ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ: 64 ಬಗರ್‌ಹುಕುಂ ರೈತರಿಗೆ ಸಾಗುವಳಿ ಚೀಟಿ ವಿತರಣೆ

ಉಳಿದ ರೈತರಿಗೂ ಶೀಘ್ರವೇ ವಿತರಣೆ; ಶಾಸಕ ಡಿ.ಜಿ. ಶಾಂತನಗೌಡ 
Published 18 ಫೆಬ್ರುವರಿ 2024, 15:38 IST
Last Updated 18 ಫೆಬ್ರುವರಿ 2024, 15:38 IST
ಅಕ್ಷರ ಗಾತ್ರ

ಹೊನ್ನಾಳಿ: ಕಳೆದ 50 ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಬರುತ್ತಿರುವ ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಲು ಸಂತಸವಾಗುತ್ತಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕಿನ ಹನುಮಸಾಗರ ಗ್ರಾಮದ ಸರ್ಕಾರಿ ಇನಾಂ ಜಮೀನಿನ ಸರ್ವೇ ನಂ. 122ರಲ್ಲಿ ಸಾಗುವಳಿ ಮಾಡುತ್ತಿದ್ದ 64 ರೈತರಿಗೆ ಶನಿವಾರ ಸಾಗುವಳಿ ಚೀಟಿ ವಿತರಿಸಿ ಮಾತನಾಡಿದ ಅವರು, ಯಾರು ಅರ್ಹ ಫಲಾನುಭವಿಗಳಿದ್ದಾರೋ ಅಂಥವರಿಗೆ ಸರ್ಕಾರದ ಸೌಲಭ್ಯಗಳು ಸಿಗಬೇಕು ಎನ್ನುವುದೂ ನನ್ನ ಆಶಯ ಎಂದರು. 

‘ನೀವು ಪಟ್ಟ ಶ್ರಮಕ್ಕೆ ಇದೀಗ ಪ್ರತಿಫಲ ಸಿಕ್ಕಿದೆ. ಇದನ್ನು ಯಾರಿಗೂ ಕ್ರಯಕ್ಕೆ ಕೊಡದೇ ಉಳುಮೆ ಮಾಡಿಕೊಂಡು ಹೋಗಬೇಕು. ಇದು ನಿಮ್ಮ ಮುಂದಿನ ಪೀಳಿಗೆಯವರೆಗೂ ಇರುವಂತೆ ನೋಡಿಕೊಳ್ಳಬೇಕು’ ಎಂದ ಅವರು, ಈಗ ಒಂದಡಿ ಜಾಗ ಸಿಗುವುದೂ ಕಷ್ಟ, ಅಂಥದ್ದರಲ್ಲಿ ನಿಮಗೆ ಈಗ ಸರ್ಕಾರ ಜಮೀನು ನೀಡಿದೆ ಎಂದರು.

ಬಾಕಿ ಇರುವ ರೈತರಿಗೂ ಕಾನೂನಿನ ತೊಡಕು ನಿವಾರಿಸಿಕೊಂಡು ಆದಷ್ಟು ಬೇಗ ಸಾಗುವಳಿ ಚೀಟಿ ನೀಡುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಶಾಸಕರ ಪರಿಶ್ರಮದಿಂದ 64 ಜನ ಸಾಗುವಳಿದಾರರಿಗೆ ಹಕ್ಕುಪತ್ರ ಸಿಕ್ಕಿದೆ. ಯಾರೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂದು ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹೇಳಿದರು. ‘ಸಾಗುವಳಿದಾರರು ಮಳೆಗಾಳಿ ಚಳಿ ಎನ್ನದೇ ಗುಡ್ಡಗಾಡು ಪ್ರದೇಶದಲ್ಲಿನ ಸರ್ಕಾರಿ ಭೂಮಿಯನ್ನು ಹದ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಿರಿ. ಶ್ರಮದ ಪ್ರತಿಫಲವಾಗಿ ನಿಮಗೆ ಹಕ್ಕುಪತ್ರ ಸಿಕ್ಕಿದೆ. ಇದಕ್ಕಿಂತ ಸಂತೋಷದ ವಿಚಾರ ಬೇರೆ ಏನಿದೆ’ ಎಂದರು. 

ತಾಲ್ಲೂಕಿನ ಹನುಮಸಾಗರ ಗ್ರಾಮದ ಸರ್ವೇ ನಂ. 122ರಲ್ಲಿದ್ದ 360 ಎಕರೆ ಸರ್ಕಾರಿ ಜಮೀನಿನಲ್ಲಿ 201 ರೈತರು ಸಾಗುವಳಿ ಮಾಡುತ್ತಿದ್ದರು. ಅವರಲ್ಲಿ ಈಗ 64 ರೈತರಿಗೆ ಸಾಗುವಳಿ ಚೀಟಿ ನೀಡಿದ್ದೇವೆ. ಬಾಕಿ 187 ಸಾಗುವಳಿದಾರರಿಗೂ ಶೀಘ್ರವೇ ಹಕ್ಕುಪತ್ರ ನೀಡಲಾಗುವುದು ಎಂದು ತಹಶೀಲ್ದಾರ್ ಪಟ್ಟರಾಜಗೌಡ ಹೇಳಿದರು. 

ಬಗರ್ ಹುಕುಂ ಸಮಿತಿ ಸದಸ್ಯರಾದ ಸಣ್ಣಕ್ಕಿ ಬಸವನಗೌಡ, ಕೊಡತಾಳ್ ರುದ್ರೇಶ್, ಪುಷ್ಪಾ ರವೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ.ವಿಶ್ವನಾಥ್, ಮುಖಂಡರಾದ ಎಚ್.ಬಿ.ಶಿವಯೋಗಿ, ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT