ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧನೆಗೆ ಅಮ್ಮನೇ ಪ್ರೇರಣೆ; ವೈದ್ಯಳಾಗುವಾಸೆ

ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಎರ್‌ಎಂವಿ ಕಾಲೇಜಿನ ಅನುಷಾ ಎಸ್‌.
Last Updated 14 ಜುಲೈ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ಪರೀಕ್ಷೆ ಚೆನ್ನಾಗಿ ಮಾಡಿದ್ದೇನೆ ಎಂದು ಗೊತ್ತಿತ್ತು. ಜಿಲ್ಲೆಗೆ ಪ್ರಥಮ ಸ್ಥಾನ ಬರುತ್ತೇನೆ ಎಂಬುದು ಗೊತ್ತಿರಲಿಲ್ಲ. ನನ್ನ ಸಾಧನೆಗೆ ತಾಯಿಯೇ ಪ್ರೇರಣೆ’.

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 89.16 (589) ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿರುವ ಸರ್‌ ಎಂ. ವಿ. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುಷಾ ಎಸ್‌. ಅವಳ ಮನದಾಳದ ಮಾತು ಇದು.

ಶಿಕ್ಷಕರಾಗಿದ್ದ ತಂದೆ ಶಂಕರನಾರಾಯಣ ನಾಲ್ಕು ವರ್ಷಗಳ ಹಿಂದೇ ನಿಧನರಾಗಿದ್ದಾರೆ. ಹೂವಿನಮಡು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿರುವ, ದಾವಣಗೆರೆ ಸೋಮೇಶ್ವರ ಬಡಾವಣೆ ನಿವಾಸಿಯಾಗಿರುವ ತಾಯಿ ಎ.ಸಿ. ಶಶಿಕಲಾ ಅವರ ಕಣ್ಗಾವಲಲ್ಲಿ ಬೆಳೆದ ಈ ಹುಡುಗಿ ‘ಪ್ರಜಾವಾಣಿ’ ಜತೆ ಮಾತನಾಡಿದರು. ಈಕೆ ಭೌತವಿಜ್ಞಾನದಲ್ಲಿ 100, ರಸಾಯನ ವಿಜ್ಞಾನದಲ್ಲಿ 99, ಜೀವವಿಜ್ಞಾನದಲ್ಲಿ 100, ಗಣಿತದಲ್ಲಿ 100, ಇಂಗ್ಲಿಷ್‌ನಲ್ಲಿ 92, ಕನ್ನಡದಲ್ಲಿ 98 ಅಂಕ ಗಳಿಸಿದ್ದಾಳೆ.

‘ಕಾಲೇಜಿನಲ್ಲಿ ನೀಡಲಾದ ಟೈಮ್‌ ಟೇಬಲ್‌ ಪ್ರಕಾರವೇ ಓದಿದ್ದೇನೆ. ಪ್ರತಿ ಒಂದು ಗಂಟೆ ಓದಿದ ಬಳಿಕ 15 ನಿಮಿಷ ವಿರಾಮ ತೆಗೆದುಕೊಳ್ಳುತ್ತಿದ್ದೆ. ಕಾಲೇಜಿನ ಎಲ್ಲ ಉಪನ್ಯಾಸಕರು ಚೆನ್ನಾಗಿ ಕಲಿಸಿದರು. ನನಗೆ ಅಮ್ಮನೇ ಸ್ಫೂರ್ತಿ, ಅಮ್ಮನದ್ದೇ ಪ್ರೋತ್ಸಾಹ. ಮುಂದೆ ವೈದ್ಯೆಯಾಗಿ ಸಮಾಜದ ಸೇವೆ ಮಾಡಬೇಕು’ ಎಂದು ಕನಸುಗಳನ್ನು ಬಿಚ್ಚಿಟ್ಟಳು.

‘ಇಂಗ್ಲಿಷ್‌ ಕಾದಂಬರಿ ಓದುವುದು, ಚಿತ್ರ ಬಿಡಿಸುವುದು ನನ್ನ ಹವ್ಯಾಸ. ಹ್ಯಾಂಡ್‌ಬಾಲ್‌ನಲ್ಲಿ ಕಳೆದ ವರ್ಷ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದೆ. ಬ್ಯಾಸ್ಕೆಟ್‌ ಬಾಲ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದೇನೆ. ದ್ವಿತೀಯ ಪಿಯುನಲ್ಲಿ ಓದಿನ ಕಡೆಗೇ ಹೆಚ್ಚು ಗಮನ ಕೊಟ್ಟಿದ್ದರಿಂದ ಕ್ರೀಡೆ ಕಡೆ ಗಮನ ಹರಿಸಿಲ್ಲ’ ಎಂದು ವಿವರಿಸಿದಳು.

‘ಎಲ್‌ಕೆಜಿಯಿಂದ ಅನುಭವ ಮಂಟಪದಲ್ಲೇ ಕಲಿಯುತ್ತಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ ಶೇ 97.2 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಳು. ಪಿಯುಸಿಗೆ ಸರ್‌ಎಂವಿಗೆ ಬರುತ್ತೇನೆ ಎಂದು ಅನುಷಾ ಹೇಳಿದಳು. ಅವಳ ಗೆಳತಿಯರು ಇಲ್ಲಿಗೆ ಬರುತ್ತಾರೆ ಎಂಬ ಒಂದೇ ಕಾರಣಕ್ಕೆ ಹೋಗುತ್ತಾಳಾ ಎಂಬ ಆತಂಕ ಉಂಟಾಯಿತು. ಒಳ್ಳೆಯ ಟೀಚಿಂಗ್‌ ಇಲ್ಲಿದೆ. ಟ್ಯೂಷನ್‌ಗೆ ಹೋಗಬೇಕಿಲ್ಲ ಅಂದಳು. ಅದಕ್ಕೆ ಇಲ್ಲಿಯೇ ಸೇರಿಸಿದೆ. ಮಗ ಸೌಹಾರ್ದ ಎಸ್‌. ಕೂಡಾ ಇಲ್ಲೇ ಓದುತ್ತಿದ್ದು, ಪ್ರಥಮ ಪಿಯು ಉತ್ತೀರ್ಣನಾಗಿದ್ದಾನೆ’ ಎಂದು ತಾಯಿ ಶಶಿಕಲಾ ತಿಳಿಸಿದರು.

‘ಮನೆಗೆ ಟಿ.ವಿ. ತಂದಾಗ ಅದು ಬೇಡಮ್ಮ. ನಮ್ಮನ್ನು ಹಾಳು ಮಾಡಿ ಬಿಡುತ್ತದೆ ಎಂದು ಅದರ ಸಂಪರ್ಕವನ್ನು ತಪ್ಪಿಸಿದಳು. ಮೊಬೈಲನ್ನು ಅನಿವಾರ್ಯವಾಗಿ ಮಾತನಾಡಲು ಮಾತ್ರ ಬಳಸುತ್ತಿದ್ದಳು. ಕೊರೊನಾ ಬಂದ ಬಳಿಕ ಲಾಕ್‌ಡೌನ್‌ ಆಗಿದ್ದರಿಂದ ಆನ್‌ಲೈನ್‌ ತರಗತಿಗೆ ಮೊಬೈಲ್‌ ಬೇಕೇಬೇಕಾಯಿತು. ನಾನು ಅವಳಿಗೆ ತಾಯಿಯಾಗಿದ್ದರೂ ಮೊಬೈಲ್‌ ಬಳಕೆಯಲ್ಲಿ ಅವಳೇ ನಂಗೆ ಅವ್ವ’ ಎಂದು ತಾಯಿ ಹೆಮ್ಮೆಪಟ್ಟರು.

‘ಅನುಷಾ ಕಠಿಣ ಪರಿಶ್ರಮಿ. ನಮ್ಮ ಉಪನ್ಯಾಸಕರು ಏನು ಹೇಳುತ್ತಾರೋ ಅದನ್ನು ಚಾಚೂತಪ್ಪದೇ ಮಾಡುವವಳು. ವಿದ್ಯಾರ್ಥಿಗಳಿಗೆ ಕೆಲಸ ಕೊಟ್ಟರೆ ಯಾಕೆ ಎಂಬ ಪ್ರಶ್ನೆ ಉಳಿದ ವಿದ್ಯಾರ್ಥಿಗಳಿಗೆ ಬರುತ್ತದೆ. ಆದರೆ ಅನುಷಾಳಿಗೆ ಈ ಪ್ರಶ್ನೆ ಕೊನೇಗೆ ಬರುತ್ತದೆ. ಅವಳ ಪರಿಶ್ರಮ ಮತ್ತು ಉಪನ್ಯಾಸಕರ ಪ್ರೋತ್ಸಾಹದಿಂದ ಅವಳು ಜಿಲ್ಲೆಗೆ ಪ್ರಥಮ ಬಂದಿದ್ದಾಳೆ’ ಎಂದು ಕಾಲೇಜಿನ ಟ್ರಸ್ಟಿ, ಪ್ರಾಚಾರ್ಯ ಸಯ್ಯದ್‌ ಸಂಶೀರ್‌ ಶ್ಲಾಘನೆ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಶಂಕರನಾರಾಯಣ, ಸುರೇಶ್‌ ಕುಮಾರ್, ಶ್ರೀಧರ್‌ ಧ್ವನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT