ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ

ವಿವಿಧ ಸಂಘಟನೆಗಳಿಂದ ಮೆರವಣಿಗೆ* ಹಲವರ ಬೆಂಬಲ
Last Updated 27 ಸೆಪ್ಟೆಂಬರ್ 2021, 16:55 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಮಹಾತ್ಮಗಾಂಧಿ ವೃತ್ತ, ಜಯದೇವ ವೃತ್ತ, ಅಶೋಕ ರಸ್ತೆ, ಹದಡಿ ರಸ್ತೆ, ಪ್ರವಾಸಿ ಮಂದಿರ ರಸ್ತೆಗಳ ಬಳಿಯ ಕೆಲ ಅಂಗಡಿಗಳು ಸ್ವಲ್ಪ ಸಮಯ ಮುಚ್ಚಿದ್ದವು. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಶಾಲಾ– ಕಾಲೇಜುಗಳು, ಚಿತ್ರಮಂದಿರಗಳು, ‌ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು ಎಂದಿನಂತೆ ನಡೆದವು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊಗಳು ಸಂಚರಿಸಿದವು.

ಎಪಿಎಂಸಿ ಮಾರುಕಟ್ಟೆ ತೆರೆದಿದ್ದರೂ ಖರೀದಿ ಪ್ರಮಾಣ ಕಡಿಮೆಯಾಗಿತ್ತು. ತರಕಾರಿ ಮಾರುಕಟ್ಟೆಗೆ ಎಂದಿನಂತೆ ರಜೆ ಇತ್ತು. ಕೆ.ಆರ್. ಮಾರುಕಟ್ಟೆಯಲ್ಲಿ ಕೆಲ ಅಂಗಡಿಗಳು ಮುಚ್ಚಿದ್ದವು. ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಸಲೀಸಾಗಿ ನಡೆಯಿತು. ಅಷ್ಟಾಗಿ ಜನ ಬೆಂಬಲ ಸಿಗದೇ ಇದ್ದುದರಿಂದ ಕೇವಲ ಪ್ರತಿಭಟನೆ, ಬಹಿರಂಗ ಸಭೆಗಳಿಗೆ ಬಂದ್ ಸೀಮಿತವಾಯಿತು.

ನಗರದ ಜಯದೇವ ವೃತ್ತದಲ್ಲಿ ಮಧ್ಯಾಹ್ನದವರೆಗೂ ನಡೆದ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು. ಜಯದೇವ ವೃತ್ತದಿಂದ ಅಂಬೇಡ್ಕರ್ ಸರ್ಕಲ್‌ವರೆಗೂ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಬಳಿಕ ಸರ್ಕಾರಿ ಹೈಸ್ಕೂಲ್ ಮೈದಾನದ ಬಳಿಯ ಬಸ್ ನಿಲ್ದಾಣದ ಎದುರು ಬಹಿರಂಗ ಸಭೆ ನಡೆಸಿದರು.

ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ), ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ), ಜಿಲ್ಲಾ ಕಾಂಗ್ರೆಸ್, ಎಐಯುಟಿಸಿ, ಎಐಯುಟಿಯುಸಿ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಶ್ ಶೆಟ್ಟಿ ಬಣ), ಜಿಲ್ಲಾ ಇಂಟಕ್, ಕಾರ್ಮಿಕರ ಘಟಕ, ನೆರಳು ಬೀಡಿ ಕಾರ್ಮಿಕರ ಅಸೋಸಿಯೇಷನ್, ಕರ್ನಾಟಕ ಪ್ರಾಂತ ರೈತ ಸಂಘ, ಡಿಎಸ್-4, ಎಐಡಿಎಸ್‌ಒ, ಎಐಡಿವೈಒ, ಎಐಎಂಎಸ್‌ಎಸ್, ಎಸ್‌ಯುಸಿಐ, ಸಿಐಟಿಯು, ಸಿಪಿಐ, ಸಿಪಿಐ(ಎಂ), ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ಧ್ವನಿ) ವಿವಿಧ ಕಾರ್ಮಿಕ, ಪ್ರಗತಿ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದವು.

ಸಂಯುಕ್ತ ಹೋರಾಟ ಸಮಿತಿಯ ಆವರಗೆರೆ ಎಚ್.ಜಿ. ಉಮೇಶ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಆವರಗೆರೆ ವಾಸು, ಆನಂದರಾಜ್, ಷಣ್ಮುಖ ಸ್ವಾಮಿ, ಬಾನಪ್ಪ, ಐರಣಿ ಚಂದ್ರು, ಅಪರ್ಣಾ, ಮಂಜುನಾಥ್ ಕುಕ್ಕುವಾಡ, ಭಾರತಿ, ನಾಗಜ್ಯೋತಿ, ಜ್ಯೋತಿ, ಪುಷ್ಪಾ, ತಿಪ್ಪೇಸ್ವಾಮಿ, ಟಿ.ವಿ.ಎಸ್. ರಾಜು, ಮಧು ತೊಗಲೇರಿ, ಪರಶುರಾಮ್, ಅರುಣ್, ಕಾವ್ಯ, ಪೂಜಾ, ಗುಮ್ಮನೂರು ಬಸವರಾಜ್, ಕರಿಬಸಪ್ಪ, ಶಿರೀನ್‌ಬಾನು, ಇ. ಶ್ರೀನಿವಾಸ್, ಕೆ. ರವಿ, ಯಲ್ಲೋದಹಳ್ಳಿ ರವಿ, ಚಿನ್ನಸಮುದ್ರ ಶೇಖರನಾಯ್ಕ ಇದ್ದರು.

ಹಲವರು ವಶಕ್ಕೆ

ನಗರದ ಹೊರ ವಲಯದ ಜಿಲ್ಲಾ ಪಂಚಾಯಿತಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆ ನಡೆಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಸೇರಿ 22ಕ್ಕೂ ಹೆಚ್ಚು ರೈತರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡ ಪೊಲೀಸರು ಕೆಲ ಸಮಯದ ಬಳಿಕ ಬಿಡುಗಡೆಗೊಳಿಸಿದರು.

ತಾಲೂಕು ಕಚೇರಿ ಎದುರು ರಸ್ತೆ ತಡೆ, ಹೋರಾಟಕ್ಕೆ ಮುಂದಾದ 12 ಮಂದಿ ಹಾಗೂ ಕೆಎಸ್‌ಆರ್‌ಟಿಸಿ ತಾತ್ಕಾಲಿಕ ಬಸ್ ನಿಲ್ದಾಣದ ಎದುರು ಬಸ್ ಸಂಚಾರ ತಡೆಯಲು ಮುಂದಾದ ಮೂವರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಲಾಯಿತು.

ತರಕಾರಿ ಸುರಿದು ಪ್ರತಿಭಟನೆ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ರೈತರು ಈರುಳ್ಳಿ, ಟೊಮೆಟೊ ಮುಂತಾದ ತರಕಾರಿಗಳನ್ನು ಸುರಿದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

* ಮೂರು ಕೃಷಿ ಕಾಯ್ದೆಗಳು ರೈತರ ಪರವಾಗಿದ್ದರೆ ಪ್ರತಿಭಟನೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ರೈತರ ಬಳಿ ಕೃಷಿಭೂಮಿ ಇರಬಾರದು ಎಂದು ಕೇಂದ್ರ ಸರ್ಕಾರ ತಿಳಿದಂತಿದೆ. ಕೃಷಿ ಕಾಯ್ದೆಗಳು ಎಲ್ಲರ ಜೀವನವನ್ನು ಶಾಶ್ವತವಾಗಿ ಬಂದ್ ಮಾಡಲು ಹೊರಟಿವೆ.

-ತೇಜಸ್ವಿ ಪಟೇಲ್, ಕಬ್ಬು ಬೆಳೆಗಾರರ ಸಂಘದ ರಾಜ್ಯ ಉಪಾಧ್ಯಕ್ಷ

* ಎಪಿಎಂಸಿ ಕಾಯ್ದೆ ಜಾರಿ ಮಾಡಿ ವರ್ಷವಾದರೂ ಇಲ್ಲಿಯವರೆಗೂ ಯಾರೊಬ್ಬರು ಹೊರಗಡೆ ಬಂದು ಕೃಷಿ ಉತ್ಪನ್ನಗಳನ್ನು ಖರೀದಿಸಿಲ್ಲ. ಬೆಲೆ ಕುಸಿತದಿಂದ ಈರುಳ್ಳಿಯನ್ನು ಹೊರಗೆ ಸುರಿಯುತ್ತಿದ್ದರೂ ಖರೀದಿ ಕೇಂದ್ರ ತೆರೆದಿಲ್ಲ.

-ಹುಚ್ಚವ್ವನಹಳ್ಳಿ ಮಂಜುನಾಥ್, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT