀಮ್ ಪಾರ್ಕ್ ಬೆಳವಣಿಗೆಗೆ ಪೂರಕವಾಗಿ ಕೈಗೊಳ್ಳಬೇಕಾದ ಕಾಮಗಾರಿ ಕುರಿತು ಮಾಸ್ಟರ್ ಪ್ಲಾನ್ ತಯಾರಿಸಿ, ಯುಜಿಸಿಯಿಂದಲೂ ಅನುದಾನದ ತೆಗೆದುಕೊಂಡು ಬನ್ನಿ. ನಾನು ಅನುದಾನ ತಂದು ಅದಕ್ಕೆ ಸಹಕಾರ ನೀಡುತ್ತೇನೆ. ಎಲ್ಲವನ್ನೂ ರಾಜಕಾರಣಿಗಳ ಮೇಲೆ ಹಾಕಿ ಕೂರಬೇಡಿ’ ಎಂದು ಕುಲಪತಿಗೆ ಸೂಚಿಸಿದರು.

‘ವಿವಿಯ ದೃಶ್ಯಕಲಾ ಮಹಾವಿದ್ಯಾಲಯದ ಜಾಗದ ಮೇಲೆ ಎಲ್ಲರ ಕಣ್ಣು ಇದ್ದು, ಹಲವರು ಹೋರಾಟ ಮಾಡಿ ಇದನ್ನು ಉಳಿಸಿಕೊಂಡು ಬಂದಿದ್ದಾರೆ. ಹಿಂದಿನ ಸರ್ಕಾರದಲ್ಲಿ ಅಧಿಕಾರಿಯೊಬ್ಬರು ರಾತ್ರೋ, ರಾತ್ರಿ ಬರ್ಕೊಂಡ್ ಬಿಟ್ಟಿದ್ರು, ಆದರೆ, ಸಿ.ಎಚ್. ಮುರಿಗೇಂದ್ರಪ್ಪ ಸೇರಿದಂತೆ ಹಲವರು ಹೋರಾಟ ಮಾಡಿ ಅದನ್ನು ತಡೆದಿದ್ದಾರೆ’ ಎಂದು ಹೇಳಿದರು.

‘ಈಗ ಕೆಲವರು ದಾವಣಗೆರೆ ವಿವಿಯನ್ನು ತಾವು ಮಾಡಿದ್ದೇವೆ ಅಂತಾರೆ. ಆದರೆ, ವಿಶ್ವವಿದ್ಯಾಲಯಕ್ಕೆ ಬರುವ ಮುನ್ನ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭಿಸಲು ಸ್ಥಳಾವಕಾಶ ಕೊಟ್ಟು, ಬಳಿಕ ರಾಜನಹಳ್ಳಿ ಕುಟುಂಬದವರು ಮತ್ತು ಬಾಪೂಜಿ ವಿದ್ಯಾಸಂಸ್ಥೆ ಸೇರಿ 80 ಎಕರೆ ಜಾಗದ ನೀಡಿದ್ದರ ಪರಿಣಾಮವಾಗಿ ಅಲ್ಲಿ ವಿವಿ ತಲೆ ಎತ್ತಿದೆ’ ಎಂದರು.

‘ಎಸ್‌.ಎಸ್.ಮಲ್ಲಿಕಾರ್ಜುನ್‌ ಈ ಹಿಂದೆ ಸಚಿವರಾಗಿದ್ದಾಗ ದಾವಣಗೆರೆಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ತಂದರು. ಅದರ ಅಡಿಯಲ್ಲೇ ನಿರ್ಮಾಣವಾಗಿರುವ ಥೀಮ್ ಪಾರ್ಕ್ ಅನ್ನು ಅವರೇ ಉದ್ಘಾಟಿಸಿದ್ದಾರೆ. ದನದ ಸಂತೆ ಸೇರಿದಂತೆ ನಾನಾ ಕಲಾಕೃತಿಗಳು ಇಲ್ಲಿದ್ದು, ಇದನ್ನು ಶಾಲಾ ಮಕ್ಕಳ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಬೇಕಿದೆ. ಈ ನಿಟ್ಟಿನಲ್ಲಿ ಸಚಿವರು ಕಾಲೇಜಿಗೆ ಗೇಟ್ ಮತ್ತು ಅಲ್ಲಿಂದ ಇಲ್ಲಿಗೆ ಬರಲು ದಾರಿ ಮಾಡಿಸಿಕೊಡಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ್ ಮನವಿ ಮಾಡಿದರು.

ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ‘ಬಯಲು ರಂಗಮಂದಿರಕ್ಕೆ ರಸ್ತೆಯ ಅಗತ್ಯವಿದ್ದು, ಇಲ್ಲಿ ಅಧಿಕಾರಿಗಳು ವಸತಿ ಗೃಹ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರಿಗೆ ಬುದ್ಧಿ ಹೇಳುವ ಕೆಲಸವನ್ನು ಸಚಿವರು ಮಾಡಬೇಕು’ ಎಂದರು.

ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶಕುಮಾರ್, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಪಾಮೇನಹಳ್ಳಿ ನಾಗರಾಜ್, ವೀಣಾ ನಂಜಪ್ಪ, ಮುಖಂಡರಾದ ಕೊಂಡಜ್ಜಿ ಜಯಪ್ರಕಾಶ್, ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ, ಅಲಕಾನಂದ್, ಗಣೇಶ್ ಹುಲ್ಮನಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ವೀಣಾ ಹೆಗಡೆ ಮತ್ತು ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT