ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಗೊಂಡ ಭದ್ರಾ ಕಾಲುವೆಗಳ ಮರು ನಿರ್ಮಾಣಕ್ಕೆ ಶಾಸಕ ಬಸವಂತಪ್ಪ ಆಗ್ರಹ

Published 2 ಮಾರ್ಚ್ 2024, 7:01 IST
Last Updated 2 ಮಾರ್ಚ್ 2024, 7:01 IST
ಅಕ್ಷರ ಗಾತ್ರ

ಮಾಯಕೊಂಡ: ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಶಿಥಿಲಗೊಂಡ ಕಾಲುವೆಗಳು, ಬ್ರಿಡ್ಜ್‌ಗಳನ್ನು ಮರು ನಿರ್ಮಾಣ ಮಾಡಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸರ್ಕಾರವನ್ನು ಒತ್ತಾಯಿಸಿದರು.

ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಕುರಿತು ಧ್ವನಿ ಎತ್ತಿದ ಶಾಸಕ ಕೆ.ಎಸ್.ಬಸವಂತಪ್ಪ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ 10,000 ಹೆಕ್ಟೇರ್ ಪ್ರದೇಶ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ 42,000 ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. ಒಟ್ಟು ನೀರಾವರಿ ಪ್ರದೇಶ ರೈತರ ಜೀವನಾಡಿಯಾಗಿದೆ. 1958ರಲ್ಲಿ ನಿರ್ಮಿಸಿದ ಭದ್ರಾ ಕಾಲುವೆಗಳು, ಬ್ರಿಡ್ಜ್‌ಗಳು ಶಿಥಿಲಗೊಂಡು ಹಾಳಾಗಿವೆ. ಈವರೆಗೂ ಕಾಲುವೆ ಹಾಗೂ ಬ್ರಿಡ್ಜ್‌ಗಳನ್ನು ಮರು ನಿರ್ಮಾಣ ಅಥವಾ ಆಧುನೀಕರಣ ಮಾಡಿಲ್ಲ ಎಂದು ದೂರಿದರು.

26 ಕಿ.ಮೀ. ದೂರ ಮುಖ್ಯ ಕಾಲುವೆಗಳು ಮತ್ತು 9 ವಿತರಣೆ ಕಾಲುವೆಗಳು ಇವೆ. ಹಾಳಾಗಿರುವ ಕಾಲುವೆಗಳಲ್ಲಿ ನೀರು ಸಮಪರ್ಕವಾಗಿ ಹರಿಯದೆ ರೈತರು ಬೆಳೆ ಬೆಳೆಯಲು ಅನನುಕೂಲವಾಗಿದೆ. ಈ ಹಿಂದೆ ನಲ್ಕುಂದ ಬಳಿ ಇರುವ ಕಾಲುವೆ ಬ್ರಿಡ್ಜ್ ಒಡೆದು ನೀರು ರೈತರ ಗದ್ದೆಗಳಿಗೆ ನುಗ್ಗಿ ಗದ್ದೆಗಳು ಜಲಾವೃತಗೊಂಡಿದ್ದವು. ಇದರಿಂದ ಫಸಲಿಗೆ ಬಂದ ಭತ್ತ ಹಾಳಾಗಿ ಲಕ್ಷಾಂತರ ನಷ್ಟ ಅನುಭವಿಸುಂತಾಗಿತ್ತು. ಕೂಡಲೇ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಅನುದಾನ ಬಿಡುಗಡೆ ಮಾಡಿ ಬ್ರಿಡ್ಜ್ ನಿರ್ಮಾಣ ಮಾಡಿಸಿ ರೈತರ ಹಿತ ಕಾಪಾಡಿದ್ದರು. ಈ ನಿಟ್ಟಿನಲ್ಲಿ ಸರ್ಕಾರ ಶಿಥಿಲಗೊಂಡ ಭದ್ರಾ ಕಾಲುವೆಗಳು ಮತ್ತು ಬ್ರಿಡ್ಜ್‌ಗಳನ್ನು ಮರು ನಿರ್ಮಾಣ ಮಾಡಿ ರೈತರ ಹಿತ ಕಾಪಾಡಬೇಕು ಎಂದು ಮನವಿ ಮಾಡಿದರು.

ಶಾಸಕರ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ‘ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ ಭದ್ರಾ ಕಾಲುವೆಗಳು ಮತ್ತು ಬ್ರಿಡ್ಜ್‌ಗಳನ್ನು ನಿರ್ಮಿಸಿ 60 ವರ್ಷ ಕಳೆದಿವೆ. 1958ರಲ್ಲಿ ನಿರ್ಮಾಣ ಮಾಡಿದ ಕಾಲುವೆಗಳು ಮತ್ತು ಬ್ರಿಡ್ಜ್‌ಗಳನ್ನು ಮರು ನಿರ್ಮಾಣ ಮಾಡಬೇಕೇ ಅಥವಾ ಆಧುನೀಕರಣ ಮಾಡಬೇಕೇ ಎಂಬ ಕುರಿತು ಕಾಲುವೆಗಳು ಮತ್ತು ಬ್ರಿಡ್ಜ್‌ಗಳನ್ನು ಪರಿಶೀಲನೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಅಧಿಕಾರಿಗಳು ವರದಿ ಸಲ್ಲಿಸಿದ ಮೇಲೆ ಹಣದ ಲಭ್ಯತೆ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅರಣ್ಯ ವಾಸಿಗಳ ರಕ್ಷಣೆಗೆ ಒತ್ತಾಯ
ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಬಸವಾಪಟ್ಟಣ ಹೋಬಳಿಯ ಅರಣ್ಯ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದವರು 60 ವರ್ಷಗಳಿಂದ ಮನೆ ಕಟ್ಟಿಸಿಕೊಂಡು ವಾಸವಾಗಿದ್ದಾರೆ. 1975–76ರಲ್ಲಿ ಸೇಂದಿವನ ಗೋಮಾಳ ಆಗಿತ್ತು. ಅದಕ್ಕೂ ಹಿಂದೆ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ನಂತರ ಈ ಜಾಗ ಅರಣ್ಯ ವಾಪ್ತಿಗೆ ಬಂದಿದೆ. ಇದರಿಂದ ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗಿದೆ. ಅಲ್ಲದೇ ಅರಣ್ಯ ಅಧಿಕಾರಿಗಳು ಪದೇ ಪದೆ ಕಿರುಕುಳ ನೀಡುತ್ತಿದ್ದಾರೆ‌. ಇದು ಕೇವಲ ಮಾಯಕೊಂಡ ಕ್ಷೇತ್ರದ ಸಮಸ್ಯೆಯಲ್ಲ ರಾಜ್ಯದ ಅರಣ್ಯ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಸಮಸ್ಯೆಯಾಗಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸದನದ ಗಮನಕ್ಕೆ ತಂದರು. ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಮತ್ತು ಕಾಗೋಡು ತಿಮ್ಮಪ್ಪ ಅವರು ಅರಣ್ಯ ಭೂಮಿ ಉಳುಮೆ ಮಾಡಿದವರು ಮನೆಗಳನ್ನು ಕಟ್ಟಿಸಿಕೊಂಡವರನ್ನು ರಕ್ಷಣೆ ಮಾಡಿದ್ದರು. ಸರ್ಕಾರ ಅದೇ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ತಂದು ಬಡವರನ್ನು ರಕ್ಷಣೆ ಮಾಡಬೇಕು ಎಂದು ಅಧಿವೇಶನದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು. ‘ಇದಕ್ಕೆ ಪ್ರತಿಕ್ರಿಯಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಭದ್ರಾವತಿ ವಿಭಾಗದ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಹೋಬಳಿ ವ್ಯಾಪ್ತಿಯ ಶುಂಗಾರಬಾಬು ಗ್ರಾಮದ ಸರ್ವೆ ನಂಬರ್ 16ರಲ್ಲಿ ಶುಂಗಾರಬಾಬು ಮುಳ್ಳುನಾಯಕನಹಳ್ಳಿ ಮೀಸಲು ಅರಣ್ಯ ಪ್ರದೇಶ ಇದೆ. ಇಲ್ಲಿ 44.34 ಎಕರೆಒತ್ತುವರಿಯಾಗಿದೆ. ಈ ಒತ್ತುವರಿ ತೆರವಿಗೆ ಈಗಾಗಲೇ ಅಧಿಕಾರಿಗಳು ಕರ್ನಾಟಕ ಅರಣ್ಯ ಕಾಯ್ದೆ 1960ರಡಿ ಪ್ರಕರಣ ದಾಖಲಿಸಿದ್ದಾರೆ. ಇಲ್ಲಿ ಮನೆ ಇರಲಿ ಮತ್ತೊಂದಿರಲಿ ಏಕಾಏಕಿ ತೆರವುಗೊಳಿಸುವುದಿಲ್ಲ. ಈ ಬಗ್ಗೆ ವಿಚಾರಣೆ ಮಾಡಿ ತೆರವುಗೊಳಿಸುವ ಕಾರ್ಯ ಮಾಡುತ್ತಾರೆ. ಕಾಯ್ದೆಯ ಅನುಸಾರ ಏನೇನು ಮಾಡಬಹುದು ಎಂದು ಕೂಲಂಕಷವಾಗಿ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT