ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಿ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಆಡಳಿತಾಧಿಕಾರಿ ಉಮಾಶಂಕರ್‌ ಸೂಚನೆ
Last Updated 12 ಆಗಸ್ಟ್ 2021, 12:38 IST
ಅಕ್ಷರ ಗಾತ್ರ

ದಾವಣಗೆರೆ: ‘ಕೋವಿಡ್‌ ಸಂಕಷ್ಟದ ಸಮಯದಲ್ಲಿ ಮಕ್ಕಳು ಶಿಕ್ಷಣ ವ್ಯವಸ್ಥೆಯಿಂದ ದೂರ ಹೋಗದಂತೆ ನೋಡಿಕೊಳ್ಳಬೇಕು. ಕಲಿಕಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಮಕ್ಕಳು ಹಾಗೂ ಪೋಷಕರನ್ನು ಶಿಕ್ಷಕರು ಪ್ರೇರೇಪಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ್‌ ಸೂಚಿಸಿದರು.

ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ‘ಕೋವಿಡ್‌ನಿಂದ ಶಿಕ್ಷಣ ವಲಯಕ್ಕೆ ಅತಿ ಹೆಚ್ಚು ತೊಂದರೆಯಾಗಿದೆ. ಪಿಯುಸಿ ಹಂತದ ವಿದ್ಯಾರ್ಥಿನಿಯರು ಮದುವೆ ಮಾಡಿಕೊಂಡು ಕಲಿಕೆಯಿಂದ ದೂರ ಹೋಗುತ್ತಿದ್ದಾರೆ. ಹೀಗಾಗಿ ಮತ್ತೆ ಶಿಕ್ಷಣ ಕ್ಷೇತ್ರಕ್ಕೆ ಜೀವ ತುಂಬಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಕೋವಿಡ್‌ ಸಂಕಷ್ಟದ ಕಾರಣಕ್ಕೆ ಸುಮಾರು 6 ಸಾವಿರ ಹೆಚ್ಚುವರಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿದ್ದಾರೆ. ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಕೆಲವು ಅನುದಾನಿತ ಶಾಲೆಗಳು ಮಕ್ಕಳಿಗೆ ವರ್ಗಾವಣೆ ಪತ್ರ (ಟಿಸಿ) ಕೊಡುತ್ತಿಲ್ಲ’ ಎಂದು ಡಿಡಿಪಿಐ ಸಿ.ಆರ್‌. ಪರಮೇಶ್ವರ ಅವರು ಸಭೆಯ ಗಮನಕ್ಕೆ ತಂದರು.

‘ಶಾಲೆಗಳಲ್ಲಿ ಟಿಸಿ ಕೊಡದಿದ್ದರೆ ಬಿಇಒಗಳಿಗೆ ಟಿಸಿ ಕೊಡುವ ಅಧಿಕಾರವಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಉಮಾಶಂಕರ್‌ ಸೂಚಿಸಿದರು.

‘ಮಳೆಯಿಂದಾಗಿ ಹಾನಿಗೀಡಾಗಿರುವ ಶಾಲೆಗಳನ್ನು ಸಿಆರ್‌ಎಫ್‌ ಅನುದಾನದಲ್ಲಿ ದುರಸ್ತಿ ಮಾಡಿಸಿಕೊಳ್ಳಿ. ನರೇಗಾ ಯೋಜನೆಯಡಿ ಶಾಲೆಗಳಿಗೆ ಕಟ್ಟಡ, ಆಟದ ಮೈದಾನ, ಶೌಚಾಲಯ ಕಾಮಗಾರಿಗಳನ್ನು ಹೆಚ್ಚು ಮಾಡಿಸಿಕೊಳ್ಳಿ’ ಎಂದು ಅವರು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ್‌ ದಾನಮ್ಮನವರ್‌, ‘ಉದ್ಯೋಗ ಖಾತ್ರಿಯಲ್ಲಿ ಮಾನವ ದಿನಗಳನ್ನು ಸೃಷ್ಟಿಸುವಲ್ಲಿ ದಾವಣಗೆರೆ ಜಿಲ್ಲೆ ರಾಜ್ಯದಲ್ಲೇ ದ್ವಿತೀಯ ಸ್ಥಾನದಲ್ಲಿದೆ. ಪ್ರಸಕ್ತ ಸಾಲಿನಲ್ಲಿ 193 ಶಾಲೆಗಳ ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಜೊತೆಗೆ ಶಾಲೆಗಳಲ್ಲಿ ಪೌಷ್ಟಿಕ ತೋಟಗಳನ್ನೂ ನಿರ್ಮಿಸಲಾಗುತ್ತಿದೆ. ಆಗಸ್ಟ್‌ 15ರಿಂದ ಎರೆಹುಳು ತೊಟ್ಟಿಗಳನ್ನು ನಿರ್ಮಿಸುವ ‘ರೈತ ಬಂಧು’ ಯೋಜನೆಯನ್ನೂ ಕೈಗೊಳ್ಳಲಾಗುತ್ತಿದೆ’ ಎಂದು ಹೇಳಿದರು.

ಮಣ್ಣು ಪರೀಕ್ಷಾ ಕೇಂದ್ರಕ್ಕಿಲ್ಲ ಅನುದಾನ: ಅನುಪಾಲನಾ ವರದಿ ಮೇಲಿನ ಚರ್ಚೆ ವೇಳೆ ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌, ‘ಚನ್ನಗಿರಿಯ ತುಮ್ಕೋಸ್‌ನಲ್ಲಿ ಮಣ್ಣು ಪರೀಕ್ಷೆ ಕೇಂದ್ರ ತೆರೆಯುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಣ್ಣು ಪರೀಕ್ಷಾ ಕೇಂದ್ರ ತೆರೆಯಲು ₹ 3.50 ಲಕ್ಷವನ್ನು ಸರ್ಕಾರ ಭರಿಸಲಿದ್ದು, ಉಳಿದ ₹ 1.50 ಲಕ್ಷವನ್ನು ಫಲಾನುಭವಿ ಭರಿಸಬೇಕಾಗಿದೆ. ಜಿಲ್ಲೆಯಲ್ಲಿ ಏಳು ಮಣ್ಣು ಪರೀಕ್ಷಾ ಕೇಂದ್ರಗಳಿವೆ. ಒಂದು ಮಾದರಿ ಪರೀಕ್ಷೆಗೆ ₹ 300 ಸಹಾಯಧನವನ್ನು ಸರ್ಕಾರ ನೀಡುತ್ತಿತ್ತು. ಇದೀಗ ಅನುದಾನ ಬರುತ್ತಿಲ್ಲ’ ಎಂದು ತಿಳಿಸಿದರು.

ಹೆಚ್ಚಿದ ಜವಾಬ್ದಾರಿ: ‘ಸದಸ್ಯರು ಜನರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸುತ್ತಿದ್ದರು. ಈಗ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಇಲ್ಲದೇ ಇರುವುದರಿಂದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಹೆಚ್ಚಾಗಿದೆ. ಜನರ ಸಮಸ್ಯೆಗಳನ್ನು ತಿಳಿದುಕೊಂಡು ತಕ್ಷಣವೇ ಬಗೆಹರಿಸಬೇಕು. ಎಲ್ಲದಕ್ಕೂ ಜಿಲ್ಲಾ ಪಂಚಾಯಿತಿ ಕಡೆಗೆ ನೋಡದೇ, ನಿಮ್ಮ ಹಂತದಲ್ಲೇ ಪರಿಹಾರ ಕಂಡುಕೊಳ್ಳಬೇಕು. ಅಧಿಕಾರ ದುರುಪಯೋಗ ಆಗದಂತೆ ಕೆಲಸ ನಿರ್ವಹಿಸಬೇಕು’ ಎಂದು ಆಡಳಿತಾಧಿಕಾರಿ ಸೂಚಿಸಿದರು.

ವಿವಿಧ ಇಲಾಖೆಗಳ ಪ್ರಗತಿಯ ಬಗ್ಗೆ ಅಧಿಕಾರಿಗಳಿಂದ ಉಮಾಶಂಕರ್‌ ಅವರು ಮಾಹಿತಿ ಪಡೆದರು.

*

115 ಬಾಲ್ಯವಿವಾಹಗಳಿಗೆ ತಡೆ

‘ಕೋವಿಡ್‌ ಕಾರಣಕ್ಕೆ ಶಾಲೆಗಳು ಸರಿಯಾಗಿ ನಡೆಯದೇ ಇರುವುದರಿಂದ ಬಾಲ್ಯವಿವಾಹಗಳು ನಡೆಯುತ್ತಿವೆ. ಹೀಗಾಗಿ ಅಧಿಕಾರಿಗಳು ಹೆಚ್ಚು ಎಚ್ಚರದಿಂದ ಕಾರ್ಯನಿರ್ವಹಿಸಬೇಕು. ಬಾಲ್ಯ ವಿವಾಹ ತಡೆಯುವ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕು’ ಎಂದು ಉಮಾಶಂಕರ್‌ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ‘ಏಪ್ರಿಲ್‌ನಿಂದ ಇದುವರೆಗೆ 115 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಏಳು ಬಾಲ್ಯವಿವಾಹಗಳು ನಡೆದಿವೆ. ಪೋಕ್ಸೊ ಕಾಯ್ದೆಯಡಿ 82 ಪ್ರಕರಣಗಳನ್ನು ದಾಖಲಿಸಲಾಗಿದೆ’ ಎಂದು ಮಾಹಿತಿ ನೀಡಿದರು.

*

₹ 1,071 ಕೋಟಿ ಅನುದಾನ ನಿಗದಿ

2021–22ನೇ ಸಾಲಿಗೆ ಲಿಂಕ್‌ ಡಾಕ್ಯುಮೆಂಟ್‌ ವಿವಿಧ ಲೆಕ್ಕಶೀರ್ಷಿಕೆಯಡಿ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳಡಿ ₹ 354.65 ಕೋಟಿ, ತಾಲ್ಲೂಕು ಪಂಚಾಯಿತಿ ಕಾರ್ಯಕ್ರಮಗಳಡಿ ₹ 716.87 ಕೋಟಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಕ್ರಮಗಳಡಿ ₹ 35 ಲಕ್ಷ ಸೇರಿ ಒಟ್ಟು ₹ 1,071.88 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಗಳಡಿ ನಿಗದಿಪಡಿಸಿದ ₹ 354.65 ಕೋಟಿ ಅನುದಾನಕ್ಕೆ ರೂಪಿಸಿದ ಕ್ರಿಯಾಯೋಜನೆಗೆ ಸಭೆಯಲ್ಲಿ ಆಡಳಿತಾಧಿಕಾರಿ ಅನುಮೋದನೆ ನೀಡಿದರು.

ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಡಿಯ ₹ 5.41 ಕೋಟಿಯ ಕ್ರಿಯಾಯೋಜನೆ ಹಾಗೂ 15ನೇ ಹಣಕಾಸು ಆಯೋಗದ ಅನುದಾನದಡಿಯ ₹ 3.25 ಕೋಟಿಯ ಕ್ರಿಯಾಯೋಜನೆಗೆ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

ಜಲ್ಲಿ ಕಲ್ಲು ರಸ್ತೆ ನಿರ್ಮಾಣಕ್ಕೆ ಹೆಚ್ಚು ಅನುದಾನ ಮೀಸಲಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾಧಿಕಾರಿ, ರಸ್ತೆ ಡಾಂಬರೀಕರಣಕ್ಕೂ ಹೆಚ್ಚಿನ ಅನುದಾನ ನೀಡುವಂತೆ ಸೂಚಿಸಿದರು.

*

ಅಂಕಿ–ಸಂಖ್ಯೆ

₹ 354.65 ಕೋಟಿ

ಜಿಲ್ಲಾ ಪಂಚಾಯಿತಿಗೆ ನಿಗದಿಯಾದ ಅನುದಾನ

₹ 716.87 ಕೋಟಿ

ತಾಲ್ಲೂಕು ಪಂಚಾಯಿತಿಗೆ ನಿಗದಿಯಾದ ಅನುದಾನ

₹ 35 ಲಕ್ಷ

ಗ್ರಾಮ ಪಂಚಾಯಿತಿಗೆ ನಿಗದಿಯಾದ ಅನುದಾನ

*

ವಲಯವಾರು ಹಂಚಿಕೆಯಾದ ಅನುದಾನ

ವಲಯ– ಅನುದಾನ (₹ಗಳಲ್ಲಿ)

ವೇತನ – 214.52 ಕೋಟಿ

ಸಾಮಾನ್ಯ ವೆಚ್ಚ – 98.05 ಕೋಟಿ

ಫಲಾನುಭವಿಗಳಿಗೆ – 31.22 ಕೋಟಿ

ಕಾಮಗಾರಿಗಳಿಗೆ – 7.53 ಕೋಟಿ

ಖರೀದಿ – 3.15 ಕೋಟಿ

ಕಾರ್ಯಕ್ರಮಗಳಿಗೆ – 16.49 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT