ಮಂಗಳವಾರ, ಜನವರಿ 28, 2020
17 °C
ಜಮುರಾ ನಾಟಕೋತ್ಸವ ಉದ್ಘಾಟಿಸಿದ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರಪ್ಪ

ರಾಜಕಾರಣದ ಕೇಂದ್ರಗಳಾಗುತ್ತಿರುವ ಮಠಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಲವು ಮಠಗಳು ರಾಜಕಾರಣದ ಕೇಂದ್ರಗಳಾಗಿವೆ. ಹಲವು ಸ್ವಾಮೀಜಿಗಳು ಧರ್ಮಕಾರ್ಯ ಮಾಡುವುದು ಬಿಟ್ಟು ರಾಜಕಾರಣದಲ್ಲೇ ತೊಡಗಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌ ವಿಷಾದಿಸಿದರು.

ಜಯದೇವಶ್ರೀಗಳ 63ನೇ ಸ್ಮರಣೋತ್ಸವದ ಅಂಗವಾಗಿ ಶಿವಯೋಗಾಶ್ರಮದ ಬಸವಕೇಂದ್ರದಲ್ಲಿ ಗುರುವಾರ ಜಮುರಾ ನಾಟಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಯೇ ಬರುವಂತೆ ಮಾಡುವೆ ಎಂದು ಸ್ವಾಮೀಜಿಯೊಬ್ಬರು ನಿನ್ನೆ ಹೇಳಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಹೇಳಿದರು.

ನಾಟಕಗಳ ಮೂಲಕ ಜನರ ಮನಪರಿವರ್ತನೆ ಮಾಡಲು ಸಾಧ್ಯ. ಆದರೆ ಇಂಥ ನಾಟಕಗಳನ್ನು ಮುರುಘಾಮಠ ಮತ್ತು ಸಾಣೇಹಳ್ಳಿ ಮಠಗಳನ್ನು ಹೊರತುಪಡಿಸಿದರೆ ಬೇರೆ ಮಠಗಳು ಮಾಡಿಸುತ್ತಿಲ್ಲ ಎಂದರು.

ಬದುಕುವ ದಾರಿ ಮತ್ತು ಸೇವೆಯ ಮನೋಭಾವವನ್ನು ಸಮಾಜಕ್ಕೆ ಕೊಟ್ಟು ಹೋದವರಲ್ಲಿ ಜಯದೇವಶ್ರೀಗಳು ಪ್ರಮುಖರು. ಅವರು ಪೀಠದಲ್ಲೇ ಬಾಕಿಯಾಗದೇ 100 ವರ್ಷಗಳ ಹಿಂದೆಯೇ ಹಸಿದವನಿಗೆ ಅನ್ನ, ಜ್ಞಾನದ ಹಸಿವು ಇರುವವನಿಗೆ ಶಿಕ್ಷಣ ನೀಡಿದವರು. ಇವತ್ತು ಮಕ್ಕಳಿಗೆ ಸರ್ಕಾರ ಬಿಸಿಯೂಟ ನೀಡುತ್ತಿದೆ. ಈ ಕಾರ್ಯವನ್ನು ಜಯದೇವಶ್ರೀಗಳು ಅಂದೇ ಮಾಡಿದ್ದರು ಎಂದು ಸ್ಮರಿಸಿದರು.

‘ಮನೆಯಲ್ಲಿ ಸಾಕಿರುವ ನಾಯಿಗೆ ಸಂಸ್ಕಾರ ಕಲಿಸಿಕೊಡುತ್ತೇವೆ. ಆದರೆ ನಮ್ಮದೇ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಹಿಂದೆ ಬೀಳುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾನ್ನಿಧ್ಯ ವಹಿಸಿದ್ದ ಬಸವಪ್ರಭು ಸ್ವಾಮೀಜಿ, ‘ಭೌತಿಕವಾಗಿ ಬಡಿದಾಟ ಮಾಡಿದವರು ಇತಿಹಾಸವಾಗಿಲ್ಲ. ಆದರ್ಶದ ಜೀವನ ಮಾಡಿದವರು ಇತಿಹಾಸ ಸೃಷ್ಟಿಸಿದ್ದಾರೆ. ವಿಶ್ವಗುರು ಬಸವಣ್ಣ, ಬುದ್ಧ, ಅಂಬೇಡ್ಕರ್‌, ಜಯದೇವಶ್ರೀಗಳು ಅಂಥ ಸಾಧಕರು. ಅವರೆಲ್ಲ ನಿಸ್ವಾರ್ಥ ಸೇವೆ ಮತ್ತು ತ್ಯಾಗ ಜೀವನ ನಡೆಸಿದವರು’ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿದವರು ಜಯದೇವಶ್ರೀಗಳು. ಮುರುಘಾಮಠ ಜಾತಿ ಕೇಳದ ಮಠ. ಸರ್ವಜನಾಂಗವನ್ನು ಉದ್ಧಾರ ಮಾಡಿದ ಮಠ ಎಂದು ಶ್ಲಾಘಿಸಿದರು.

ಪ್ರೀತಿ, ಸಹನೆ, ಶಾಂತಿ, ಮಾನವೀಯತೆ, ಸಮಾನತೆ ಇದ್ದಲ್ಲಿ ಬದುಕು ಸ್ವರ್ಗವಾಗುತ್ತದೆ. ನಿಂದೆ, ದ್ವೇಷ, ಮತ್ಸರಗಳಿದ್ದರೆ ಬದುಕಿಗೆ ಬೆಲೆ ಇರುವುದಿಲ್ಲ ಎಂದು ತಿಳಿಸಿದರು.

ನ್ಯಾಷನಲ್‌ ಕಾನ್ವೆಂಟ್‌ ಕಾರ್ಯದರ್ಶಿ ಸಹನಾ ರವಿ, ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಕನ್ನಡಪರ ಹೋರಾಟಗಾರ ಟಿ. ಶಿವಕುಮಾರ್, ಜಿ. ವೀರಭದ್ರಪ್ಪ ಇದ್ದರು. ದಮಯಂತಿ ಗೌಡ್ರು ನಿರೂಪಿಸಿದರು.

ಚಿತ್ರದುರ್ಗದ ಜಮುರಾ ತಂಡದಿಂದ ದ.ರಾ. ಬೇಂದ್ರೆ ರಚಿಸಿದ ಸಾಯೋ ಆಟ ಪ್ರದರ್ಶನಗೊಂಡಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು