ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ರಾಜಕಾರಣಿಗಳಿಗೆ ಮಠಗಳ ಬೆಂಬಲ: ನಿವೃತ್ತ ನ್ಯಾ. ಅರಳಿ ನಾಗರಾಜ್‌ ವಿಷಾದ

ಸರಸ್ವತಿ ಪುರಸ್ಕಾರ, ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Last Updated 1 ನವೆಂಬರ್ 2021, 5:07 IST
ಅಕ್ಷರ ಗಾತ್ರ

ದಾವಣಗೆರೆ: ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಈ ಭ್ರಷ್ಟರಿಗೆ ಬಹುತೇಕ ಮಠಗಳು ಬೆಂಗಾವಲು ಆಗಿವೆ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್‌ ಬೇಸರ ವ್ಯಕ್ತಪಡಿಸಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಸಹಯೋಗದಲ್ಲಿ ಸಿದ್ಧಗಂಗಾ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರಸ್ವತಿ ಪುರಸ್ಕಾರ, ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭ್ರಷ್ಟಾಚಾರ, ಜಾತೀಯತೆ ಹಾಗೂ ಅಪರಾಧಗಳು ದೇಶವನ್ನು ಕಿತ್ತು ತಿನ್ನುತ್ತಿವೆ. ಇವುಗಳಿಂದ ಇಂದಿನ ವಿದ್ಯಾರ್ಥಿಗಳು ಮುಕ್ತರಾಗಬೇಕು. ಜೈಲಿಗೆ ಹೋಗಿ ಬಂದ ಲಂಚಕೋರ ರಾಜಕಾರಣಿಗಳನ್ನು ಮೆರವಣಿಗೆ, ಆರತಿ ಮಾಡಿ ಗೌರವಿಸಲಾಗುತ್ತಿದೆ. ₹ 25 ಲಕ್ಷ ನೀಡಿದರೆ ಎಫ್‌ಡಿಎ ಪರೀಕ್ಷೆಯನ್ನೇ ಬರೆಸಿಕೊಡುವ ವ್ಯವಸ್ಥೆ ಇಂದಿದೆ ಎಂದು ಭ್ರಷ್ಟಾಚಾರದ ಆಳ ಅಗಲ ವಿವರಿಸಿದರು.

ನಮ್ಮಲ್ಲಿ ಉತ್ತಮ ಸಂವಿಧಾನವಿದ್ದರೂ ಸಮಾನ ರಕ್ಷಣೆ, ಸಮಾನ ಅವಕಾಶ ಇಲ್ಲವಾಗಿದೆ. ಇಂದಿನ ರಾಜಕೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಅಪಮೌಲ್ಯಗಳೇ ವಿಜೃಂಭಿಸುತ್ತಿವೆ. ಭ್ರಷ್ಟಾಚಾರವೇ ಕಾನೂನು ಆಗಿಬಿಟ್ಟಿವೆ. ಚುನಾವಣೆಗಳಲ್ಲಿ ಜಾತಿ, ಹಣ ಹಾಗೂ ತೋಳ್ಬಲ ಹೆಚ್ಚಿದೆ. ಮತದಾರರು ಭ್ರಷ್ಟರಾದರೆ ನಾಯಕರೂ ಲಂಚಕೋರರಾಗುತ್ತಾರೆ ಎಂದರು ಹೇಳಿದರು.

ಸ್ಪರ್ಧೆ ಇಲ್ಲದ ಏಕೈಕ ಕ್ಷೇತ್ರ ರಾಜಕೀಯ. ಒಬ್ಬ ಶಾಸಕ ತೀರಿಕೊಂಡರೆ ಆತನ ಅನಕ್ಷರಸ್ಥ ಪತ್ನಿಗೆ ಟಿಕೆಟ್ ನೀಡಲಾಗುತ್ತಿದೆ. ಅವರನ್ನೇ ಮಂತ್ರಿ ಮಾಡುವ ವ್ಯವಸ್ಥೆ ಇದೆ. ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ರಾಜಕಾರಣಿಗಳು ಬಳಸಿದ ಪದ ಬಳಕೆ ಗಮನಿಸಿದರೆ ಬೇಸರವಾಗುತ್ತದೆ ಎಂದು ವಿಷಾದಿಸಿದರು.

ವಿದ್ಯಾರ್ಥಿಗಳು ಜೀವನದಲ್ಲಿ ದಕ್ಷತೆ, ಸಚ್ಚಾರಿತ್ರೃ, ಬದ್ಧತೆ, ಧೈರ್ಯ ಹಾಗೂ ಕರುಣಾ ಮನೋಭಾವಗಳನ್ನು ರೂಢಿಸಿಕೊಳ್ಳಬೇಕು. ಕೆಲವೆ ಅಂಕಗಳಿಂದ ಹಿನ್ನಡೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಅಧೀರರು ಆಗಬಾರದು. ಸೋಲನ್ನೆ ಮೆಟ್ಟಿ ನಿಲ್ಲಬೇಕು. ಪಾಲಕರೂ ಕೂಡ ಮಕ್ಕಳಿಂದ ಕೇವಲ ಮಾರ್ಕ್ಸ್ ನಿರೀಕ್ಷಿಸದೆ, ಅವರ ಉತ್ತಮ ರಿಮಾರ್ಕ್‌ಗಳತ್ತಲೂ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ. ವಾಮದೇವಪ್ಪ, ‘ಎಂಜಿನಿಯರಿಂಗ್, ಉನ್ನತ ಪದವಿ, ಬ್ಯಾಂಕಿಂಗ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಕನ್ನಡದಲ್ಲಿ ಮಾಡುವ ಅವಕಾಶಗಳಿವೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಬಗ್ಗೆ ಕೀಳರಿಮೆ ಬೇಡ’ ಎಂದರು.

ಯಕ್ಷಗಾನ ಸಾಹಿತಿ ಜಯಲಕ್ಷ್ಮೀ ಕಾರಂತ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದವರಿಗೆ ಸರಸ್ವತಿ ಪುರಸ್ಕಾರ ಹಾಗೂ ಕನ್ನಡ ಭಾಷೆಯಲ್ಲಿ 120ಕ್ಕೂ ಹೆಚ್ಚು ಅಂಕ ಗಳಿಸಿದವರಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಕೆ.ಎಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್, ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ ಶೆಣೈ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT