ಶುಕ್ರವಾರ, ಅಕ್ಟೋಬರ್ 23, 2020
26 °C
ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್‌ಪಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಡಿ ಭಾಗಿ

ದಾವಣಗೆರೆ: ಮೂರು ಜೋಡಿ ಹಸಮಣೆಗೆ, ಜಿಲ್ಲಾಡಳಿತದ ಪೌರೋಹಿತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದ, ರಂಗೋಲಿಗಳ ಚಿತ್ತಾರ ಮೂಡಿಸಲಾಗಿದ್ದ ಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಪುರೋಹಿತರಿಲ್ಲದೇ ಜಿಲ್ಲಾಡಳಿತದ ಪೌರೋಹಿತ್ಯದಲ್ಲೇ ಇಮೂರು ಜೋಡಿಗಳು ಬುಧವಾರ ದಾಂಪತ್ಯ ಜೀವಕ್ಕೆ ಕಾಲಿರಿಸಿದವು.

ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಮೂವರು ಹೆಣ್ಣುಮಕ್ಕಳಿಗೆ ಹೆತ್ತವರ ಸ್ಥಾನದಲ್ಲಿ ನಿಂತು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಮೈಸೂರು ಪೇಟ ಧರಿಸಿ ಧಾರೆ ಎರೆದರು. ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ಸಾಥ್‌ ನೀಡಿದರು.

ಮಂಜುಳಾ ಅವರನ್ನು ಶಿವಮೊಗ್ಗ ತಾಲ್ಲೂಕು ಹೊಸನಗರ ಹೆದ್ಲಿ ಹನಿಯಾದ ಪ್ರಭಾವತಿ–ಗಣಪತಿರಾವ್ ದಂಪತಿಯ ಪುತ್ರ ಎಚ್.ಬಿ ಉಮೇಶ್ ವರಿಸಿದರು. ಕುಪ್ಪಮ್ಮ (ಶುಭಾಂಗಿ) ಅವರನ್ನು ಶಿರ್ಸಿ ತಾಲ್ಲೂಕು ದೇವಗುಡಿ ಶಾಲಿನಿ–ರಾಮಚಂದ್ರ ಮಂಜುನಾಥ ಭಟ್ಟರ ಮಗ ದಯಾನಂದ ರಾಮಚಂದ್ರ ಭಟ್ಟ ಕೈ ಹಿಡಿದರು. ರೇಷ್ಮಾ ಅವರನ್ನು ಶಿರ್ಸಿ ತಾಲ್ಲೂಕು ಹಳವಳ್ಳಿ ಮುಂಡಗನಮನೆ ನೇತ್ರಾವತಿ–ಸುಬ್ರಾಯ ಹೆಗಡೆ ಅವರ ಪುತ್ರ ನಾಗರಾಜ ಸುಬ್ರಾಯ ಹೆಗಡೆ ಬಾಳ ಸಂಗಾತಿಯನ್ನಾಗಿಸಿಕೊಂಡರು.

ಮೂರು ಮಂದಿ ಮದುಮಕ್ಕಳೂ ಪುರೋಹಿತ ಮತ್ತು ಕೃಷಿಕರು ಆಗಿದ್ದಾರೆ. ‘ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಹೆಣ್ಣುಮಕ್ಕಳ ಪ್ರಮಾಣ ಕಡಿಮೆ. ಹಾಗಾಗಿ ಪುರೋಹಿತರಿಗೆ, ಕೃಷಿಕರಿಗೆ ಹೆಣ್ಣು ಸಿಗುವುದು ಕಷ್ಟ. ಮಹಿಳಾ ನಿಲಯದ ಯುವತಿಯರನ್ನು ಕೈ ಹಿಡಿಯುವುದರಿಮದ ಅನಾಥ ಹೆಣ್ಣುಮಕ್ಕಳಿಗೆ ಬದುಕು ನೀಡಿದಂತಾಗುತ್ತದೆ. ಜತೆಗೆ ನಾವೂ ಬದುಕು ಕಟ್ಟಿಕೊಂಡಂತಾಗುತ್ತದೆ. ಊರಿಗೆ ಹೋದ ಬಳಿಕ ಸಾಂಪ್ರದಾಯಿಕವಾಗಿ ವಿವಾಹ ಆಗಲಿದ್ದೇವೆ’ ಎಂದು ವರರು ತಿಳಿಸಿದರು.

ವರರ ಪಾಲಕರು, ಸ್ನೇಹಿತರು, ಬಂಧುಮಿತ್ರರು, ಅಧಿಕಾರಿ ಸಿಬ್ಬಂದಿಗೆ ಸಂತಸ ಮೂಡಿಸಿತ್ತು. ನಿಲಯದ ಎಲ್ಲ ಸಂಗಾತಿಗಳು ಭಾವುಕರಾದರು. ಎಲ್ಲರಿಗೂ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ್‌, ಸದಸ್ಯೆ ಮಂಜುಳಾ ಟಿ.ವಿ. ರಾಜು, ಮಹಿಳಾ ನಿಲಯದ ಅಧೀಕ್ಷಕಿ ಸುಜಾತಾ, ಬಸವರಾಜಯ್ಯ, ಜ್ಯೋತಿ, ಶೃತಿ ಎಚ್‌.ಎನ್‌. ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು