ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Teachers' Day Special: ದಾರಿ ತೋರಿದ ಶಿಕ್ಷಕರು...

Published : 5 ಸೆಪ್ಟೆಂಬರ್ 2024, 6:59 IST
Last Updated : 5 ಸೆಪ್ಟೆಂಬರ್ 2024, 6:59 IST
ಫಾಲೋ ಮಾಡಿ
Comments
ವಿದ್ಯಾರ್ಥಿಗಳು ಎಷ್ಟೇ ದೊಡ್ಡ ಸಾಧನೆ ಮಾಡಿದರೂ, ಅದರ ಹಿಂದೆ ಶಿಕ್ಷಕರ ‘ಗುರು’ತರ ಜವಾಬ್ದಾರಿ ಇದ್ದೇ ಇರುತ್ತದೆ. ವೈದ್ಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳು ದೇಶ– ವಿದೇಶಗಳಲ್ಲಿ ಬದುಕು ಕಟ್ಟಿಕೊಂಡರೂ, ಶಿಕ್ಷಕರು ಮಾತ್ರ ಕೊನೆಯವರೆಗೂ ಶಾಲೆಗಳಲ್ಲೇ ಉಳಿದುಬಿಡುತ್ತಾರೆ. ಶಿಕ್ಷಕರು ಪಠ್ಯ ಬೋಧನೆಗೆ ಮಾತ್ರ ಸೀಮಿತವಲ್ಲ. ನೈತಿಕ ಮೌಲ್ಯವನ್ನು ತುಂಬುವ, ಶಿಸ್ತನ್ನು ರೂಢಿಸುವ, ಸರಿ ತಪ್ಪುಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿದ್ದಾರೆ. ‘ಮೇಸ್ಟ್ರು’, ‘ಟೀಚರ್’ ಎಂಬುದು ಕೇವಲ ಪದವಲ್ಲ. ಅದೊಂದು ಭಾವ, ಭಕ್ತಿಯೂ ಹೌದು. ‘ಶಿಕ್ಷಕ’ ಎಂಬುದನ್ನು ವೃತ್ತಿ ಎಂದು ಮಾತ್ರ ನೋಡದೇ, ಅದೊಂದು ಸೇವೆ ಎಂದು ಭಾವಿಸಿ ವಿದ್ಯಾರ್ಥಿಸ್ನೇಹಿ ವಾತಾವರಣ ಸೃಷ್ಟಿಸುವ, ಸಾಮಾಜಿಕ ಕಳಕಳಿ ಮೆರೆವ ಹಲವು ಶಿಕ್ಷಕರು ನಮ್ಮ ನಡುವೆ ಇದ್ದಾರೆ. ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಕೆಲವರ ಪರಿಚಯವನ್ನು ಇಲ್ಲಿ ಕಟ್ಟಿಕೊಡಲಾಗಿದೆ.

‘ಮಾಡೆಲ್‌’ ತಯಾರಿಕೆಗೆ ‘ಮಾದರಿ ಶಿಕ್ಷಕ’

ದಾವಣಗೆರೆ: ಚಟುವಟಿಕೆ ಆಧಾರಿತ ಹಾಗೂ ಪ್ರಯೋಗಗಳ ಮೂಲಕ ವಿಜ್ಞಾನ ವಿಷಯವನ್ನು ವಿದ್ಯಾರ್ಥಿ ಸ್ನೇಹಿಯಾಗಿ ಬೋಧಿಸುವ ಶಿಕ್ಷಕ ಮಂಜುನಾಥ ಸಾಹುಕಾರ್. ಇವರು ನೂರಾರು ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಕುರಿತು ಆಸಕ್ತಿ ಒಡಮೂಡುವಂತೆ ಮಾಡಿದ್ದಾರೆ. ವಿದ್ಯಾರ್ಥಿಗಳೇ ವಿವಿಧ ಮಾದರಿಗಳನ್ನು (ಮಾಡೆಲ್‌) ತಯಾರಿಸಲು ಬೆನ್ನೆಲುಬಾಗಿ ನಿಂತಿದ್ದಾರೆ.

ಚನ್ನಗಿರಿ ತಾಲ್ಲೂಕಿನ ತ್ಯಾವಣಿಗೆ ಮೂಲದ ಮಂಜುನಾಥ, ಸದ್ಯ ಜಗಳೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿರುವ ‘ಅಟಲ್ ಟಿಂಕರಿಂಗ್‌ ವಿಜ್ಞಾನ ಪ್ರಯೋಗಾಲಯ’ದಲ್ಲಿ (ಎಟಿಎಲ್‌) ವಿವಿಧ ಮಾದರಿಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. 

ಮಂಜುನಾಥ್ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳು ಅಂಧರಿಗೆ ನೆರವಾಗುವ ‘ಬ್ಲೈಂಡ್‌ ಸ್ಟಿಕ್‌’, ‘ಸ್ಮಾರ್ಟ್‌ ಡಸ್ಟ್‌ಬಿನ್‌’, ಸ್ಮಾರ್ಟ್‌ ಸ್ಕೂಲ್‌ ಗೇಟ್‌, ಸ್ಮಾರ್ಟ್‌ ಸೋಲಾರ್ ಪ್ಯಾನಲ್‌ಗಳನ್ನು ತಯಾರಿಸಿದ್ದಾರೆ. ಇಷ್ಟೇ ಅಲ್ಲದೇ ಕ್ರೀಡಾ ಚಟುವಟಿಕೆಗೆ ಅನುಕೂಲವಾಗುವಂತೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿದ್ದಾರೆ. ಇದೀಗ ‘ಫೇಸ್‌ ಡಿಟೆಕ್ಷನ್‌ ಅಟೆಂಡೆನ್ಸ್‌’ ಆ್ಯಪ್‌ ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಹಾಜರಾತಿಗೆ ತಾಂತ್ರಿಕ ಸ್ಪರ್ಶ ಸಿಗುವ ಭರವಸೆ ಇದೆ. 

ಶಾಲೆಯಲ್ಲಿ ರೋಬೋ, ಡ್ರೋಣ್‌ ತಾಂತ್ರಿಕತೆ ಬಗ್ಗೆಯೂ ವಿದ್ಯಾರ್ಥಿಗಳಿಗೆ ವಿವರಿಸಲಾಗುತ್ತಿದೆ. ಇದರಿಂದಾಗಿ ಎಂಜಿನಿಯರಿಂಗ್‌ ಪ್ರವೇಶಿಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಆಗುತ್ತಿದೆ.

ಹಲವು ಪ್ರಶಸ್ತಿಗಳು ಮುಡಿಗೆ

ಮಂಜುನಾಥ ಸಾಹುಕಾರ್ ಅವರಿಗೆ ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಗೌರವಿಸಿವೆ. ಪ್ರಮುಖವಾದ ಪ್ರಶಸ್ತಿಗಳು ಹೀಗಿವೆ.

  • ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೊ) ಸಾಧನ ಪ್ರಶಸ್ತಿ (2019)

  • ಅರಬಿಂದೋ ಸೊಸೈಟಿ ವತಿಯಿಂದ ‍‘ನಾವಿನ್ಯತೆಯುಳ್ಳ ಶಿಕ್ಷಕ ಪ್ರಶಸ್ತಿ’ (2019)

  • ಚೆನ್ನೈನಲ್ಲಿ ನಡೆದ ವಿಜ್ಞಾನ ಮೇಳದಲ್ಲಿ ‘ಉತ್ತಮ ಮಾರ್ಗದರ್ಶಕ ಪುರಸ್ಕಾರ’ (2020)

  • ನೀತಿ ಆಯೋಗದಿಂದ ‘ಅನುಕರಣೀಯ ಬದಲಾವಣೆಗಳ ಶಿಕ್ಷಕ ಪ್ರಶಸ್ತಿ’ (2023)

  • ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ (2018)

ಕ್ಯಾನ್ಸರ್‌ಗೆ ಎದೆಗುಂದದ ‘ವಿದ್ಯಾರ್ಥಿಸ್ನೇಹಿ ಶಿಕ್ಷಕಿ’

ಮಾರಣಾಂತಿಕ ಕ್ಯಾನ್ಸರ್‌ ಬಂದರೂ ಎದೆಗುಂದದೇ ಚಿಕಿತ್ಸೆ ಪಡೆಯುತ್ತಲೇ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಮಾಡಿದ ಶಿಕ್ಷಕಿ ನಾಗವೇಣಿ ಎ.ಎಲ್‌. ಇವರು ವೃತ್ತಿಪ್ರೇಮದೊಂದಿಗೆ ಬದ್ಧತೆಯನ್ನೂ ಮೆರೆದಿದ್ದಾರೆ.

ನಗರದ ಶಿವಕುಮಾರಸ್ವಾಮಿ ಬಡಾವಣೆಯ ನಿವಾಸಿಯಾಗಿರುವ ನಾಗವೇಣಿ ಅವರು ಶ್ರೀರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2022ರಲ್ಲಿ ಇವರಿಗೆ ಕ್ಯಾನ್ಸರ್‌ ಬಾಧಿಸಿತ್ತು. ಇದರಿಂದ ಎದೆಗುಂದಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ತಮ್ಮ ಅನಾರೋಗ್ಯದ ಕಾರಣದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕಳಕಳಿ ಮೆರೆದರು.

ಸದ್ಯ ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ನಾಗವೇಣಿ ಅವರು ಶಿಕ್ಷಕ ವೃತ್ತಿಯನ್ನು ಮುಂದುವರಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ. ಕಾರ್ಮಿಕರ ಮಕ್ಕಳಿಗೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಮಕ್ಕಳ ಬಗ್ಗೆ ಅತಿಯಾದ ಪ್ರೀತಿ ತೋರುವ ಅವರನ್ನು ವಿದ್ಯಾರ್ಥಿಗಳೂ ನೆಚ್ಚಿಕೊಂಡಿದ್ದಾರೆ.

ಬದ್ಧತೆಗೆ ಒಲಿದ ಪುರಸ್ಕಾರ

  • ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕಿ (2023)

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಉತ್ತಮ ಶಿಕ್ಷಕಿ–2021)  

ದಾವಣಗೆರೆಯ ಶ್ರೀರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ನಾಗವೇಣಿ ಎ.ಎಲ್‌. ಪ್ರಯೋಗ ನಡೆಸುತ್ತಿರುವುದು

ದಾವಣಗೆರೆಯ ಶ್ರೀರಾಮ ಬಡಾವಣೆಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕಿ ನಾಗವೇಣಿ ಎ.ಎಲ್‌. ಪ್ರಯೋಗ ನಡೆಸುತ್ತಿರುವುದು

ಶಿಕ್ಷಕ ಅರುಣ್‌ ಮುಡಿಗೆ ‘ರಾಜ್ಯ ಪ್ರಶಸ್ತಿ’ಯ ಗರಿ

ನಾಗೇಂದ್ರಪ್ಪ ವಿ.

ಕಡರನಾಯ್ಕನಹಳ್ಳಿ: ಸಮೀಪದ ಹಿಂಡಸಘಟ್ಟ ಕ್ಯಾಂಪ್‌ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಅರುಣ್ ಕುಮಾರ್, ‘ರಾಜ್ಯ ಪ್ರಶಸ್ತಿ’ಯ ಗರಿ ಮುಡಿಗೇರಿಸಿಕೊಂಡಿದ್ದಾರೆ.   

2023–24ನೇ ಸಾಲಿನಲ್ಲಿ ಇವರಿಗೆ ದಾವಣಗೆರೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿತ್ತು.  

ಹಿಂಡಸಘಟ್ಟ ಕ್ಯಾಂಪ್‌ ಚಿಕ್ಕ ಗ್ರಾಮ. ಅಂದಾಜು 120 ಮನೆಗಳಿದ್ದು, ಬಹಳ ಹಿಂದುಳಿದ ಕುಟುಂಬಗಳು ಇಲ್ಲಿ ನೆಲೆಸಿವೆ. ಅಂತಹ ಸ್ಥಳದಲ್ಲಿ ₹ 6 ಲಕ್ಷಕ್ಕೂ ಹೆಚ್ಚು ದೇಣಿಗೆ ಪಡೆದು ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಿದ ಹಿರಿಮೆ ಇವರದ್ದು. ಶಾಲೆಯ ಗೋಡೆಗಳನ್ನು ವರ್ಲಿ ಕಲೆಯಿಂದ ಚಿತ್ರಿಸಲಾಗಿದೆ. ಸ್ಮಾರ್ಟ್‌ಕ್ಲಾಸ್, ಕೃತಕ ಸೌರವ್ಯೂಹ ರಚನೆ ಸೇರಿ ಅನೇಕ ಕಲಿಕಾಸಕ್ತಿ ಯೋಜನೆಗಳನ್ನು ಇವರು ರೂಪಿಸಿ ಸೈ ಎನಿಸಿಕೊಂಡಿದ್ದಾರೆ.  ರಾಜ್ಯ ನಲಿ– ಕಲಿ ಪಠ್ಯ ಪುಸ್ತಕ ರಚನಾ ಸಮಿತಿಗೂ ಇವರು ಆಯ್ಕೆಯಾಗಿದ್ದಾರೆ. ಇದು ಇವರ ಪ್ರತಿಭೆಗೆ ಸಾಕ್ಷಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT