ಮಂಗಳವಾರ, ಮೇ 17, 2022
25 °C

ರಾಜ್ಯ ವಿಕೇಂದ್ರೀಕರಣ ಯೋಜನೆ ಸಭೆಯಲ್ಲಿ ಮೇಯರ್‌ ಭಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಶನಿವಾರ ನಡೆದ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ಭಾಗಿಯಾದರು.

ಸಂವಿಧಾನದ 74ನೇ ತಿದ್ದುಪಡಿ ಆಶಯಗಳಿಗೆ ಅನುಗುಣವಾಗಿ ನಗರ ಸ್ಥಳೀಯ ಸಂಸ್ಥೆಗಳು ತಳಮಟ್ಟದಿಂದ ಯೋಜನೆಗಳನ್ನು ರೂಪಿಸಲು ವಾರ್ಡ್‌ ಮಟ್ಟದಲ್ಲಿ ಸಭೆ ಸೇರಿ ದೂರದೃಷ್ಟಿ ಹಾಗೂ ವಾರ್ಷಿಕ ಯೋಜನೆಗಳನ್ನು  ತಯಾರಿಸಿ ಅನುಷ್ಠಾಗೊಳಿಸಲು ಆದೇಶ ಕೋರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಳ ಮಟ್ಟದಿಂದ ನಗರದ ಅಭಿವೃದ್ಧಿಗೆ ಸಮಿತಿಗಳನ್ನು ರಚಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾಡುವುದು ಒಳ್ಳೆಯ ವಿಷಯ. ಆದರೆ ಸದಸ್ಯರು ಈ ವಿಷಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಉದಾಹರಣೆಗೆ ಆರ್‌ಟಿಐ ಇದೆ. ಇದರ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ಯೋಚಿಸಬೇಕು. ಸಂವಿಧಾನದ 74ನೇ ತಿದ್ದುಪಡಿಯನ್ನು ಮೇಲ್ಮಟ್ಟದಲ್ಲಿ ಚರ್ಚಿಸಿ ರದ್ದು ಮಾಡಿದರೆ ಒಳ್ಳೆಯದು ಎಂದು ಅಜಯ್‌ಕುಮಾರ್‌ ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್‌ ಅವರನ್ನು ತಾಲ್ಲೂಕು ನಗರ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯರನ್ನಾಗಿಸಲು ಅವಕಾಶ ಕಲ್ಪಿಸಲು ಆದೇಶ ಕೋರುವ ಬಗ್ಗೆ ಚರ್ಚಿಸಲಾಯಿತು.

ರೈತರಿಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಲು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಸೂಚನೆಗಳನ್ನು ನೀಡಿದೆ. ನಾವು ನಗರ ಯೋಜನೆಗೆ ಮತ್ತು ಸಮಗ್ರ ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ಮಾಡುವುದರಿಂದ ಅವರು ಕಚೇರಿಗೆ ಸಮಯ ನೀಡಲು ಆಗುವುದಿಲ್ಲ. ಈಗಾಗಲೇ ಕೆಲಸದ ಒತ್ತಡದಿಂದಾಗಿ ರೈತರಿಗೆ ಸಮಯ ನೀಡಲು ಆಗುತ್ತಿಲ್ಲ. ತಹಶೀಲ್ದಾರರ ನ್ಯಾಯಾಲಯ ಕೂಡ ಇದ್ದು, ಸಮಯದ ಕೊರತೆ ಇದೆ. ಆದ್ದರಿಂದ ನಗರ ಯೋಜನೆಗೆ ಮತ್ತು ಸಮಗ್ರ ಅಭಿವೃದ್ಧಿ ಸಮಿತಿಗೆ ತಹಶೀಲ್ದಾರ್‌ರನ್ನು ಸದಸ್ಯರನ್ನಾಗಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಮೇಯರ್‌ ಸಲಹೆ ನೀಡಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ, ಪಶಸಂಗೋಪನೆ ಸಚಿವ ಪ್ರಭು ಚೌಹಾಣ್‌, ವಿಕೇಂದ್ರೀಕರಣ ಸಮಿತಿ ಅಧ್ಯಕ್ಷ ಪ್ರಮೋದ್‌ ಹೆಗಡೆ, ಯೋಜನೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು