ಕಾರ್ಮಿಕರ ಸವಲತ್ತಿಗೆ ಮೋದಿ ಕಲ್ಲು

ಬುಧವಾರ, ಮೇ 22, 2019
24 °C
ಮೇ ದಿನಾಚರಣೆ, ಹುತಾತ್ಮರ ವಾರ್ಷಿಕೋತ್ಸವದಲ್ಲಿ

ಕಾರ್ಮಿಕರ ಸವಲತ್ತಿಗೆ ಮೋದಿ ಕಲ್ಲು

Published:
Updated:
Prajavani

ದಾವಣಗೆರೆ: ಕಾರ್ಮಿಕರಿಗೆ ಸಿಗುತ್ತಿದ್ದ ಅಲ್ಪಸ್ವಲ್ಪ ಸೌಲಭ್ಯಗಳನ್ನೂ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಎನ್‌. ಶಿವಣ್ಣ ಹೇಳಿದರು.

ಸಿಪಿಐ ಮತ್ತು ಎಐಟಿಯುಸಿ ಜಿಲ್ಲಾ ಮಂಡಳಿ ಬುಧವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮೇ ದಿನಾಚರಣೆ, ಹುತಾತ್ಮರ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಐಟಿಯುಸಿ ನೇತೃತ್ವದಲ್ಲಿ 99 ವರ್ಷಗಳಿಂದ ನಡೆಸಿಕೊಂಡು ಬಂದ ಹೋರಾಟಗಳಿಂದಾಗಿ ಕಾರ್ಮಿಕರಿಗೆ ಅನುಕೂಲವಾಗುವ ಅನೇಕ ಕಾಯ್ದೆಗಳು ಜಾರಿಯಾದವು. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಲಿಲ್ಲ. 1990ರ ನಂತರದಲ್ಲಿ ಕಾರ್ಮಿಕ ಕಾಯ್ದೆಗಳು ನಿಧಾನಕ್ಕೆ ಸಡಿಲಗೊಳ್ಳತೊಡಗಿದವು ಎಂದು ತಿಳಿಸಿದರು.

ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಬಳಿಕ 44 ಕಾರ್ಮಿಕ ಕಾಯ್ದೆಗಳನ್ನು ನಾಲ್ಕಕ್ಕೆ ಇಳಿಸಿದ್ದಾರೆ. ಕಾರ್ಮಿಕರಿಗೆ ಇದ್ದ ಎಲ್ಲ ಭದ್ರತೆಗಳನ್ನು ತೆಗೆಯಲು ಮುಂದಾಗಿದೆ. 100 ಅಥವಾ ಅದಕ್ಕಿಂತ ಹೆಚ್ಚು ಕಾರ್ಮಿಕರಿರುವ ಕೈಗಾರಿಕೆಯನ್ನು ಮುಚ್ಚಬೇಕಿದ್ದರೆ ಸರ್ಕಾರದ ಅನುಮತಿ ಬೇಕಿತ್ತು. ಈಗ ಅದನ್ನು 300ಕ್ಕೆ ಏರಿಸಲಾಗಿದೆ. 300 ಕಾರ್ಮಿಕರು ಇರುವ ಕೈಗಾರಿಕೆಗಳು ದಾವಣಗೆರೆ ಅಥವಾ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಒಂದೂ ಇಲ್ಲ ಎಂದರು.

ಈಗ ವರ್ಷದ ಲೆಕ್ಕದಲ್ಲಿ ಗುತ್ತಿಗೆಗೆ ತೆಗೆದುಕೊಂಡು ಕೆಲಸ ಮಾಡುತ್ತಿರುವುದರಿಂದ ಅನೇಕ ಕಾರ್ಮಿಕರಿಗೆ ಇಎಸ್‌ಐ, ಇಪಿಎಫ್‌, ಕಾಯಂ ಕೆಲಸ ಇಲ್ಲದಂತಾಗಿದೆ. ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರನ್ನು ಇನ್ನೂ ಕಾರ್ಮಿಕರೆಂದೇ ಗುರುತಿಸಿಲ್ಲ. ಈ ರೀತಿ ಒಂದು ಕೋಟಿಗೂ ಅಧಿಕ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕೈಗಾರಿಕೆಗಳು ಆರಂಭಗೊಂಡಾಗ ಕಾರ್ಮಿಕರನ್ನು ವಿಪರೀತವಾಗಿ ದುಡಿಸಿಕೊಳ್ಳುತ್ತಿದ್ದರು. ಗರ್ಭಿಣಿಯರು, ವೃದ್ಧರು ಎನ್ನದೇ ಎಲ್ಲರೂ ವಿಶ್ರಾಂತಿ ಇಲ್ಲದೇ ದುಡಿಯಬೇಕಿತ್ತು. ಇದರ ವಿರುದ್ಧ ಅಮೆರಿಕದ ಷಿಕಾಗೋದಲ್ಲಿ ಕಾರ್ಮಿಕರು  ಹೋರಾಟ ಸಂಘಟಿಸಿದರು. ರಕ್ತದಲ್ಲಿ ಅದ್ದಿ ಬಾವುಟವನ್ನು ಹಾರಿಸಲಾಯಿತು. ದಿನಕ್ಕೆ 8 ಗಂಟೆ ಮಾತ್ರ ದುಡಿಸಿಕೊಳ್ಳಬೇಕು. 8 ಗಂಟೆ ವಿಶ್ರಾಂತಿಗೆ, 8 ಗಂಟೆ ಸಾಮಾಜಿಕ ಚಟುವಟಿಕೆಗೆ ನೀಡಬೇಕು ಎಂಬುದು ಅಂದಿನ ಹೋರಾಟವಾಗಿತ್ತು. ಈ ಹೋರಾಟಕ್ಕೆ ಜಯ ಸಿಕ್ಕಿ 133 ವರ್ಷಗಳೇ ಕಳೆದಿವೆ. ನಮ್ಮಲ್ಲಿ ಇನ್ನೂ 8 ಗಂಟೆಗಿಂತ ಅಧಿಕ ಸಮಯ ದುಡಿಸಿಕೊಳ್ಳುವುದು ಮುಂದುವರಿದಿದೆ ಎಂದು ಹೇಳಿದರು.

ಎಐಟಿಯುಸಿ ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಎಚ್‌.ಕೆ. ರಾಮಚಂದ್ರಪ್ಪ, ‘ವರ್ಗ ರಹಿತ, ಶೋಷಣೆ ರಹಿತ ಸಮ ಸಮಾಜಕ್ಕಾಗಿ ಪ್ರಪಂಚದಾದ್ಯಂತ ಹೋರಾಟ ಮಾಡಬೇಕು. ಭಗತ್‌ಸಿಂಗ್‌, ಕಾರ್ಲ್‌ಮಾರ್ಕ್‌, ಗಾಂಧಿ ಆಶಯದಂತೆ ಹೋರಾಟಗಳು ನಡೆಯಬೇಕು’ ಎಂದರು.

ಎಐಟಿಯುಸಿ ನಾಯಕರಾದ ಆವರಗೆರೆ ಚಂದ್ರು, ಆನಂದರಾಜ್‌, ಟಿ.ಎಸ್‌. ನಾಗರಾಜ್‌, ಎಂ.ಬಿ. ಶಾರದಮ್ಮ, ಟಿ.ಎಚ್‌. ನಾಗರಾಜ್‌, ಮಹಮ್ಮದ್‌ ಬಾಷಾ, ಮಹಮ್ಮದ್‌ ರಫೀಕ್‌, ರಾಘವೇಂದ್ರ ನಾಯರಿ ಇದ್ದರು. ಆವರಗೆರೆ ವಾಸು ಸ್ವಾಗತಿಸಿದರು. ಐರಣಿ ಚಂದ್ರು ವಂದಿಸಿದರು.

ಸಭಾ ಕಾರ್ಯಕ್ರಮಕ್ಕಿಂತ ಮೊದಲು ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

‘ಚುನಾವಣೆಯಲ್ಲ ಚಲಾವಣೆ’

ಈಗ ಚುನಾವಣೆ ನಡೆಯುತ್ತಿಲ್ಲ. ಚಲಾವಣೆಯಷ್ಟೇ ನಡೆಯುತ್ತಿದೆ. ಮನೆಮನೆಗೆ ತೆರಳಿ ಮತ ಕೇಳುವುದು, ಚುನಾವಣಾ ಪ್ರಚಾರಗಳು ಕಡಿಮೆಯಾಗಿವೆ. ಬೇರೆಲ್ಲ ತಲುಪುತ್ತಿವೆ ಎಂದು ಶಿವಣ್ಣ ಹೇಳಿದರು.

‘ತುಮಕೂರಿನಲ್ಲಿ ನನ್ನನ್ನು ಸ್ಪ‍ರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮಾಡಲು ದೇವೇಗೌಡರು ದೆಹಲಿವರೆಗೆ ಹೋಗಿದ್ದರು. ಸಿಪಿಐ ಎಲ್ಲೆಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷ ಮೊದಲೇ ತೀರ್ಮಾನ ಕೈಗೊಂಡಿತ್ತು. ದೇವೇಗೌಡರು ತಮ್ಮ ಮೊಮ್ಮಕ್ಕಳಿಗೆ ಜಾಗ ಮಾಡಿಕೊಟ್ಟು ಕೊನೇ ಕ್ಷಣಕ್ಕೆ ತುಮಕೂರಿಗೆ ಬಂದಿದ್ದಾರೆ. ಅವರಿಗಾಗಿ ನಾವ್ಯಾಕೆ ತ್ಯಾಗ ಮಾಡಬೇಕು. ಅವರನ್ನು ಹಿಂದೆ ಪ್ರಧಾನಿ ಮಾಡಿದ್ದೇ ನಾವು’ ಎಂದು ಟೀಕಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !