ಗುರುವಾರ , ಆಗಸ್ಟ್ 11, 2022
23 °C
ಎಸ್‍ಸಿಪಿ, ಟಿಎಸ್‍ಪಿ ಯೋಜನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ಶೀಘ್ರ ಅನುದಾನ ಬಳಸಿ ಪ್ರಗತಿ ಸಾಧಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಸ್‍ಸಿಪಿ, ಟಿಎಸ್‍ಪಿಯಡಿ ಬಿಡುಗಡೆಯಾದ ಅನುದಾನವನ್ನು ಶೀಘ್ರವಾಗಿ ನಿಗದಿತ ಕಾರ್ಯಕ್ರಮಗಳಿಗೆ ಬಳಕೆ ಮಾಡಿ ಪ್ರಗತಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯ ಜಿಲ್ಲಾ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಯೋಜನೆಯಡಿ ನಿಗದಿತ ಅವಧಿಯೊಳಗೆ ಪ್ರಗತಿ ಸಾಧಿಸಬೇಕು. ಅತಿ ಕಡಿಮೆ ಪ್ರಗತಿ ಸಾಧಿಸಿರುವ ಹಾಗೂ ಸಭೆಗೆ ಗೈರಾಗಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಇದುವರೆಗೆ ಎಸ್‍ಸಿಪಿಯಡಿ ಶೇ 57 ಮತ್ತು ಟಿಎಸ್‍ಪಿ ಯೋಜನೆಯಡಿ ಶೇ 66ರಷ್ಟು ಪ್ರಗತಿ ಸಾಧಿಸಲಾಗಿದೆ. ಶೀಘ್ರ ಅನುದಾನ ಬಳಕೆ ಮಾಡಿ, ನಿಗದಿತ ಕಾರ್ಯಕ್ರಮಗಳು, ಕಾಮಗಾರಿಗಳನ್ನು ಪೂರ್ಣಗೊಳಿಸಿ ಗುರಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ‘ಕೃಷಿ ಇಲಾಖೆಯಲ್ಲಿ ಎಸ್‍ಸಿಪಿ ಯೋಜನೆಯಡಿ ಶೇ 80.45 ಮತ್ತು ಟಿಎಸ್‍ಪಿ ಯೋಜನೆಯಡಿ ಶೇ 89.58ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದರು.

ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರೊ.ಲಕ್ಷಣ್ ಮಾತನಾಡಿ, ‘ದಾವಣಗೆರೆ ವಿಶ್ವವಿದ್ಯಾಲಯದಲ್ಲಿ 395 ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ವಿವಿಯ ವಿವಿಧ ಫೆಲೋಶಿಪ್‌ಗೆ ₹ 60 ಲಕ್ಷ ವೆಚ್ಚವಾಗಲಿದ್ದು, ₹ 50 ಲಕ್ಷ ಮಾತ್ರ ಅನುದಾನ ನಿಗದಿಯಾಗಿದೆ. 24ಕ್ಕೂ ಹೆಚ್ಚು ಅನುಮೋದಿತ ಕಾರ್ಯಕ್ರಮಗಳಿದ್ದು, ಅನುದಾನದ ಕೊರತೆಯಿಂದ ಮಾಡಲಾಗುತ್ತಿಲ್ಲ. ಅನುದಾನವನ್ನು ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ‘ದಾವಣಗೆರೆ ವಿಶ್ವವಿದ್ಯಾಲಯದ ಎಸ್‍ಸಿಟಿ, ಟಿಎಸ್‍ಪಿ ಯೋಜನೆಯಡಿ ಬರುವ ವಿದ್ಯಾರ್ಥಿಗಳ ಸಂಖ್ಯೆ, ಕಾರ್ಯಕ್ರಮಗಳ ವಿವಿರ, ಅಗತ್ಯ ಅನುದಾನದ ಕುರಿತು ಪ್ರಸ್ತಾವ ಸಲ್ಲಿಸಿ’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ‘ಎಸ್‍ಸಿಪಿ ಯೋಜನೆಯಡಿ ಶೇ 60.55 ಪ್ರಗತಿ ಸಾಧಿಸಲಾಗಿದ್ದು, ಟಿಎಸ್‍ಪಿ ಯೋಜನೆಯಡಿ ಸಿಸಿ ರಸ್ತೆ, ಸೋಲಾರ್ ನೀರು ವ್ಯವಸ್ಥೆ ಒದಗಿಸಲು ಟೆಂಡರ್ ಕರೆಯಲಾಗಿದೆ. ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಕೋಚಿಂಗ್ ನೀಡಲು ₹ 12 ಲಕ್ಷ ಅನುದಾನ ನಿಗದಿಯಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೇಷ್ಮಾ ಕೌಸರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೋಮ್ಮನ್ನರ್, ಡಿಡಿಪಿಐ ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.