ಚನ್ನಗಿರಿ: ‘ಅರೆಮಲೆನಾಡಿನ ಸೆರಗಿನಂಚಿನಲ್ಲಿರುವ ಅಮ್ಮನಗುಡ್ಡ ಸುಕ್ಷೇತ್ರದಲ್ಲಿ ಕುಕ್ಕುವಾಡೇಶ್ವರಿ ದೇವಿ ದೇವಸ್ಥಾನವಿದ್ದು, ಪ್ರತಿ ಅಮಾವಾಸ್ಯೆಯ ದಿನ ನಾಡಿನ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಬಂದು ದೇವಿ ದರ್ಶನ ಪಡೆದುಕೊಂಡು ಹೋಗುತ್ತಾರೆ. ಇಂತಹ ಪ್ರಸಿದ್ಧವಾದ ಸ್ಥಳವನ್ನು ಯಾತ್ರಾಸ್ಥಳವನ್ನಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲು ಬದ್ಧನಾಗಿದ್ದೇನೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ಅಮ್ಮನಗುಡ್ಡ ಸುಕ್ಷೇತ್ರಕ್ಕೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು.
ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿರುವುದರಿಂದ ಇನ್ನೊಂದು ವಸತಿ ಗೃಹದ ವ್ಯವಸ್ಥೆಯಾಗಬೇಕಾಗಿದೆ. ಹೈಟೆಕ್ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವಾರು ರೀತಿಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕಾಗಿದೆ. ಹಾಗೆಯೇ ಇಲ್ಲಿ ಮದ್ಯ ಮಾರಾಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮದ್ಯ ಮಾರಾಟ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಈ ದೇವಸ್ಥಾನ ಸೇರಿದೆ. ಇದುವರೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದರೂ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೂಲಸೌಕರ್ಯಗಳ ಕೊರತೆ ಕಂಡು ಬರುತ್ತಿದೆ. ಈ ದೇವಸ್ಥಾನದ ಹುಂಡಿಯಲ್ಲಿ ಪ್ರತಿ ವರ್ಷ ₹75ರಿಂದ ₹80 ಲಕ್ಷ ಹುಂಡಿ ಹಣ ಸಂಗ್ರಹವಾಗುತ್ತಿದೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಮುಜರಾಯಿ ಇಲಾಖೆ ಸಚಿವರೊಂದಿಗೆ ಚರ್ಚೆ ಮಾಡಿ ಅಗತ್ಯ ಅನುದಾನ ತರಲು ಶ್ರಮಿಸುತ್ತೇನೆ ಎಂದು ಹೇಳಿದರು.
ತಹಶೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಸಿಪಿಐ ಮಹೇಶ್, ಕಾಂಗ್ರೆಸ್ ಮುಖಂಡರಾದ ವಿಜಯ ಕುಮಾರ್ ಪಾಟೀಲ್, ಕುಮಾರ್ ತಳವಾರ್, ಆರ್ಚಕ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.