ಹೆರಿಗೆ ನಂತರ 3 ತಿಂಗಳವರೆಗೂ ‘ಮಾತೃಪೂರ್ಣ’

7
‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ವಿಜಯ್‌ಕುಮಾರ್‌

ಹೆರಿಗೆ ನಂತರ 3 ತಿಂಗಳವರೆಗೂ ‘ಮಾತೃಪೂರ್ಣ’

Published:
Updated:
Deccan Herald

ದಾವಣಗೆರೆ: ಹೆರಿಗೆ ನಂತರ ಮೂರು ತಿಂಗಳವರೆಗೂ ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕ ಆಹಾರವನ್ನು ಬಾಣಂತಿಯರ ಮನೆಗೇ ಪೂರೈಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಕೆ.ಎಚ್‌. ವಿಜಯ್‌ಕುಮಾರ್‌ ಹೇಳಿದರು.

‘ಪ್ರಜಾವಾಣಿ’ ಫೋನ್‌–ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಈ ಮೊದಲು ಹೆರಿಗೆ ನಂತರದ 60 ದಿನಗಳವರೆಗೆ ಮಾತ್ರ ಆಹಾರ ನೀಡಲಾಗುತ್ತಿತ್ತು. ಇನ್ನು ಮುಂದೆ 90 ದಿನಗಳವರೆಗೂ ಆಹಾರ ಪೂರೈಕೆ ಮಾಡಲಾಗುತ್ತದೆ’ ಎಂದರು.

ಬಾಣಂತಿಯರು ಮೂರು ತಿಂಗಳವರೆಗೂ ಮನೆಬಿಟ್ಟು ಹೊರಗೆ ಹೋಗಬಾರದು ಎಂಬ ನಂಬಿಕೆ ಈಗಲೂ ಇದೆ. ಹೀಗಾಗಿ, ಅಂಗನವಾಡಿಗೆ ಬಂದು ಪೌಷ್ಟಿಕ ಆಹಾರ ಸೇವಿಸಲು ಹಿಂಜರಿಯುತ್ತಾರೆ. ಅಂಗನವಾಡಿಗೆ ಬರಲು ಅವರಲ್ಲಿ ಮುಜುಗರವೂ ಇರುತ್ತದೆ. ಹೀಗಾಗಿ, ಮೂರು ತಿಂಗಳವರೆಗೆ ಹಾಲು, ಮೊಟ್ಟೆ, ಶೇಂಗಾ ಚಿಕ್ಕಿ ಜತೆಗೆ ತರಕಾರಿಗಳನ್ನು ಒಳಗೊಂಡ ಪೌಷ್ಟಿಕ ಆಹಾರವನ್ನು ಅವರ ಮನೆಯಲ್ಲೇ ಉಣಬಡಿಸಲಾಗುವುದು ಎಂದು ತಿಳಿಸಿದರು.

ಗರ್ಭಿಣಿ, ಬಾಣಂತಿಯರ ಆರೋಗ್ಯ ಹಾಗೂ ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಮಾತೃವಂದನ, ರಾಜ್ಯ ಸರ್ಕಾರ ಮಾತೃಶ್ರೀ ಯೋಜನೆಗಳನ್ನು ಜಾರಿಗೆ ತಂದಿವೆ. ಈ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುವುದು ಎಂದರು.

ಬಾಲ್ಯವಿವಾಹ ತಡೆಗೆ ಕಾರ್ಯಾಗಾರ

ಜಿಲ್ಲೆಯಲ್ಲಿ ಶೇ 25ರಷ್ಟು ಬಾಲ್ಯವಿವಾಹ ನಡೆಯುತ್ತಿವೆ. ಇದನ್ನು ತಡೆಯುವುದಕ್ಕಾಗಿ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ಹಾಸ್ಟೆಲ್‌ ವಾರ್ಡನ್‌ಗಳಿಗೆ ಅರಿವು ಮೂಡಿಸುವುದಕ್ಕಾಗಿ ಶೀಘ್ರದಲ್ಲೇ ಕಾರ್ಯಾಗಾರ ನಡೆಸಲಾಗುವುದು ಎಂದು ಕೆ.ಎಚ್‌. ವಿಜಯ್‌ಕುಮಾರ್‌ ತಿಳಿಸಿದರು.

ಪುರೋಹಿತರು, ಕಲ್ಯಾಣ ಮಂಟಪದ ಆಡಳಿತ ಮಂಡಳಿ, ಪ್ರಿಂಟಿಂಗ್‌ ಪ್ರೆಸ್‌, ಅಡುಗೆ ಭಟ್ಟರು, ಶಾಮಿಯಾನ ಮಾಲೀಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ–2017ರ ಬಗ್ಗೆ ಅರಿವು ಮೂಡಿಸಲಾಗಿದೆ. ಬಾಲ್ಯವಿವಾಹಕ್ಕೆ ಪೂರಕವಾಗಿ ಕೆಲಸ ಮಾಡಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ ಎಂದರು.

* * *

ನಾಗರಿಕರ ಪ್ರಶ್ನೆಗಳಿಗೆ ಅಧಿಕಾರಿಗಳ ಉತ್ತರ

* ಮಾತೃವಂದನ, ಮಾತೃಶ್ರೀ ಯೋಜನೆಯ ಸೌಲಭ್ಯ ಪಡೆಯುವುದು ಹೇಗೆ?

–ಸಿದ್ದೇಶ್‌ ದಾವಣಗೆರೆ, ಕುಬೇರಪ್ಪ ಹರಿಹರ, ರಾಜು ಲಕ್ಕಂಪುರ ಹರಿಹರ

ಖಾಸಗಿ ಮತ್ತು ಸರ್ಕಾರಿ ನೌಕರರಲ್ಲದವರು ಮಾತೃವಂದನ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮಾತೃಶ್ರೀ ಸೌಲಭ್ಯ ಪಡೆಯಲು ಬಿಪಿಎಲ್‌ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಅವಕಾಶ. ತಾಯಿಕಾರ್ಡ್‌, ಆಧಾರ್‌ಕಾರ್ಡ್‌, ಬ್ಯಾಂಕ್‌ ಖಾತೆಯ ವಿವರದೊಂದಿಗೆ ಸಿಡಿಪಿಒ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಗರ್ಭಿಣಿಯಾದ 150 ದಿನಗಳಲ್ಲಿ ಹೆಸರು ನೋಂದಾಯಿಸಬೇಕು. 7, 8 ಮತ್ತು 9ನೇ ತಿಂಗಳ ಗರ್ಭಾವಸ್ಥೆಯಲ್ಲಿ ಪ್ರತಿ ತಿಂಗಳು ₹ 1 ಸಾವಿರದಂತೆ ಒಟ್ಟು ₹ 3 ಸಾವಿರ, ಹೆರಿಗೆ ನಂತರ ಮೂರು ತಿಂಗಳು ₹ 3 ಸಾವಿರ ಹಣ ಸಿಗಲಿದೆ.

* 3 ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಬಂದಿಲ್ಲ. ಸಿಬ್ಬಂದಿಗೆ ಸಂಬಳ ಯಾವಾಗ ಕೊಡುತ್ತೀರಿ?

–ಆಂಜನೇಯ, ಜಗಳೂರು

ಸರ್ಕಾರದಿಂದ ಅನುದಾನ ಈಗ ಬಂದಿದೆ. ಖಜಾನೆ ಇಲಾಖೆಗೆ ಕಡತ ಕಳುಹಿಸಲಾಗಿದೆ. ಶೀಘ್ರದಲ್ಲಿ ವೇತನ ಬಿಡುಗಡೆ ಮಾಡಲಾಗುವುದು.

* ಮಾತೃವಂದನ ಯೋಜನೆಯಡಿ ನೋಂದಣಿ ಮಾಡಿಸಿದರೂ ಹಣ ಇನ್ನೂ ಬಂದಿಲ್ಲ.

– ಸಂತೋಷ್‌ ಹೊನ್ನಾಳಿ

* ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆ ಜೋಡಣೆ ಆಗದೇ ಇದ್ದರೂ ಕೆಲ ಬಾರಿ ಹಣ ಜಮಾ ಆಗುವುದಿಲ್ಲ. ಅರ್ಜಿಯೊಂದಿಗೆ ಸಲ್ಲಿಸಿರುವ ಬ್ಯಾಂಕ್‌ ಖಾತೆ ವಿವರ, ಆಧಾರ್‌ ಸಂಖ್ಯೆ ಸರಿಯಾಗಿದೆಯೇ ಪರಿಶೀಲಿಸಿಕೊಳ್ಳಿ.

* ಭಾಗ್ಯಲಕ್ಷ್ಮಿ ಬಾಂಡ್‌ ಇನ್ನೂ ಬಂದಿಲ್ಲ. ಯಾವಾಗ ವಿತರಿಸುತ್ತೀರಿ?

–ಸುರೇಶ್‌ ದಾವಣಗೆರೆ, ಸನಾವುಲ್ಲಾ ನ್ಯಾಮತಿ

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಜೀವನ್‌ ಬಿಮಾ ಯೋಜನೆಯಡಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಸಂಯೋಜಿಸಲಾಗುತ್ತಿದೆ. ಇದರಿಂದಾಗಿ ಬಾಂಡ್‌ ವಿತರಣೆ ತಡವಾಗಿದೆ. ಜಿಲ್ಲೆಯಲ್ಲಿ 10,158 ಫಲಾನುಭವಿಗಳಿಗೆ ಬಾಂಡ್‌ ಕೊಡುವುದು ಬಾಕಿ ಇದೆ. ಈಗಾಗಲೇ ನೋಂದಣಿ ಆಗಿರುವುದರಿಂದ ಸೌಲಭ್ಯ ಪಡೆಯಲು ತೊಂದರೆಯಾಗುವುದಿಲ್ಲ. ಜೀವನ್‌ ಬಿಮಾ ಯೋಜನೆಯಲ್ಲಿ ಪೋಷಕರು ಅಪಘಾತದಲ್ಲಿ ಮರಣ ಹೊಂದಿದರೆ ₹ 4 ಲಕ್ಷ, ಸಹಜವಾಗಿ ಸಾವನ್ನಪ್ಪಿದರೆ ₹ 2 ಲಕ್ಷ ಮಗುವಿಗೆ ಸಿಗಲಿದೆ.

ಈ ಮೊದಲು ಮಗು ಜನಿಸಿದ ಒಂದು ವರ್ಷದೊಳಗೆ ನೋಂದಣಿ ಮಾಡಿಸಲು ಅವಕಾಶವಿತ್ತು. ಈಗ ಈ ಅವಧಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಗಿದೆ. ಕಾಲಮಿತಿಯೊಳಗೆ ಹೆಸರು ನೋಂದಣಿ ಮಾಡಿಸಿದ ಎಲ್ಲಾ ಅರ್ಹರಿಗೂ ಬಾಂಡ್‌ ಸಿಗಲಿದೆ.

* 2008–09ನೇ ಸಾಲಿನ ಭಾಗ್ಯಲಕ್ಷ್ಮಿ ಬಾಂಡ್‌ ಇನ್ನೂ ವಿತರಣೆಯಾಗಿಲ್ಲ ಏಕೆ?

–ಸುರೇಶ್‌, ದಾವಣಗೆರೆ

ತಾಂತ್ರಿಕ ದೋಷದಿಂದಾಗಿ 2008–09ನೇ ಸಾಲಿನಲ್ಲಿ ರಾಜ್ಯದಾದ್ಯಂತ 45 ಸಾವಿರ ಭಾಗ್ಯಲಕ್ಷ್ಮಿ ಬಾಂಡ್‌ಗಳ ವಿತರಣೆ ಆಗಿಲ್ಲ. ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆದಿದೆ. ಇದು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ.

* ಭಾಗ್ಯಲಕ್ಷ್ಮಿ ಯೋಜನೆಯಡಿ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹರಿಸಿ.

–ನಾಗರಾಜ್‌ ಹರಲೀಪುರ, ಚನ್ನಗಿರಿ

ತೀವ್ರತರ ಕಾಯಿಲೆಗಳಿಗೆ ಮಾತ್ರ ಭಾಗ್ಯಲಕ್ಷ್ಮಿ ಯೋಜನೆಯಡಿ ಚಿಕಿತ್ಸೆ ಸಿಗಲಿದೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ಕೊಡಿಸಲು ಈ ಯೋಜನೆಯಲ್ಲಿ ಅವಕಾಶವಿಲ್ಲ.

* ಸಮಯಕ್ಕೆ ಸರಿಯಾಗಿ ಅಂಗನವಾಡಿ ತೆಗೆಯಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿಲ್ಲ.

– ನಾಗರಾಜ್ ಹುಳೆ ಓಬಳಾಪುರ, ಹರಪನಹಳ್ಳಿ

ಅಂಗನವಾಡಿಯಲ್ಲಿ ಕಾರ್ಯಕರ್ತೆ ಹುದ್ದೆ ಖಾಲಿಯಿದೆ. ಬೇರೆ ಊರಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದು ಸಮಸ್ಯೆಗೆ ಕಾರಣ. ಅವರಿಗೆ ಸರಿಯಾಗಿ ಕೆಲಸ ಮಾಡುವಂತೆ ಸೂಚಿಸಲಾಗುವುದು. ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು, ಕೆಲಸ ಬೇಗ ಪೂರ್ಣಗೊಳಿಸುವಂತೆ ಗ್ರಾಮ ಪಂಚಾಯಿತಿಗೆ ಪತ್ರ ಬರೆಯಲಾಗುವುದು.

* ಚನ್ನಗಿರಿ ತಾಲ್ಲೂಕು ನವಿಲೇಹಾಳ್‌ನ ಅಂಗನವಾಡಿ ಕೇಂದ್ರ ಶಿಥಿಲವಾಗಿದೆ. ಹೈಟೆಕ್‌ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿ.

–ದಾದಾಪೀರ್‌, ನವಿಲೇಹಾಳ್‌

ಅಂಗನವಾಡಿ ಕಟ್ಟಡ ಕಟ್ಟಲು ಉದ್ಯೋಗ ಖಾತ್ರಿಯಡಿ ಗ್ರಾಮ ಪಂಚಾಯಿತಿಗೆ ₹ 5 ಲಕ್ಷ ಅನುದಾನ ನೀಡಲು ಅವಕಾಶವಿದೆ. ನಾಗರಿಕರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ, ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಿ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ₹ 3 ಲಕ್ಷ ಹಣ ಕೊಟ್ಟು, ಕಟ್ಟಡ ನಿರ್ಮಿಸಲಾಗುವುದು.

* ಅಂಗನವಾಡಿ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆ ಮನೆಗೆ ಊಟ ತೆಗೆದುಕೊಂಡು ಹೋಗುತ್ತಾರೆ.

–ಮಾರುತಿ, ಬಸವಾಪಟ್ಟಣ

ಬಸವಾಪಟ್ಟಣ ಅಂಗನವಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಮಾತೃಪೂರ್ಣ ಯೋಜನೆಯನ್ನು ಸರಿಯಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗುವುದು. ಕಾರ್ಯಕರ್ತೆ ತಪ್ಪೆಸಗಿರುವುದು ಕಂಡುಬಂದರೆ ಶಿಸ್ತುಕ್ರಮ ಜರುಗಿಸಲಾಗುವುದು.

* ವಿಧವೆಯರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳೇನು?

–ರೇಣುಕಮ್ಮ, ಪದ್ಮಾ ನಿಟುವಳ್ಳಿ, ಜಯನಗರ ‘ಬಿ’ ಬ್ಲಾಕ್‌

ಉದ್ಯೋಗಿನಿ ಯೋಜನೆಯಡಿ ವ್ಯಾಪಾರ ನಡೆಸಲು ₹ 3 ಲಕ್ಷ ಬ್ಯಾಂಕ್‌ ಸಾಲ ಪಡೆಯಬಹುದು. ಪರಿಶಿಷ್ಟ ಸಮುದಾಯದವರಿಗೆ ₹ 1.5 ಲಕ್ಷ ಹಾಗೂ ಸಾಮಾನ್ಯ ವರ್ಗದವರಿಗೆ ₹ 90 ಸಾವಿರ ಸಹಾಯಧನ ಸೌಲಭ್ಯವಿದೆ. ವಿಧವಾ ಕೋಶ ಎಂಬ ಕೇಂದ್ರ ತೆರೆಯಲಾಗಿದೆ. ಕುಟುಂಬದಿಂದ ವಿಧವೆಯರಿಗೆ ತೊಂದರೆಯಾಗಿದ್ದರೆ ವಿಧವಾ ಕೋಶವನ್ನು ಸಂಪರ್ಕಿಸಿ ಕಾನೂನು ನೆರವು ಪಡೆಯಬಹುದು.

* ಶಾಲಾ ಆವರಣಕ್ಕೆ ಅಂಗನವಾಡಿ ಸ್ಥಳಾಂತರಿಸಿ.

–ಕುಮಾರಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ,

ನ್ಯಾಮತಿ ಶಿವಾನಂದಪ್ಪ ಬಡಾವಣೆ ಶಾಲೆ

ಶಾಲೆ ಆವರಣದಲ್ಲೇ ಅಂಗನವಾಡಿ ಕೇಂದ್ರ ಇದ್ದರೆ ಅನುಕೂಲ. ಆದರೆ, ಸ್ಥಳಾಂತರದಿಂದ ನಾಗರಿಕರಿಗೆ ತೊಂದರೆ ಆಗುವುದೇ ಎಂಬುದನ್ನೂ ಪರಿಶೀಲಿಸಬೇಕಿದೆ. ಹೊನ್ನಾಳಿ ಸಿಡಿಪಿಒ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.

* ದಾವಣಗೆರೆಯ ಮೂರನೇ ವಾರ್ಡ್‌ನ ಝಂಡಾಕಟ್ಟೆ ಬಳಿಯ ಅಂಗನವಾಡಿ ಕಾರ್ಯಕರ್ತೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಹಣ ಕೇಳುತ್ತಾರೆ.

–ಇಮ್ತಿಯಾಜ್‌, ಶಿವನಗರ, ದಾವಣಗೆರೆ

ಸಿಡಿಪಿಒ ಮೂಲಕ ತನಿಖೆ ನಡೆಸಿ ವರದಿ ಪಡೆಯಲಾಗುವುದು. ಕಾರ್ಯಕರ್ತೆ ತಪ್ಪೆಸಗಿದ್ದರೆ ಕ್ರಮ ಕೈಗೊಳ್ಳಲಾಗುವುದು.

* ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ.

–ಬಸವರಾಜ್‌, ಉಚ್ಚಂಗಿದುರ್ಗ

ಇಲಾಖೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸ್ವಚ್ಛತೆಯ ತಪಾಸಣೆ ನಡೆಸುತ್ತಾರೆ. ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ.

* * *

ವರದಿ ಸಲ್ಲಿಸಲು ಸಿಡಿಪಿಒಗೆ ಸೂಚನೆ

ಹೊನ್ನಾಳಿ ತಾಲ್ಲೂಕಿನ ಗಡೇಕಟ್ಟೆ ಗ್ರಾಮದ ಲಲಿತಮ್ಮ ಕರೆಮಾಡಿ, ‘ಅಂಗನವಾಡಿ ಕಟ್ಟಡಕ್ಕೆ ತಳಪಾಯ ಹಾಕಿ ಎರಡು ವರ್ಷ ಕಳೆದಿವೆ. ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ. ಈ ಸಮಸ್ಯೆ ಪರಿಹರಿಸಲಾಗುವುದು ಎಂದು ವಿಜಯ್‌ಕುಮಾರ್‌ ಭರವಸೆ ನೀಡಿದರು.

ತಕ್ಷಣ ಹೊನ್ನಾಳಿ ಸಿಡಿಪಿಒ ಶಿವಲಿಂಗಪ್ಪ ಅವರಿಗೆ ಕರೆ ಮಾಡಿದ ವಿಜಯ್‌ಕುಮಾರ್‌, ‘ಗಡೇಕಟ್ಟೆಗೆ ಭೇಟಿ ನೀಡಿ, ಅಂಗನವಾಡಿ ಕಟ್ಟಡದ ಕಾಮಗಾರಿ ವಿಳಂಬ ಆಗಿರುವುದು ಏಕೆ ಎಂದು ವರದಿ ನೀಡಿ. ಬೇಗನೇ ಕಟ್ಟಡ ಕಟ್ಟಲು ಕ್ರಮ ಕೈಗೊಳ್ಳಿ’ ಎಂದು ಸೂಚನೆ ನೀಡಿದರು.

* * *

ಹಣ ಕೇಳಿದರೆ ಕರೆ ಮಾಡಿ

ಮಾತೃಪೂರ್ಣ ಯೋಜನೆಯಡಿ ಫಲಾನುಭವಿಗಳಿಗೆ ಹಾಲು, ಮೊಟ್ಟೆಯನ್ನು ಸರಿಯಾಗಿ ನೀಡದಿದ್ದರೆ, ಕಾರ್ಯಕರ್ತೆಯರು ಅಂಗನವಾಡಿಗೆ ಸರಿಯಾಗಿ ಬಾರದೇ ಇದ್ದರೆ, ಭಾಗ್ಯಲಕ್ಷ್ಮಿ ಬಾಂಡ್‌ ನೀಡಲು ಸಿಡಿಪಿಒ ಅಥವಾ ಇಲಾಖೆಯ ಸಿಬ್ಬಂದಿ ಹಣ ಕೇಳಿದರೆ ಕಚೇರಿ ಸಮಯದಲ್ಲಿ ನೇರವಾಗಿ ತಮಗೆ ಕರೆ ಮಾಡಬಹುದು. ತಕ್ಷಣವೇ ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಎಚ್‌. ವಿಜಯಕುಮಾರ್‌ ತಿಳಿಸಿದರು.

ದೂರವಾಣಿ: 08192– 264056, ಮೊಬೈಲ್‌: 95389 93366.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !