ಬುಧವಾರ, ಜುಲೈ 28, 2021
25 °C
ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಬಿಚ್ಚಿಟ್ಟ ಸಂಸದ ಸಿದ್ದೇಶ್ವರ

ಮೋದಿ ನಾಯಕತ್ವದಿಂದ ಸ್ವಾವಲಂಬಿಯಾದ ಭಾರತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಎರಡನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಒಂದು ವರ್ಷ ಪೂರ್ಣಗೊಳಿಸಿದ್ದು, ಅವರ ಪರಿಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ಸ್ವಾವಲಂಬಿ ರಾಷ್ಟ್ರವಾಗಿ ಹೊರಹೊಮ್ಮಿದೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಮೊದಲನೇ ವರ್ಷದ ಸಾಧನೆಗಳ ವಿವರ ನೀಡಿದ ಸಂಸದರು, ‘ಈ ಮೊದಲು ಬಿಕ್ಕಟ್ಟು ಬಂದಾಗ, ಸಂಕಷ್ಟ ಎದುರಾದಾಗ ಭಾರತ ಇತರೆ ದೇಶಗಳ ಸಹಾಯಕ್ಕೆ ಎದುರು ನೋಡುತ್ತಿತ್ತು. ಈಗ ಭಾರತವೇ ಹಲವು ದೇಶಗಳಿಗೆ ನೆರವಿನ ಹಸ್ತವನ್ನು ಚಾಚುತ್ತಿದೆ. ಮೋದಿ ಅವರ ನಾಯಕತ್ವದ ಫಲವಾಗಿ ಜಾಗತಿಕ ವಲಯದಲ್ಲಿ ಭಾರತ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿದೆ. ಕೊರೊನಾ ಸಂಕಷ್ಟದಲ್ಲೂ ನಾವು ಅವಕಾಶಗಳಿಗಾಗಿ ಹುಡುಕಾಡುತ್ತಿದ್ದೇವೆ’ ಎಂದು ಹೇಳಿದರು.

ಮುಸ್ಲಿಂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ತ್ರಿವಳಿ ತಲಾಖ್‌ ರದ್ದುಗೊಳಿಸಿರುವುದು, ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿ, ಒಂದು ದೇಶ ಒಂದೇ ಕಾನೂನು ಜಾರಿಗೊಳಿಸಿರುವುದು, ಸಿ.ಎ.ಎ ಹಾಗೂ ಎನ್‌.ಆರ್‌.ಸಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ವಿಚಾರಗಳನ್ನು ಮೋದಿ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದು ಸಿದ್ದೇಶ್ವರ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಕ್ಕೆ ಕೇಂದ್ರದ ನೆರವು: ‘ರಾಜ್ಯದ ರೈಲ್ವೆ ಮಾರ್ಗ ನಿರ್ಮಾಣಕ್ಕೆ ₹ 3,085 ಕೋಟಿ ನೀಡಲಾಗಿದ್ದು, 2022ರೊಳಗೆ ಎಲ್ಲಾ ರೈಲ್ವೆ ಮಾರ್ಗದ ಡಬ್ಲಿಂಗ್‌ ಹಾಗೂ ವಿದ್ಯುದೀಕರಣ ಮಾಡಲಾಗುವುದು. ₹ 18,600 ಕೋಟಿ ವೆಚ್ಚದಲ್ಲಿ 148 ಕಿ.ಮೀ ಉದ್ದದ ಉಪನಗರ ರೈಲು ಯೋಜನೆ ನೀಡಲಾಗಿದೆ. ರಾಜ್ಯಕ್ಕೆ ಪ್ರವಾಹ ಪರಿಹಾರಕ್ಕೆ ₹ 1,869 ಕೋಟಿ ನೆರವು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮೋದಿ ಅವರು ಕೋವಿಡ್‌ನಿಂದ ನಲುಗಿದ ಭಾರತದ ಆರ್ಥಿಕತೆ ಸರಿದಾರಿಗೆ ತರುವ ನಿಟ್ಟಿನಲ್ಲಿ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಒಟ್ಟು ₹ 2,272 ಕೋಟಿ ಹಣವನ್ನು ರೈತರು ಹಾಗೂ ಶ್ರಮಿಕರಿಗೆ ವಿಶೇಷ ಪ್ಯಾಕೇಜ್‌ ನೀಡಿದೆ. ಹೂವಿನ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ ₹ 25,000 ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದರು. 

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಉಜ್ವಲಾ ಯೋಜನೆಯಡಿ ₹ 1.21 ಲಕ್ಷ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್‌ ಸಿಲಿಂಡರ್‌ ವಿತರಿಸಲಾಗಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ 1.65 ಲಕ್ಷ ರೈತರಿಗೆ ತಲಾ ₹ 2 ಸಾವಿರದಂತೆ ₹ 33.06 ಕೋಟಿ ಜಮಾ ಮಾಡಲಾಗಿದೆ. ಜನಧನ ಯೋಜನೆಯಡಿ 3.13 ಲಕ್ಷ ಮಹಿಳೆಯರಿಗೆ ತಲಾ ₹ 500ರಂತೆ ಮೂರು ತಿಂಗಳು ಹಣ ಜಮಾ ಮಾಡಲಾಗಿದೆ. ₹ 6,500 ಕೋಟಿ ವೆಚ್ಚದಲ್ಲಿ ರಸಗೊಬ್ಬರ ಕಾರ್ಖಾನೆ ನಿರ್ಮಾಣಕ್ಕೆ ಸಾರಥಿ ಬಳಿ 330 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡಿದೆ ಎಂದು ತಿಳಿಸಿದರು.

ಕೊರೊನಾ ತೀವ್ರತೆ ಕಡಿಮೆಯಾದ ಬಳಿಕ ನಗರದ ಶಾಸಕರು, ಮೇಯರ್‌ ಜೊತೆ ಚರ್ಚಿಸಿ ಅಶೋಕ ರೈಲ್ವೆ ಗೇಟ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಸಂಸದರು ಉತ್ತರಿಸಿದರು.

ಶಾಸಕ ಎಸ್‌.ವಿ. ರಾಮಚಂದ್ರ, ಮೇಯರ್‌ ಬಿ.ಜೆ. ಅಜಯಕುಮಾರ್‌, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಜಗದೀಶ್‌ ಹಾಜರಿದ್ದರು.

ನಾನೇಕೆ ಮೈಮೇಲೆ ಓತಿಕಾಟ ಬಿಟ್ಟುಕೊಳ್ಳಲಿ?

‘ಆರು ಜನ ಶಾಸಕರು ಜಿಲ್ಲೆಯಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂದು ನಿರ್ಧಾರ ಕೈಗೊಂಡು ನನ್ನ ಬಳಿಗೆ ಬಂದು ತಿಳಿಸಿದರೆ ಅವರನ್ನೇ ಸಚಿವರನ್ನಾಗಿ ಮಾಡುವಂತೆ ನಾನು ಪಟ್ಟು ಹಿಡಿದು ಮುಖ್ಯಮಂತ್ರಿಯನ್ನು ಕೇಳುತ್ತೇನೆ ಎಂದು ಹೇಳಿದ್ದೇನೆ. ಆದರೆ, ಇವರ‍್ಯಾರೂ ಈ ಬಗ್ಗೆ ತಮ್ಮ ನಿರ್ಧಾರವನ್ನು ತಿಳಿಸಿಲ್ಲ’ ಎಂದು ಸಂಸದ ಸಿದ್ದೇಶ್ವರ ಸ್ಪಷ್ಟಪಡಿಸಿದರು.

‘ನೀವೇ ಎಲ್ಲಾ ಶಾಸಕರನ್ನು ಕರೆದು ಈ ಬಗ್ಗೆ ವಿಚಾರಿಸಬಹುದಲ್ಲವೇ?’ ಎಂಬ ಪ್ರಶ್ನೆಗೆ, ‘ಬೇಲಿ ಗೂಟದ ಮೇಲೆ ತಲೆ ಅಲ್ಲಾಡಿಸುತ್ತಿರುವ ಓತಿಕಾಟವನ್ನು ನಾನೇಕೆ ತಂದು ಮೈಮೇಲೆ ಬಿಟ್ಟುಕೊಳ್ಳಲಿ? ಶಾಸಕರೇ ನನ್ನ ಬಳಿಗೆ ಬಂದು ಈ ಬಗ್ಗೆ ಚರ್ಚಿಸಬೇಕು’ ಎಂದು ಉತ್ತರಿಸಿದರು.

‘ನಮ್ಮ ಜಿಲ್ಲೆಯವರೇ ಉಸ್ತುವಾರಿ ಸಚಿವರಾದರೆ ಅಭಿವೃದ್ಧಿಯಾಗುತ್ತದೆ ಎಂಬುದು ಭ್ರಮೆಯಷ್ಟೆ. ಶಿವಮೊಗ್ಗದವರು ಮುಖ್ಯಮಂತ್ರಿಯಾದರೆ ಬೆಂಗಳೂರು ಅಭಿವೃದ್ಧಿ ಆಗುವುದಿಲ್ಲವೇ?’ ಎಂದು ಪತ್ರಕರ್ತರಿಗೇ ಮರು ಪ್ರಶ್ನೆ ಹಾಕಿದರು.

ಈ ಬಾರಿಯಾದರೂ ತಮ್ಮನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಪಕ್ಷ ಮಾಡಬಹುದೇ ಎಂದು ಜಿಲ್ಲೆಯ ಕೆಲ ನಾಯಕರು ಕಾಯುತ್ತಿರುವ ಬಗ್ಗೆ ಕೇಳಿದಾಗ, ‘ಬಿಜೆಪಿಯಿಂದ ದಾವಣಗೆರೆಯಲ್ಲಿ ಒಬ್ಬರನ್ನೂ ಪರಿಷತ್ತಿಗೆ ನೇಮಕ ಮಾಡಿಲ್ಲ ಎಂಬ ಸಂಗತಿ ಗೊತ್ತಿದೆ. ಈ ಹಿಂದೆ ಮೂವರು ಸಚಿವರನ್ನು ನಾವು ನೀಡಿದ್ದೆವು. ಈಗ ಪರಿಸ್ಥಿತಿ ಬದಲಾಗಿದೆ. ಈ ಬಾರಿ ಪರಿಷತ್ತಿಗೆ ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು