ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಲೆ ದಂಪತಿ ಕಾರ್ಯ ಮುಂದುವರಿಸುವುದೇ ಸ್ಮರಣೆ

ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆಯಲ್ಲಿ ಬರಹಗಾರ ಮಂಗಳೂರು ವಿಜಯ
Last Updated 4 ಜನವರಿ 2021, 3:26 IST
ಅಕ್ಷರ ಗಾತ್ರ

ದಾವಣಗೆರೆ: ಫುಲೆ ದಂಪತಿ ಅಕ್ಷರದ ಕ್ರಾಂತಿ ಮಾಡಿದರು. ಅಂಬೇಡ್ಕರ್‌ ಹೋರಾಟ ಮಾಡಿದರು ಎಂದು ಅವರಿಗೆ ಜೈ ಹೇಳಿದರೆ ಅವರಿಗೆ ಗೌರವ ಸಲ್ಲಿಸಿದಂತಾಗುವುದಿಲ್ಲ. ಬದಲಾಗಿ ಅವರು ನಡೆದ ದಾರಿಯಲ್ಲಿ ನಾವು ನಡೆಯಬೇಕು. ಅವರು ಮಾಡಿದ ಕಾರ್ಯವನ್ನು ನಾವು ಮಾಡಬೇಕು. ಮುಂದುವರಿಸಬೇಕು. ಅದುವೇ ಅವರಿಗೆ ಸಲ್ಲಿಸುವ ಗೌರವ ಎಂದು ಬೆಂಗಳೂರಿನ ಚಿಂತಕ, ಬರಹಗಾರ ಮಂಗಳೂರು ವಿಜಯ ಹೇಳಿದರು.

ಎಸ್‌ಎಸ್‌ಎಂ ನಗರದಲ್ಲಿ ಭಾನುವಾರ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ನಡೆದ ಅಕ್ಷರದವ್ವ, ಭಾರತದ ಮೊದಲ ಶಿಕ್ಷಕಿ ಜ್ಯೋತಿ ಬಾಯಿ ಫುಲೆ ಅವರ 189ನೇ ಜನ್ಮ ದಿನಾಚರಣೆಯಲ್ಲಿ ಅವರು ಆನ್‌ಲೈನ್‌ ಮೂಲಕ ಮಾತನಾಡಿದರು.

‘ಸರ್‌ ಸಯ್ಯದ್‌ ಅಹ್ಮದ್‌ ಖಾನ್‌, ಅಬ್ದುಲ್‌ ಕಲಾಂ ಅಜಾದ್‌, ಅಸ್ಫಕ್‌ ಖಾನ್‌, ಫುಲೆ ದಂಪತಿ, ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಓದಿ ತಿಳಿದುಕೊಳ್ಳಬೇಕು. ಬಡವರ ಬಗ್ಗೆ, ದೀನರ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಬೇಕು. ನಮ್ಮ ದುಡಿಮೆಯನ್ನು ನಾವೇ ಮಾಡಬೇಕು. ಸಮಾಜದಲ್ಲಿ ಏನೆಲ್ಲ ಅನ್ಯಾಯ, ತಾರತಮ್ಯ, ಮೋಸ, ವಂಚನೆ ಇದೆ ಎಂಬುದನ್ನು ಅರಿಯಬೇಕು. ನಮ್ಮ ದಾರಿಯನ್ನು ನಾವೇ ಕಂಡುಕೊಳ್ಳಬೇಕು. ನಮ್ಮ ಸಂಕಷ್ಟಗಳನ್ನು ನಾವೇ ಪರಿಹರಿಸಿಕೊಳ್ಳಬೇಕು.ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಹೆಣ್ಣು ಮಕ್ಕಳನ್ನೂ ಓದಿಸಲೇಬೇಕು. ನಿಮ್ಮ ಸಂಪಾದನೆಯನ್ನು ನೀವೇ ಮಾಡಬೇಕು. ವ್ಯವಹಾರಕ್ಕೆ ತಂದೆ, ಗಂಡ, ಮಗನನ್ನು ಆಶ್ರಯಿಸದೇ ನೀವೇ ವ್ಯವಹಾರ ಮಾಡಬೇಕು’ ಎಂದು ತಿಳಿಸಿದರು.

ಮಹಿಳೆಯರಿಗೇ ಶಿಕ್ಷಣ ನೀಡುವ ಕ್ರಮವೇ ಇಲ್ಲದ ಸಮಾಜದಲ್ಲಿ ಸಾವಿತ್ರಿ ಬಾಯಿ ತನ್ನ ಪತಿಯಿಂದಲೇ ಕಲಿತು, ಬೇರೆ ಹೆಣ್ಣು ಮಕ್ಕಳಿಗೆ ಕಲಿಸಲು ಮುಂದಾದರು. ಅದನ್ನು ಆಗಿನ ಸಮಾಜ ಒಪ್ಪಲಿಲ್ಲ.ಪಾಠ ಮಾಡಲು ಶಾಲೆಗೆ ಹೋಗುವಾಗ ಸಾವಿತ್ರಿ ಬಾಯಿ ಮೇಲೆ ಸೆಗಣಿ ಎಸೆಯುತ್ತಿದ್ದರು. ಅದಕ್ಕಾಗಿ ಶಾಲೆಗೆ ಹೋಗುವಾಗ ಮಾಸಲು ಸೀರೆ ಉಟ್ಟುಕೊಂಡು ಹೋಗಿ, ಶಾಲೆಯಲ್ಲಿ ಸೀರೆ ಬೇರೆ ಉಟ್ಟುಕೊಂಡು ಪಾಠ ಮಾಡುತ್ತಿದ್ದರು. ಅಂಥ ಸವಾಲುಗಳನ್ನು ನಾವು ಕೂಡ ಎದುರಿಸಿ ನಿಲ್ಲಬೇಕು ಎಂದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌. ಅರುಣಕುಮಾರ್‌ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಪಾಶ್ಚಾತ್ಯ ದೇಶಗಳಲ್ಲಿ ಕೂಡ ಎಲ್ಲ ಮಹಿಳೆಯರಿಗೆ ಶಿಕ್ಷಣ ಒದಗಿಸಲು ಹಿಂದೆ ಮುಂದೆ ನೋಡುತ್ತಿದ್ದ ಕಾಲದಲ್ಲಿಯೇ ಭಾರತದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಲು ಜ್ಯೋತಿ ಬಾ ಫುಲೆ– ಸಾವಿತ್ರಿ ಬಾಯಿ ಬಾಫುಲೆ ಪ್ರಯತ್ನಿಸಿ ಯಶಸ್ವಿಯಾದರು’ ಎಂದರು.

ಕರ್ನಾಟಕದಲ್ಲಿ ಶರಣರು 12ನೇ ಶತಮಾನದಲ್ಲಿಯೇ ಹೆಣ್ಣು ಮಕ್ಕಳು ಸಮಾನರು ಎಂದು ತಿಳಿದು ಅಕ್ಷರ ಕಲಿಸುವ ಕ್ರಾಂತಿ ಮಾಡಿದ್ದರು. ಹಾಗಾಗಿ ಬಹಳಷ್ಟು ಮಂದಿ ವಚನಕಾರ್ತಿಯರು ಹುಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ನಿರೂಪಿಸಿದರು. ಬಾಲಕೃಷ್ಣ, ಸಬ್ರಿನಾ, ನಾಜೀಮಾ ಮುಂತಾದವರು ಇದ್ದರು. ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ, ಎರಡನೇ ಶಿಕ್ಷಕಿ ಫಾತಿಮಾ ಶೇಖ್‌, ಕವಿ ಅಸ್ಫಕ್‌ ಖಾನ್‌, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರಗಳಿರುವ ಕಾರ್ಡ್‌ ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT