ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಬಂದಾಗಿನಿಂದಲೂ ಸದಸ್ಯ ಪರಸಣ್ಣ

ಐದು ಬಾರಿ ಸದಸ್ಯರಾಗಿ, ಮೂರು ಬಾರಿ ಅಧ್ಯಕ್ಷರಾಗಿ ಕೆಲಸ
Last Updated 19 ಡಿಸೆಂಬರ್ 2020, 3:34 IST
ಅಕ್ಷರ ಗಾತ್ರ

ದಾವಣಗೆರೆ: 1993ರಲ್ಲಿ ಮಂಡಲ ಪಂಚಾಯಿತಿ ಹೋಗಿ ಗ್ರಾಮ ಪಂಚಾಯಿತಿ ವ್ಯವಸ್ಥೆ ಅಸ್ತಿತ್ವಕ್ಕೆ ಬಂದಾಗಿನಿಂದ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ನಿರಂತರವಾಗಿ ಐದು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ತಾಲ್ಲೂಕಿನ ‘ಮಾಗನಹಳ್ಳಿ ಪರಸಣ್ಣ’ ಅವರು ಇದೀಗ 6ನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

‘ಪರಸಣ್ಣ’ ಎಂದೇ ಪರಿಚಿತರಾಗಿರುವ ಬಿ.ಕೆ. ಪರಶುರಾಮ್‌ ಅವರು 2000ದಿಂದ 2003ರವರೆಗೆ, 2007ರಿಂದ 2010ರವರೆಗೆ ಹಾಗೂ 2015ರಿಂದ 2020ರವರೆಗೆ ಮೂರು ಬಾರಿ ಕಡ್ಲೇಬಾಳ್‌ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

‘1993ರಲ್ಲಿ ನಾನು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ಓದುತ್ತಿದ್ದೆ. ಕಡ್ಲೇಬಾಳ್‌ನಲ್ಲಿ ಸಾರಾಯಿ, ಬ್ರಾಂಡಿ ವಿಪರೀತವಾಗಿತ್ತು. ಅದಕ್ಕೆ ನಾವೆಲ್ಲ ಯುವಕರು ಸೇರಿ ಗ್ರಾಮ ಹಿತರಕ್ಷಣಾ ಸಮಿತಿ ಕಟ್ಟಿಕೊಂಡು ಮದ್ಯಪಾನದ ವಿರುದ್ಧ ಆಂದೋಲನ ನಡೆಸುತ್ತಿದ್ದೆವು. ಅದೇ ಸಮಯದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಚುನಾವಣೆ ಬಂತು. ಆಗ ಎಲ್ಲ ಸ್ಥಾನಗಳಿಗೆ ಗ್ರಾಮ ಹಿತರಕ್ಷಣಾ ಸಮಿತಿಯಿಂದ ಸ್ಪರ್ಧಿಸಲು ನಿರ್ಧರಿಸಲಾಯಿತು. ನಾನು ಮಾಳಗೊಂಡನಹಳ್ಳಿ (ಮಾಗನಹಳ್ಳಿ) ಎರಡನೇ ವಾರ್ಡ್‌ನಿಂದ ಸ್ಪರ್ಧಿಸಿದೆ. ನಮ್ಮ ಸಮಿತಿಯ ಎಲ್ಲರೂ ಗೆಲ್ಲುವ ಮೂಲಕ ದಾಖಲೆ ಬರೆದೆವು. ಬಳಿಕ ಊರಲ್ಲಿದ್ದುಕೊಂಡೇ ಅಂತಿಮ ಬಿ.ಎ. ಮುಗಿಸಿದೆ’ ಎಂದು ಪರಸಣ್ಣ, ಮೊದಲ ಸ್ಪರ್ಧೆಯ ನೆನಪುಗಳನ್ನು ಮೆಲುಕು ಹಾಕಿದರು.

ಕಡ್ಲೇಬಾಳ್‌ ಪಂಚಾಯಿತಿಯಲ್ಲಿ ಅಲ್ಲಿಂದ ಇಲ್ಲಿಯವರೆಗೆ ಪರಸಣ್ಣನ ತಂಡವೇ ಗೆಲ್ಲುತ್ತಾ ಬಂದಿದೆ. ಗ್ರಾಮ ಹಿತರಕ್ಷಣಾ ಸಮಿತಿಯ ರಾಜಣ್ಣ ಮೂರು ಬಾರಿ ಗೆದ್ದಿದ್ದರು. ಒಂದು ಬಾರಿ ಅವರ ಅಣ್ಣ ಹಾಲೇಶಪ್ಪ, ಒಂದು ಬಾರಿ ಅತ್ತಿಗೆ ರೇಣುಕಮ್ಮ ಗೆದ್ದು ಅಧ್ಯಕ್ಷರೂ ಆಗಿದ್ದರು. ಅಂಜಿಬಾಬು ಎರಡು ಬಾರಿ ಸದಸ್ಯರಾಗಿದ್ದರು. ಅವರ ಪತ್ನಿ ಸ್ವರ್ಣಜಾ ಎರಡು ಬಾರಿ ಸದಸ್ಯರಾಗಿದ್ದು, ಈಗ ಮೂರನೇ ಬಾರಿ ಕಣಕ್ಕಿಳಿದಿದ್ದಾರೆ ಎಂದು ಮಾಹಿತಿ ನೀಡಿದರು.

‘ಮೊದಲ ಎರಡು ಬಾರಿ ಮಾತ್ರ ಹಿಂದುಳಿದ ವರ್ಗ ‘ಎ’ಗೆ ಮೀಸಲಾದ ಕ್ಷೇತ್ರದಿಂದ ಸ್ಪರ್ಧಿಸಿದೆ. ಬಳಿಕ ಇಲ್ಲಿಯವರೆಗೆ ಸಾಮಾನ್ಯ ಕ್ಷೇತ್ರದಿಂದಲೇ ಅಂದರೆ ಮಾಳಗೊಂಡನಹಳ್ಳಿ ಒಂದನೇ ವಾರ್ಡ್‌ನಿಂದಲೇ ಸ್ಪರ್ಧಿಸುತ್ತಿದ್ದೇನೆ. ಮೊದಲ ಬಾರಿ ಸ್ಪರ್ಧಿಸುವಾಗ ರಸ್ತೆ, ಚರಂಡಿ ಎಂಬುದೇ ಇರಲಿಲ್ಲ. ಶುದ್ಧ ಕುಡಿಯುವ ನೀರಿನ ಕಲ್ಪನೆ ಇರಲಿಲ್ಲ. ಈಗ ಅವೆಲ್ಲವೂ ಆಗಿವೆ’ ಎಂದು ಪರಸಣ್ಣ ಹೇಳುತ್ತಾರೆ.

ರಾಜಕೀಯ ಇತಿಹಾಸ

ಪರಸಣ್ಣ ಅವರ ತಾತ ರಾಮಜ್ಜ 50 ವರ್ಷಗಳ ಹಿಂದೆ ಗ್ರೂಪ್‌ ಪಂಚಾಯತ್‌ ಇದ್ದ ಕಾಲದಲ್ಲಿ ಚೇರ್ಮನ್‌ ಆಗಿದ್ದರು. ಅವಿಭಜಿತ ಚಿತ್ರದುರ್ಗ ಜಿಲ್ಲೆ ಇರುವಾಗ 1995ರಲ್ಲಿ ತಂದೆ ಕೆಂಚಪ್ಪ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ತಾಯಿ ಆಲಮ್ಮ ಅವರು 2005ರಲ್ಲಿ ಕಡ್ಲೇಬಾಳ್ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದಲ್ಲದೇ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT