‘ಅಮೃತ ಗ್ರಾಮ’ ಕುರ್ಕಿ ಸೇರಿಸಲು ಕ್ರಮ: ಸಚಿವ ಕೆ.ಎಸ್. ಈಶ್ವರಪ್ಪ ಭರವಸೆ

ದಾವಣಗೆರೆ: ಅಮೃತ ಗ್ರಾಮ ಯೋಜನೆಗೆ ಸೇರ್ಪಡೆಯಾಗದಿರುವ ಕುರ್ಕಿ ಗ್ರಾಮವನ್ನು ಈ ಯೋಜನೆಡಿ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಾಯಕೊಂಡ ವಿಧಾನಸಭಾ ವ್ಯಾಪ್ತಿಯ ಹಿರೇತೊಗಲೇರಿ ಗ್ರಾಮದಲ್ಲಿ ಸ್ವಚ್ಛ ಸಂಕೀರ್ಣ ಹಾಗೂ ಕುರ್ಕಿ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಇಲ್ಲಿನ ಗ್ರಾಮಸ್ಥರಿಗೆ ಸ್ವಚ್ಛತೆಯ ಬಗೆಗೆ ಬಹಳ ಅರಿವಿದೆ. ಉತ್ತಮವಾಗಿ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಿಕೊಂಡಿದ್ದಾರೆ. ಕುರ್ಕಿ ಗ್ರಾಮದಲ್ಲಿ ನಿರ್ಮಿಸಿರುವ ಗ್ರಂಥಾಲಯ ಗ್ರಾಮಸ್ಥರ ವಿದ್ಯಾಭ್ಯಾಸದ ಕಾಳಜಿಯನ್ನು ತೋರಿಸುತ್ತದೆ ಎಂದು ಶ್ಲಾಘಿಸಿದರು.
ಗ್ರಾಮದ ಮಹಿಳೆಯರು ಸ್ವ ಸಹಾಯ ಸಂಘಗಳಲ್ಲಿ ಸಕ್ರಿಯವಾಗಿದ್ದು ಪ್ರತಿ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಹಾಗೂ ಬಳಸುವ ಮೂಲಕ ಸ್ವಚ್ಛತೆಗೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚು ಗಮನ ಹರಿಸಬೇಕು ಎಂದು ಹೇಳಿದರು.
ಈಗಾಗಲೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಲಜೀವನ್ ಮಿಷನ್ ಅಡಿ ಪ್ರತಿ ಮನೆಗೆ ನಳದ ಮೂಲಕ ನೀರು ಕೊಡಲು ಕಾರ್ಯೋನ್ಮುಖವಾಗಿದೆ. 2024ರ ವೇಳೆಗೆ ಪ್ರತಿ ಮನೆಯೂ ನಲ್ಲಿ ನೀರಿನ ಸಂಪರ್ಕ ಹೊಂದಲಿವೆ.
ಅದರಂತೆ ಗ್ರಾಮ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಆಯ್ಕೆಯಾಗಿದೆ ಎಂದರು.
ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಜಿಲ್ಲೆಯಲ್ಲಿ 356 ಗ್ರಾಮಗಳಲ್ಲಿ ಜಲಜೀವನ್ ಮಿಷನ್‌ನಡಿ ನೀರು ಪೂರೈಕೆ ಆಗುತ್ತಿದೆ. ಉಳಿದ ಗ್ರಾಮಗಳಿಗೂ ಕುಡಿಯುವ ನೀರು ಒದಗಿಸಲಾಗುವುದು’ ಎಂದು ತಿಳಿಸಿದರು.
ಶಾಸಕ ಪ್ರೊ. ಲಿಂಗಣ್ಣ, ‘ಈ ಗ್ರಾಮಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಡಾ. ವಿಜಯ ಮಹಾಂತೇಶ ದಾನಮ್ಮನವರ್, ‘ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯದ ನರೇಗಾ, ಜಲ ಜೀವನ್ ಮಿಷನ್, ಸ್ವಚ್ಛ ಭಾರತ್ ಗ್ರಾಮೀಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದ್ದೇವೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 31 ಲಕ್ಷ ಗುರಿ ಇದ್ದು, ಶೇ 90ರಷ್ಟು ಸಾಧನೆಯಾಗಿದೆ. ಮುಂದಿನ ವರ್ಷದಲ್ಲಿ ಈ ಗುರಿಗಿಂತ ಹೆಚ್ಚಿನ ಸಾಧನೆ ಮಾಡುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಜಲಜೀವನ್ ಮಿಷನ್ ಯೋಜನೆಯಡಿ 2020-21 ರಲ್ಲಿ 356 ಕಾಮಗಾರಿಗಳು ತೆಗೆದುಕೊಂಡಿದ್ದು, 355 ಕಾಮಗಾರಿಗಳಿಗೆ ಆದೇಶ ಕೊಟ್ಟಿದ್ದು ಎಲ್ಲ ಕಾಮಗಾರಿಗಳು ಪ್ರಗತಿಯಲ್ಲಿದೆ. ಇಲ್ಲಿವರೆಗೂ 62 ಕಾಮಗಾರಿಗಳು ಮುಕ್ತಾಯವಾಗಿವೆ. 2021-22 ಸಾಲಿನಲ್ಲಿ 125 ಕಾಮಗಾರಿಗಳು ತೆಗೆದುಕೊಂಡಿದ್ದು, 32 ಕಾಮಗಾರಿಗಳಿಗೆ ಟೆಂಡರ್ ಕರೆದು 7 ಕಾಮಗಾರಿಗೆ ಕೆಲಸ ನಡೆಯುತ್ತಿದೆ. 40 ಡಿಪಿಸ್ ಆಗಬೇಕಿದೆ’ ಎಂದು ಮಾಹಿತಿ ನೀಡಿದರು.
ಸ್ವಚ್ಛ ಭಾರತ ಗ್ರಾಮೀಣ ಯೋಜನೆಯ ಅಂಗವಾಗಿ ಜಿಲ್ಲೆಯ 195 ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ ವಿಲೇವಾರಿ ಘಟಕಕ್ಕೆ 153 ಪಂಚಾಯಿತಿಗಳಲ್ಲಿ ಜಾಗ ಸಿಕ್ಕಿದ್ದು, 67 ಪಂಚಾಯಿತಿಗಳಲ್ಲಿ ಘಟಕ ಪೂರ್ಣಗೊಂಡಿದೆ. 86 ಪಂಚಾಯಿತಿಗಳಲ್ಲಿ ವಿವಿಧ ಹಂತಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು. ಮನೆ ಮನೆಗಳಿಗೆ ಡಸ್ಟ್ ಬಿನ್‌ಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಉಪ ಕಾರ್ಯದರ್ಶಿ ಆನಂದ್, ಗ್ರಾಮದ ಮುಖಂಡರು ಇದ್ದರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.